‘ಜಮ್ಮು-ಕಾಶ್ಮೀರದಲ್ಲಿ ಉಗ್ರ ಸಂಘಟನೆಗಳು ಕಾರ್ಯತಂತ್ರವನ್ನು ಬದಲಿಸಿವೆ. ಭದ್ರತಾ ಪಡೆಗಳಿಗೆ ಸಂದೇಹ ಬಾರದೇ ಇರಲಿ ಎಂದು ಈ ಹಿಂದೆ ಯಾವುದೇ ಅಪರಾಧ ದಾಖಲೆ ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಯಲ್ಲಿ ತೊಡಗಿರದ ಯುವಕರನ್ನು ಈಗ ಅವು ನೇಮಕ ಮಾಡಿಕೊಳ್ಳುತ್ತಿವೆ’ ಎಂಬ ಬೆಚ್ಚಿಬೀಳಿಸುವ ವಿಷಯ ಬೆಳಕಿಗೆ ಬಂದಿದೆ.
ಶ್ರೀನಗರ : ‘ಜಮ್ಮು-ಕಾಶ್ಮೀರದಲ್ಲಿ ಉಗ್ರ ಸಂಘಟನೆಗಳು ಕಾರ್ಯತಂತ್ರವನ್ನು ಬದಲಿಸಿವೆ. ಉಗ್ರ ಚಟುವಟಿಕೆಯಲ್ಲಿ ನಿರತರಾದವರ ಮೇಲೆ ಭದ್ರತಾ ಪಡೆಗಳಿಗೆ ಸಂದೇಹ ಬಾರದೇ ಇರಲಿ ಎಂದು ಈ ಹಿಂದೆ ಯಾವುದೇ ಅಪರಾಧ ದಾಖಲೆ ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಯಲ್ಲಿ ತೊಡಗಿರದ ಯುವಕರನ್ನು ಈಗ ಅವು ನೇಮಕ ಮಾಡಿಕೊಳ್ಳುತ್ತಿವೆ’ ಎಂಬ ಬೆಚ್ಚಿಬೀಳಿಸುವ ವಿಷಯ ಬೆಳಕಿಗೆ ಬಂದಿದೆ.
‘ಈ ಹೊಸ ತಂತ್ರವು ಈ ಹಿಂದಿನ ಕಾರ್ಯತಂತ್ರಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ, ಇತ್ತೀಚಿನ ಟೆರರ್ ಡಾಕ್ಟರ್ ಮಾಡ್ಯೂಲ್‌ನಿಂದ ಈ ವಿಷಯ ಬೆಳಕಿಗೆ ಬಂದಿದೆ’ ಎಂದು ಭಾನುವಾರ ಅಧಿಕಾರಿಗಳು ಹೇಳಿದ್ದಾರೆ.
‘ಫರೀದಾಬಾದ್‌ನ ಅಲ್ ಫಲಾ ವೈದ್ಯಕೀಯ ಕಾಲೇಜಿನಲ್ಲಿ ಉಗ್ರ ಚಟುವಟಿಕೆ ನಡೆಸಿದ ಪ್ರಕರಣದ ಬಂಧಿತ ಕಾಶ್ಮೀರಿಗಳಾದ ಡಾ। ಅದಿಲ್ ರಾಥರ್, ಅವನ ಸಹೋದರ ಡಾ. ಮುಜಫ್ಫರ್ ರಾಥರ್ ಮತ್ತು ಡಾ. ಮುಜಮ್ಮಿಲ್ ಗನಿ ಅವರು ಈ ಹಿಂದೆ ಯಾವುದೇ ಕ್ರಿಮಿನಲ್ ದಾಖಲೆ ಹೊಂದಿಲ್ಲ ಅಥವಾ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಈ ಮೂಲಭೂತವಾದಿ ಯುವಕರ ಕುಟುಂಬ ಸದಸ್ಯರಿಗೂ ಸಹ ಯಾವುದೇ ಪ್ರತ್ಯೇಕತಾವಾದಿ ಅಥವಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧವಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದಲ್ಲದೆ, ‘ದಿಲ್ಲಿ ಕೆಂಪುಕೋಟೆ ಹೊರಗೆ ನ.10ಕ್ಕೆ ಕಾರು ಬಾಂಬ್ ಸ್ಫೋಟಿಸಿದ ಡಾ। ಉಮರ್ ನಬಿಗೂ ಸಹ ಯಾವುದೇ ಅಪರಾಧ ಇತಿಹಾಸ ಇರಲಿಲ್ಲ. ಅವರ ಕುಟುಂಬ ಕೂಡ ಈ ವಿಷಯದಲ್ಲಿ ನಿಷ್ಕಳಂಕವಾಗಿತ್ತು’ ಎಂದು ಗೊತ್ತಾಗಿದೆ.
ಕಾಶ್ಮೀರ ಅಥವಾ ಪಾಕಿಸ್ತಾನದ ಗಡಿಯಾಚೆಯಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ನಿರ್ವಾಹಕರು (ಹ್ಯಾಂಡ್ಲರ್‌ಗಳು) ಯಾವುದೇ ಹಿಂದಿನ ಕ್ರಿಮಿನಲ್ ದಾಖಲೆಗಳಿಲ್ಲದವರನ್ನು ಉಗ್ರ ಚಟುವಟಿಕೆಗೆ ಆಕರ್ಷಿಸುವ ತಂತ್ರ ಅನುರಿಸುತ್ತಿದ್ದಾರೆ. ವೈದ್ಯರು ಉಗ್ರ ಚಟುವಟಿಕೆ ನಡೆಸುತ್ತಾರೆ ಎಂದು ನಂಬುವುದು ಯಾರಿಗೂ ಅಸಾಧ್ಯ. ಆರಂಭದಿಂದಲೇ ಇವರ ಚಟುವಟಿಕೆ ಮೇಲೆ ಯಾವುದೇ ಅನುಮಾನ ಇರಲಿಲ್ಲ’ ಎಂದು ಅಧಿಕಾರಿ ಹೇಳಿದ್ದಾರೆ.
1 ವರ್ಷದಿಂದ ಆತ್ಮಹತ್ಯಾ ಬಾಂಬರ್ ತಯಾರಿ!
ನವದೆಹಲಿ/ಶ್ರೀನಗರ : ದೆಹಲಿಯ ಕೆಂಪುಕೋಟೆ ಎದುರು ಸಂಭವಿಸಿದ ಭೀಕರ ಕಾರ್ ಸ್ಫೋಟಕ್ಕೆ ಕಾರಣವಾದ ‘ಟೆರರ್ ಡಾಕ್ಟರ್’ಗಳ ಸಮೂಹವು ಕಳೆದೊಂದು ವರ್ಷದಿಂದ ಆತ್ಮಹತ್ಯಾ ಬಾಂಬರ್‌ಗಳನ್ನು ಸಿದ್ಧಪಡಿಸುತ್ತಿತ್ತು. ಕೆಂಪುಕೋಟೆ ಹೊರಗೆ ಸ್ಫೋಟ ನಡೆಸಿದ ಡಾ। ಉಮರ್ ನಬಿಯೇ ಆತ್ಮಹತ್ಯಾ ಬಾಂಬ್ ದಾಳಿಯ ಮೂಲ ಪ್ರತಿಪಾದಕ ಎಂಬ ಆಘಾತಕಾರಿ ಮಾಹಿತಿ ತನಿಖೆ ವೇಳೆ ಬಯಲಾಗಿದೆ.ದೆಹಲಿ ಸ್ಫೋಟಕ್ಕೆ ನಂಟಿರುವ ಫರೀದಾಬಾದ್ ಕಾಲೇಜಿನ ವೈದ್ಯರನ್ನು ಈಗಾಗಲೇ ಬಂಧಿಸಲಾಗಿದೆ. ಅವರ ವಿಚಾರಣೆ ವೇಳೆ ದಕ್ಷಿಣ ಕಾಶ್ಮೀರದ ಜಾಸಿರ್ ಅಲಿಯಾಸ್ ದಾನಿಷ್ ಎಂಬಾತನ ಹೆಸರು ಬೆಳಕಿಗೆ ಬಂದಿತ್ತು. ಈಗ ಇದೇ ದಾನಿಷ್‌ನನ್ನು ಬಂಧಿಸಿದಾಗ ಆತ್ಮಹತ್ಯಾ ಬಾಂಬ್ ಸಂಚಿನ ಸವಿಸ್ತಾರ ಮಾಹಿತಿ ನೀಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ
‘ರಾಜಕೀಯಶಾಸ್ತ್ರದಲ್ಲಿ ಪದವಿ ಪಡೆದಿದ್ದ ನಾನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕುಲ್ಗಾಂನ ಮಸೀದಿಯೊಂದರಲ್ಲಿ ಉಗ್ರ ವೈದ್ಯರ ಗುಂಪಿನೊಂದಿಗೆ ಸಂಪರ್ಕಕ್ಕೆ ಬಂದಿದ್ದೆ. ಬಳಿಕ ನನ್ನನ್ನು ಹರ್ಯಾಣದ ಫರೀದಾಬಾದ್‌ನಲ್ಲಿರುವ ಅಲ್-ಫಲಾ ವಿವಿ ಸನಿಹದ ಬಾಡಿಗೆ ಮನೆಗೆ ಕರೆತರಲಾಗಿತ್ತು. ನನ್ನನ್ನು ಜೈಷ್ ಸಂಘಟನೆಗೆ ಸಹಕಾರ ನೀಡಲು (ಓವರ್‌ಗ್ರೌಂಡ್ ವರ್ಕರ್) ನೇಮಿಸಿಕೊಳ್ಳಲು ವೈದ್ಯರು ಬಯಸಿದ್ದರು.
ಬ್ರೈನ್‌ವಾಷ್ ಮಾಡಿ ತರಬೇತಿ
ಈ ವೇಳೆ ಡಾ। ಉಮರ್ ನನಗೆ ಹಲವು ತಿಂಗಳುಗಳ ಕಾಲ ಆತ್ಮಹತ್ಯಾ ದಾಳಿಕೋರನಾಗುವಂತೆ ಬ್ರೈನ್‌ವಾಷ್ ಮಾಡಿ ತರಬೇತಿ ನೀಡಿದ್ದ’ ಎಂದು ದಾನಿಷ್ ಹೇಳಿದ್ದಾನೆ.‘ಆದರೆ ಬಳಿಕ ಇಸ್ಲಾಂ ಧರ್ಮದಲ್ಲಿ ಆತ್ಮಹತ್ಯೆ ನಿಷಿದ್ಧವಾಗಿದೆ ಎಂಬ ಅರಿವಾಯಿತು. ಜತೆಗೆ ನನ್ನ ಆರ್ಥಿಕ ಸ್ಥಿತಿಯೂ ಉತ್ತಮವಾಗಿರದ ಕಾರಣ ತ್ಮಾಹುತಿ ದಾಳಿಕೋರನಾಗಲು ಏಪ್ರಿಲ್‌ನಲ್ಲಿ ನಿರಾಕರಿಸಿದೆ’ ಎಂದು ದಾನಿಷ್ ಬಾಯಿಬಿಟ್ಟಿದ್ದಾನೆ.
ಈ ಮಾಹಿತಿ ಹೊರಬೀಳುತ್ತಿದ್ದಂತೆ, ತನಿಖಾಧಿಕಾರಿಗಳ ಗಮನ ಆತ್ಮಹತ್ಯಾ ಬಾಂಬರ್‌ಗಳ ಹುಡುಕಾಟದ ಕಡೆಗೂ ತಿರುಗಿದೆ.
