* ಕಾಶ್ಮೀರಿ ಯುವಕ ಫೈಸಲ್‌ ವಾನಿಯಿಂದ ಕೃತ್ಯ * ನೂಪುರ್‌ ಶಿರಚ್ಛೇದ ವಿಡಿಯೋ ಮಾಡಿದ್ದ ಯೂಟ್ಯೂಬರ್‌ ಸೆರೆ* ಖಡ್ಗ ಝಳಪಿಸಿ ನೂಪುರ್‌ ಫೋಟೋ ತಲೆ ಕತ್ತರಿಸಿದ್ದ* ಬಳಿಕ ಮಾಡಿದ ಕೃತ್ಯಕ್ಕೆ ಕ್ಷಮೆಯಾಚನೆ

ಶ್ರೀನಗರ(ಜೂ.12): ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವರ ತಲೆ ಕತ್ತರಿಸಿ ಎಸೆಯುವ ರೀತಿಯ ವಿಡಿಯೋ ಬಿಡುಗಡೆ ಮಾಡಿದ್ದ ಕಾಶ್ಮೀರದ ಯುಟ್ಯೂಬರ್‌ ಫೈಸಲ್‌ ವಾನಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಪ್ರವಾದಿ ಕುರಿತ ನೂಪುರ್‌ ಹೇಳಿಕೆ ಖಂಡಿಸಿ ಅವರ ತಲೆ ಕಡಿದು ಎಸೆಯುವ ರೀತಿಯ ವಿಡಿಯೋವೊಂದನ್ನು ಫೈಸಲ್‌ ಮಾಡಿದ್ದ. ಈ ವಿಡಿಯೋದಲ್ಲಿ ಬರಿಮೈನಲ್ಲಿದ್ದ ವಾನಿ, ಖಡ್ಗ ಝಳಪಿಸಿ ನೂಪುರ್‌ ಶರ್ಮಾ ಚಿತ್ರದ ತಲೆ ಕತ್ತರಿಸಿದ್ದ. ಈ ವಿಡಿಯೋ ಭಾರೀ ವೈರಲ್‌ ಆಗಿತ್ತು ಹಾಗೂ ಭಯ ಹುಟ್ಟಿಸುವಂತಿದೆ ಎಂಬ ಆಕ್ಷೇಪ ಕೇಳಿಬಂದಿತ್ತು.

ಇದರ ಬೆನ್ನಲ್ಲೇ ಬೆಚ್ಚಿಬಿದ್ದ ವಾನಿ, ಶುಕ್ರವಾರ ಹಳೆಯ ವಿಡಿಯೋವನ್ನು ಅಳಿಸಿಹಾಕಿದ್ದೂ ಅಲ್ಲದೆ ಹೊಸ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾನೆ. ಅದರಲ್ಲಿ ‘ನಾನೊಬ್ಬ ಅಮಾಯಕ. ಇಸ್ಲಾಂ ನನಗೆ ಎಲ್ಲಾ ಧರ್ಮವನ್ನೂ ಗೌರವಿಸುವುದನ್ನು ಹೇಳಿಕೊಟ್ಟಿದೆ. ಯಾರ ಭಾವನೆಗೂ ಧಕ್ಕೆ ಮಾಡುವ ಉದ್ದೇಶ ನನಗಿರಲಿಲ್ಲ. ವಿಡಿಯೋ ಮಾಡಿದ್ದು ನಾನೇ ಆದರೂ, ಯಾರಿಗೂ ನೋವು ಮಾಡುವ ಉದ್ದೇಶ ನನಗಿರಲಿಲ್ಲ’ ಎಂದು ಹೇಳಿಕೊಂಡಿದ್ದಾನೆ.

ಆದರೆ ವಾನಿ ಪೋಸ್ಟ್‌ ಮಾಡಿದ್ದ ವಿಡಿಯೋ ‘ಸಾರ್ವಜನಿಕ ಶಾಂತಿಗೆ ಭಂಗ ತರುವಂತಿದೆ ಮತ್ತು ಜನರಲ್ಲಿ ಭೀತಿ ಹುಟ್ಟಿಸುವಂತಿದೆ’ ಎಂದಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ನೂಪುರ್‌ಗೆ ಜೂ.25ಕ್ಕೆ ವಿಚಾರಣೆಗೆ ಬುಲಾವ್‌

ಪ್ರವಾದಿ ಅವಹೇಳನ ಮಾಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರನ್ನು ಬಂಧಿಸುವಂತೆ ಆಗ್ರಹಿಸಿ ದೇಶಾದ್ಯಂತ ಭಾರೀ ಪ್ರತಿಭಟನೆಯಾದ ಬೆನ್ನಲ್ಲೇ ಮುಂಬೈ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೂ. 25ರಂದು ವಿಚಾರಣೆಗೆ ಹಾಜರಾಗುವಂತೆ ನೂಪುರ್‌ಗೆ ಶನಿವಾರ ಸಮನ್ಸ್‌ ಜಾರಿ ಮಾಡಿದ್ದಾರೆ.

 ಕಟ್ಟೆಚ್ಚರ ವಹಿಸಿ: ಪೊಲೀಸರಿಗೆ ಕೇಂದ್ರ ಸೂಚನೆ

 ಪ್ರವಾದಿ ಅವಹೇಳನ ಮಾಡಿದ ನೂಪುರ್‌ ಶರ್ಮಾ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆ, ಹಿಂಸಾಚಾರ ನಡೆದ ಬೆನ್ನಲ್ಲೇ ಗೃಹ ಸಚಿವಾಲಯವು ಕಟ್ಟೆಚ್ಚರ ವಹಿಸುವಂತೆ ಎಲ್ಲ ರಾಜ್ಯಗಳ ಪೊಲೀಸರಿಗೆ ಸೂಚಿಸಿದೆ.

ಅಲ್ಲದೆ, ‘ಗಲಭೆಯ ವೇಳೆ ಪೊಲೀಸರ ಮೇಲೂ ದಾಳಿ ನಡೆಯುವ ಸಾಧ್ಯತೆಯಿರುವುದರಿಂದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೊಲೀಸರು ಹಾಗೂ ಅರೆಸೇನಾ ಪಡೆಗಳು ಸನ್ನದ್ಧ ಸ್ಥಿತಿಯಲ್ಲಿರಬೇಕು’ ಎಂದು ನಿರ್ದೇಶಿಸಿದೆ.

‘ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಭಾಷಣ ಮಾಡುವ ವ್ಯಕ್ತಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್‌ ಇಲಾಖೆಗೆ ಈಗಾಗಲೇ ಸೂಚಿಸಲಾಗಿದೆ’ ಎಂದು ಗೃಹ ಅಧಿಕಾರಿಗಳು ಹೇಳಿದ್ದಾರೆ.