Asianet Suvarna News Asianet Suvarna News

Kashmirದಲ್ಲಿ ನಿಲ್ಲದ ಪಂಡಿತರ ನರಮೇಧ: 2019ರ ನಂತರ 19 ಉದ್ದೇಶಿತ ಹತ್ಯೆ

ಕಾಶ್ಮೀರಿ ಹಿಂದೂಗಳಲ್ಲಿ ಮತ್ತೆ ಆತಂಕವುಂಟಾಗಿದೆ. ಇದಕ್ಕೆ ಕಾರಣ ಮಮೊನ್ನೆಯಷ್ಟೇ ಮತ್ತೊಬ್ಬ ಕಾಶ್ಮೀರಿ ಪಂಡಿತನ ಹತ್ಯೆಯಾಗಿದೆ. ಕಾಶ್ಮೀರದಲ್ಲಿ ಪಂಡಿತರ ನರಮೇಧ ನಿಲ್ಲುತ್ತಿಲ್ಲವಾದ್ದರಿಂದ ಉಗ್ರರ ಅಟಾಟೋಪಕ್ಕೆ ಕೊನೆಯೇ ಇಲ್ಲವೇ ಎಂಬ ಚಿಂತೆಯೂ ಹಲವರಲ್ಲಿ ಮೂಡುತ್ತಿದೆ. 

kashmir pandits killing not stopping in jammu and kashmir article ash
Author
First Published Oct 17, 2022, 10:36 AM IST

ಜಮ್ಮು-ಕಾಶ್ಮೀರದಲ್ಲಿ ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನು ಉಗ್ರರು ಶನಿವಾರ ಗುಂಡಿಕ್ಕಿ ಭೀಕರವಾಗಿ ಹತ್ಯೆಗೈದಿದ್ದಾರೆ. ಸರ್ಕಾರ ಪಂಡಿತರಿಗೆ ಸುರಕ್ಷತೆಯ ಆಶ್ವಾಸನೆ ನೀಡುತ್ತಿದ್ದರೂ ಮತ್ತೆ ಕಾಶ್ಮೀರಿ ಪಂಡಿತರ ‘ಉದ್ದೇಶಪೂರ್ವಕ ಹತ್ಯೆ’ಗಳ ಸರಣಿ ಮುಂದುವರೆದಿದೆ. ಉಗ್ರಾಂತಕಕ್ಕೆ ನಲುಗಿ ಸಾಮೂಹಿಕವಾಗಿ ಗುಳೆ ಹೋಗಿದ್ದ ಪಂಡಿತರು ಕೇಂದ್ರ ಸರ್ಕಾರದ ಪ್ರಯತ್ನಗಳ ಫಲವಾಗಿ ಮತ್ತೆ ಕಾಶ್ಮೀರದತ್ತ ಮುಖ ಮಾಡುತ್ತಿರುವಾಗಲೇ ಇಂತಹ ಘಟನೆಗಳು ಆರಂಭವಾಗಿ, ಮತ್ತೆ ಪಂಡಿತರದಲ್ಲಿ ಭೀತಿ ಸೃಷ್ಟಿಸುತ್ತಿವೆ. ಈ ನಿಟ್ಟಿನಲ್ಲಿ ಕಾಶ್ಮೀರಿ ಪಂಡಿತರ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.

ಕಾಶ್ಮೀರಿ ಪಂಡಿತರು ಅಂದರೆ ಯಾರು?
ಕಾಶ್ಮೀರಿ ಪಂಡಿತರು ಎಂದರೆ ಕಾಶ್ಮೀರಿ ಹಿಂದುಗಳು. ಇವರು ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮಧ್ಯಕಾಲೀನ ಯುಗದ ಮುಸ್ಲಿಂ ಆಳ್ವಿಕೆಯ ವೇಳೆಯಲ್ಲಿ ಕಾಶ್ಮೀರದ ಬಹುತೇಕ ಜನಸಂಖ್ಯೆ ಇಸ್ಲಾಂ ಧರ್ಮಕ್ಕೆ ಮತಾಂತರವಾದರೂ ಹಿಂದುಗಳಾಗಿಯೇ ಉಳಿದ ಸಮುದಾಯವಿದು. 1990ರ ದಶಕದಲ್ಲಿ ಕಾಶ್ಮೀರದಲ್ಲಿ ಇಸ್ಲಾಮಿಕ್‌ ಉಗ್ರಾಂತಕ ಹೆಚ್ಚಿದಾಗ ಇವರಲ್ಲಿ ಬಹುತೇಕರು ಸಾಮೂಹಿಕವಾಗಿ ಸ್ಥಳಾಂತರ ಹೊಂದಿದ್ದರು.

ಇದನ್ನು ಓದಿ: ಜಮ್ಮು ಕಾಶ್ಮೀರದಲ್ಲಿ ಮತ್ತೊಬ್ಬ Kashmiri Pandit ಹತ್ಯೆ: ಉಗ್ರರಿಂದ ದುಷ್ಕೃತ್ಯ

ಏಕೆ, ಯಾವಾಗ ಶುರುವಾಯ್ತು ನರಮೇಧ?
1980-90ರ ದಶಕದಲ್ಲಿ ಕಾಶ್ಮೀರಿ ಕಣಿವೆಯಲ್ಲಿ ಇಸ್ಲಾಮಿಕ್‌ ಮೂಲಭೂತವಾದಿ ಉಗ್ರರು ಕಾಶ್ಮೀರಿ ಪಂಡಿತರ ನರಮೇಧ ಆರಂಭಿಸಿದರು. ಜನವರಿ 19, 1990ರಂದು ಕಾಶ್ಮೀರದ ಮಸೀದಿಯು ಕಾಶ್ಮೀರಿ ಪಂಡಿತರು ‘ಕಾಫಿರ್‌’ (ನಾಸ್ತಿಕರು) ಹೀಗಾಗಿ ಅವರು ಕಾಶ್ಮೀರವನ್ನು ಬಿಡಬೇಕು, ಇಲ್ಲವೇ ಇಸ್ಲಾಂಗೆ ಪರಿವರ್ತನೆಯಾಗಬೇಕು ಅಥವಾ ಸಾಯಬೇಕು ಎಂದು ಘೋಷಣೆ ಹೊರಡಿಸಿತು. ಕಾಶ್ಮೀರಿ ಮುಸ್ಲಿಮರಿಗೆ ಪಂಡಿತರ ಮನೆಗಳಿಗೆ ಹೋಗಿ ಅವರನ್ನು ಇಸ್ಲಾಂಗೆ ಪರಿವರ್ತನೆ ಮಾಡಿಸಲು ಅಥವಾ ಹತ್ಯೆ ಮಾಡಲು ನಿರ್ದೇಶಿಸಲಾಗಿತ್ತು. ಈ ವೇಳೆಯಲ್ಲಿ ಬಹುತೇಕ ಪಂಡಿತರು ಕಾಶ್ಮೀರವನ್ನು ಬಿಟ್ಟು ತೆರಳಿದರು. ಹಲವು ಲೇಖಕರ ಪ್ರಕಾರ ಕಾಶ್ಮೀರದಲ್ಲಿದ್ದ ಸುಮಾರು 1.4 ಲಕ್ಷ ಪಂಡಿತರಲ್ಲಿ 1 ಲಕ್ಷ ಜನರು ಸಾಮೂಹಿಕವಾಗಿ ಗುಳೆ ಹೋಗಿದ್ದರು.

ನೂರಾರು ಪಂಡಿತರ ಹತ್ಯೆ
1989ರಿಂದ ಸುಮಾರು 219ಕ್ಕೂ ಹೆಚ್ಚು ಪಂಡಿತರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ ಎನ್ನಲಾಗುತ್ತದೆ. ಹತ್ಯೆಯಾದವರ ಸಂಖ್ಯೆ ನಿಖರವಾಗಿ ತಿಳಿಯದಿದ್ದರೂ ಉಗ್ರರಿಗೆ ಬಲಿಯಾದವರ ಪಂಡಿತರ ಸಂಖ್ಯೆ ಸರ್ಕಾರಿ ಅಂಕಿಅಂಶಗಳಲ್ಲಿ ದಾಖಲಿಸಿದ್ದಕ್ಕಿಂತಲೂ ಬಹುಪಾಲು ಹೆಚ್ಚಿದೆ ಎಂದು ಕೆಲವು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಮತ್ತೆ ಸಮರ ಸಾರಿದ ಕೇಂದ್ರ ಸರ್ಕಾರ; ಜಮ್ಮು ಕಾಶ್ಮೀರದಲ್ಲಿ NIA Raid

ನಿಂತಿದ್ದ ಹತ್ಯೆಗಳು ಈಗ ಮತ್ತೆ ಶುರು ಆಗಿದ್ದು ಏಕೆ?
ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ಕಾಶ್ಮೀರದ ಸಮಸ್ಯೆಗಳನ್ನು ಸುಧಾರಣೆ ಮಾಡಲು ಹಾಗೂ ಸಾಮೂಹಿಕವಾಗಿ ಗುಳೆ ಹೋದ ಪಂಡಿತರು ಮತ್ತೆ ರಾಜ್ಯಕ್ಕೆ ಮರಳಲು ಸಾಕಷ್ಟುಕ್ರಮವನ್ನು ಕೈಗೊಂಡಿತು. ಈ ನಿಟ್ಟಿನಲ್ಲಿ ಮೊದಲನೇ ಹೆಜ್ಜೆಯಾಗಿ ಅಕ್ಟೋಬರ್‌ 5, 2019 ರಂದು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ಹಿಂಪಡೆದುಕೊಂಡಿತು. ಜಮ್ಮು-ಕಾಶ್ಮೀರವನ್ನು ವಿಭಜಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಲಾಯಿತು. 370ನೇ ವಿಧಿ ರದ್ದಾದ ಬಳಿಕ ಕಾಶ್ಮೀರದ ಪ್ರತ್ಯೇಕ ಸಂವಿಧಾನ ರದ್ದಾಗಿ ಹೊರಗಿನವರಿಗೂ ಅಲ್ಲಿ ಭೂಮಿ ಕೊಳ್ಳಲು ಅವಕಾಶ ಸಿಕ್ಕಿತು. ಅಲ್ಲದೇ ಕಣಿವೆ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳು ಆರಂಭವಾದವು.

ಅಲ್ಲದೇ ಸಾಮೂಹಿಕವಾಗಿ ಗುಳೆ ಹೋದ ಕಾಶ್ಮೀರಿ ಪಂಡಿತರು ಮತ್ತೆ ರಾಜ್ಯಕ್ಕೆ ಮರಳಲು ಸಾಕಷ್ಟುಕ್ರಮ ಕೈಗೊಳ್ಳಲಾಯಿತು. ಪಂಡಿತರಿಗೆ ತಮ್ಮ ಪೂರ್ವಜರ ಮನೆಗೆ ಮರಳಲು ಅವಕಾಶ, ಮನೆ ರಿಪೇರಿಗಾಗಿ ಪರಿಹಾರ ಧನ ಒದಗಿಸಲಾಯಿತು. ಕಾಶ್ಮೀರಿ ವಲಸಿಗ ಕುಟುಂಬಕ್ಕೆ ನೀಡುವ ಪರಿಹಾರ ಧನವನ್ನು 13,000 ರೂ. ಗೆ ಹೆಚ್ಚಿಸಲಾಯಿತು. ಅಲ್ಲದೆ ಪ್ರಧಾನಮಂತ್ರಿ ಪ್ಯಾಕೇಜ್‌ ಅಡಿಯಲ್ಲಿ 6,000 ಪಂಡಿತರಿಗೆ ಉದ್ಯೋಗವನ್ನೂ ನೀಡಲಾಯಿತು. ಸರ್ಕಾರದ ಈ ಎಲ್ಲ ಕ್ರಮಗಳಿಂದ ಉಗ್ರವಾದಿಗಳಿಗೆ ತೀವ್ರ ಹಿನ್ನಡೆಯಾಯಿತು. ಈ ನಿಟ್ಟಿನಲ್ಲಿ ಮರಳುತ್ತಿರುವ ಪಂಡಿತರಲ್ಲಿ ಮತ್ತೆ ಭೀತಿ ಸೃಷ್ಟಿಸಲು ಪಂಡಿತರ ಉದ್ದೇಶಪೂರ್ವಕ ಹತ್ಯೆಯನ್ನು ಮತ್ತೆ ಆರಂಭಿಸಲಾಗಿದೆ.

ಇದನ್ನೂ ಓದಿ: ಶ್ರೀನಗರದಲ್ಲಿ ಭಯೋತ್ಪಾದಕರ ದಾಳಿಗೆ ಕಾಶ್ಮೀರಿ ಪಂಡಿತ್‌ ಬಲಿ, ಮತ್ತೊಬ್ಬನಿಗೆ ಗಂಭೀರ ಗಾಯ

2019ರ ನಂತರ 19 ಉದ್ದೇಶಿತ ಹತ್ಯೆ
2019ರ ನಂತರ 19ಕ್ಕೂ ಹೆಚ್ಚು ಉದ್ದೇಶಪೂರ್ವಕ ಹತ್ಯೆಗಳು ನಡೆದಿದ್ದು ಅವರಲ್ಲಿ ಕಾಶ್ಮೀರಿ ಪಂಡಿತರು ಸೇರಿದ್ದಾರೆ.

1. ಏ. 13ರಂದು ಸುರಿಂದರ್‌ ಕುಮಾರ್‌ ಸಿಂಗ್‌ ಅವರನ್ನು ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ವೃತ್ತಿಯಲ್ಲಿ ಡ್ರೈವರ್‌ ಆಗಿದ್ದ ಇವರು ರಜಪೂತ ಸಮುದಾಯಕ್ಕೆ ಸೇರಿದ್ದರು. ಲಷ್ಕರ್‌-ಎ- ಇಸ್ಲಾಂ ಎಂಬ ಉಗ್ರ ಸಂಘಟನೆ ಕಾಶ್ಮೀರಿ ಪಂಡಿತರು ಹಾಗೂ ಆರ್‌ಎಸ್‌ಎಸ್‌ ಏಜೆಂಟರಿಗೆ ಅದೇ ದಿನ ಬೆದರಿಕೆ ಪತ್ರವನ್ನೂ ಕಳಿಸಿತ್ತು.

ಇದನ್ನೂ ಓದಿ: ಕಾಶ್ಮೀರಿ ಪಂಡಿತ್‌ ರಾಹುಲ್‌ ಭಟ್‌ ಹತ್ಯೆ ಮಾಡಿದ್ದ ಲಷ್ಕರ್‌ ಭಯೋತ್ಪಾದಕನ ಕೊಂದು ಹಾಕಿದ ಸೇನೆ!

2. ಮೇ. 12ರಂದು ಕಂದಾಯ ಇಲಾಖೆಯ ತಹಶೀಲ್ದಾರ್‌ ಆಗಿರುವ ಕಾಶ್ಮೀರಿ ಹಿಂದು ರಾಹುಲ್‌ ಭಟ್‌ ಅವರನ್ನು ಬದ್ಗಾಂ ಜಿಲ್ಲೆಯಲ್ಲಿ ಉಗ್ರರು ಹತ್ಯೆಗೈದರು. ಕಚೇರಿಯ ಆವರಣದಲ್ಲೇ ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

3. ಮೇ. 17ರಂದು ಕಾಶ್ಮೀರದ ಬಾರಾಮುಲ್ಲಾದಲ್ಲಿ ಹೊಸದಾಗಿ ತೆರಯಲಾದ ವೈನ್‌ಶಾಪಿನಲ್ಲಿ ಬುರ್ಖಾಧಾರಿ ಉಗ್ರರು ಹ್ಯಾಂಡ್‌ ಗ್ರೆನೇಡ್‌ ಬಳಸಿ ದಾಳಿ ಮಾಡಿದರು. ಈ ದಾಳಿಯಲ್ಲಿ ರಂಜೀತ್‌ ಸಿಂಗ್‌ ಮೃತಪಟ್ಟರು. ಗೋವರ್ಧನ ಸಿಂಗ್‌, ರವಿ ಕುಮಾರ್‌ ಹಾಗೂ ಗೋವಿಂದ್‌ ಸಿಂಗ್‌ ಅವರು ಗಂಭೀರವಾಗಿ ಗಾಯಗೊಂಡಿದ್ದರು.

4. ಮೇ. 31ರಂದು ಕುಲ್ಗಾಂನ ಪ್ರೌಢಶಾಲಾ ಶಿಕ್ಷಕಿಯಾದ ರಜನೀ ಬಾಲಾ ಅವರನ್ನು ಶಾಲೆಯ ಹೊರಗಡೆಯೇ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ರಜನೀಬಾಲಾ ಉಗ್ರರ ಆತಂಕದ ಹಿನ್ನೆಲೆಯಲ್ಲಿ ತಮ್ಮನ್ನು ಬೇರೆಡೆ ವರ್ಗಾವಣೆ ಮಾಡಲು ಕೋರಿದ ಬೆನ್ನಲ್ಲೇ ಅವರ ಹತ್ಯೆ ನಡೆದಿತ್ತು.

5. ಜೂನ್‌ 2 ರಂದು ಕುಲ್ಗಾಂ ಜಿಲ್ಲೆಯಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಆಗಿರುವ ವಿಜಯ ಕುಮಾರ್‌ ಅವರನ್ನೂ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಬ್ಯಾಂಕಿನೊಳಗೆ ಉಗ್ರರು ನುಗ್ಗಿ ಅವರ ಹತ್ಯೆ ಮಾಡಿದ ಭೀಕರ ದೃಶ್ಯಗಳು ಸಿಸಿಟೀವಿಯಲ್ಲಿ ಸೆರೆಯಾಗಿದ್ದವು.

6. ಆಗಸ್ಟ್‌ 13 ರಂದು ಬಿಹಾರದ 19 ವರ್ಷದ ಕಾರ್ಮಿಕ ಮೊಹಮ್ಮದ್‌ ಅಮ್ರೇಜ್‌ನನ್ನು ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಹತ್ಯೆ ಮಾಡಲಾಗಿತ್ತು.

ಮೊನ್ನೆ ಮತ್ತೊಬ್ಬ ಪಂಡಿತನ ಹತ್ಯೆ
ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನು ಉಗ್ರರು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಿದ ಭೀಕರ ಘಟನೆ ಶೋಪಿಯಾನ್‌ನಲ್ಲಿ ವರದಿಯಾಗಿದೆ. ಈ ಮೂಲಕ ಮತ್ತೆ ಕಾಶ್ಮೀರಿ ಪಂಡಿತರ ‘ಉದ್ದೇಶಪೂರ್ವಕ ಹತ್ಯೆ’ ಸರಣಿ ಮುಂದುವರೆದಿದೆ. ಪೂರಣ್‌ ಕೃಷನ್‌ ಭಟ್‌ ಎಂಬುವವರೇ ಉಗ್ರರ ಗುಂಡಿಗೆ ಬಲಿಯಾದ ದುರ್ದೈವಿ. ಇವರನ್ನು ಅವರ ನಿವಾಸದ ಬಳಿಯಿರುವ ಹಣ್ಣಿನ ತೋಟಕ್ಕೆ ಹೋಗುತ್ತಿರುವಾಗ ಚೌಧರಿಗುಂಡ್‌ ಪ್ರದೇಶದಲ್ಲಿ ಹತ್ಯೆ ಮಾಡಲಾಗಿದೆ. ಕಾಶ್ಮೀರ ಫ್ರೀಡಂ ಫೈಟರ್‌ (ಕೆಎಫ್‌ಎಫ್‌) ಎಂಬ ಹೊಸ ಉಗ್ರ ಸಂಘಟನೆ ಈ ಘಟನೆಯ ಹೊಣೆ ಹೊತ್ತಿದೆ. ಒಬ್ಬನೇ ಉಗ್ರ ದಾಳಿ ಮಾಡಿದ್ದು ತನಿಖೆಯ ವೇಳೆ ಗೊತ್ತಾಗಿದೆ.

ಹತ್ಯೆ ಖಂಡಿಸಿ ಪಂಡಿತರ ಗುಳೆ ಬೆದರಿಕೆ
ಕಾಶ್ಮೀರದಲ್ಲಿ ಉದ್ದೇಶಪೂರ್ವಕ ಹತ್ಯೆ ಪ್ರಕರಣಗಳ ಸರಣಿ ಮುಂದುವರೆಯುತ್ತಿದ್ದಂತೆ ಪಂಡಿತರು ತಮ್ಮನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸದಿದ್ದರೆ ಸಾಮೂಹಿಕವಾಗಿ ಗುಳೆ ಹೋಗುವುದಾಗಿ ಸರ್ಕಾರಕ್ಕೆ ಬೆದರಿಕೆ ಒಡ್ಡಿದ್ದರು. ಕಾಶ್ಮೀರಿ ಹಿಂದೂಗಳ ಹತ್ಯೆಯನ್ನು ಖಂಡಿಸಿ ಕಳೆದ 6 ತಿಂಗಳಿನಿಂದಲೂ ಉದ್ಯೋಗಕ್ಕೆ ಗೈರು ಹಾಜರಾಗುವ ಮೂಲಕ ಬಹಿಷ್ಕಾರ ಹಾಕಿದ್ದರು. ‘ಪಂಡಿತರನ್ನು ಕಾಶ್ಮೀರಕ್ಕೆ ಮರಳಿ ಕರೆಸಿದ್ದು ಅವರ ಹತ್ಯೆ ಮಾಡಿಸುವ ಉದ್ದೇಶದಿಂದಲೇ?’ ಎಂಬ ಫಲಕಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ಕಾರ ಪಂಡಿತರಿಗೆ ಸೂಕ್ತ ರಕ್ಷಣೆ ಒದಗಿಸದೇ ಇದ್ದರೆ ಮತ್ತೊಮ್ಮೆ ಸಾಮೂಹಿಕ ಗುಳೆ ಹೋಗಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು. ಈ ನಿಟ್ಟಿನಲ್ಲಿ ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಜಮ್ಮುವಿನ ಸುರಕ್ಷಿತ ಸ್ಥಳಗಳಲ್ಲಿ ವರ್ಗಾವಣೆ ಮಾಡಲು ಲೆಫ್ಟಿನೆಂಟ್‌ ಗವರ್ನರ್‌ ಆದೇಶವನ್ನೂ ಹೊರಡಿಸಿದ್ದರು. ಆದರೂ ಹತ್ಯೆ ನಿಲ್ಲುತ್ತಿಲ್ಲ.

Follow Us:
Download App:
  • android
  • ios