ನವದೆಹಲಿ[ಫೆ.04]: ಕಾರವಾರದ ಸಂಸದ ಅನಂತ್ ಕುಮಾರ್ ಹೆಗ್ಡೆ ನೀಡಿರುವ ಗಾಂಧೀ ವಿರೋಧಿ ಹೇಳಿಕೆ ಸದ್ಯ ಭಾರೀ ವಿವಾದ ಹುಟ್ಟು ಹಾಕಿದೆ. ಸೋಶಿಯಲ್ ಮೀಡಿಯಾದಿಂದ ವೈರಲ್ ಆದ ಈ ವಿಚಾರ ಸದ್ಯ ಸಂಸತ್ತಿನ ಬಜೆಟ್ ಅಧಿವೇಶನದಲ್ಲೂ ಸದ್ದು ಮಾಡಿದೆ. ತಮ್ಮ ಸಂಸದನ ಈ ಹೇಳಿಕೆ ಒಂದೆಡೆ ಬಿಜೆಪಿ ಪಕ್ಷಕ್ಕೆ ಮುಜುಗರಕ್ಕೀಡು ಮಾಡಿದ್ದರೆ, ಅತ್ತ ಕಾಂಗ್ರೆಸ್ ಪಕ್ಷದ ನಾಯಕರು ಅನಂತ್ ಕುಮಾರ್ ಹೆಗ್ಡೆ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಹೆಗ್ಡೆ ಹೇಳಿಕೆಯಿಂದ ಪಿಎಂ ನರೇಂದ್ರ ಮೋದಿಯೂ ಗರಂ ಆಗಿದ್ದಾರೆ ಎನ್ನಲಾಗಿದೆ. ಆದರೆ ಇಷ್ಟೆಲ್ಲಾ ನಡೆದರೂ ಅನಂಮತ್ ಕುಮಾರ್ ಹೆಗ್ಡೆ ಮಾತ್ರ ತಾನು ಇಂತಹ ಹೇಳಿಕೆ ನೀಡಿಲ್ಲ ಎಂದೇ ಪಟ್ಟು ಹಿಡಿದಿದ್ದಾರೆ.

"

'ಮಹಾತ್ಮ ಗಾಂಧೀಜಿ ಅವಮಾನಿಸುವ ಬಿಜೆಪಿಗರು ರಾವಣನ ಮಕ್ಕಳು!'

ಹೌದು ಫೆ. 1 ರಂದು ಅತ್ತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಬಜೆಟ್ ಮಂಡಿಸುತ್ತಿದ್ದರೆ, ಇತ್ತ ಕೇಂದ್ರ ಮಾಜಿ ಸಚಿವ ಹಾಗೂ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಅವರು ನೀಡಿದ್ದ ಹೇಳಿಕೆಯೊಂದು ಭಾರೀ ವಿವಾದ ಸೃಷ್ಟಿಸಿದ್ದು, ದೇಶದಾದ್ಯಂತ ಟೀಕೆಗೀಡಾಗಿದೆ. ಅವರು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯನ್ನು ಸೋಗಲಾಡಿ ಎಂದಿದ್ದಾರೆ ಹೀಗಾಗಿ ಅವರು ಕ್ಷಮೆ ಯಾಚಿಸಬೇಕೆಂಬ ಕೂಗು ಎದ್ದಿದೆ. ಹೀಗಿರುವಾಗ ಅನಂತ್ ಕುಮಾರ್ ತಾನು ಕ್ಷಮೆ ಯಾಚಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಅನಂತ್ ಕುಮಾರ್ ಹೆಗ್ಡೆ 'ಗಾಂಧೀಜಿ ಬಗ್ಗೆ ಅವಮಾನದ ಹೇಳಿಕೆ ನೀಡಿಲ್ಲ. ನಾನು ಹೇಳದ ವಿಷಯದ ಬಗ್ಗೆ ಅನಗತ್ಯ ಚರ್ಚೆ ನಡೆಯುತ್ತಿದೆ. ನಾನು ಏನು ಹೇಳಿದ್ದೇನೋ ಆ ಹೇಳಿಕೆಗೆ ಈಗಲೂ ಬದ್ಧ. ನನ್ನ ಭಾಷಣದಲ್ಲಿ ಎಲ್ಲಿಯೂ ಗಾಂಧಿ ಹೆಸರು ಪ್ರಸ್ತಾಪಿಸಿಲ್ಲ. ಗಾಂಧಿ ಬಗ್ಗೆ ಏನು ಮಾತನಾಡಿದ್ದೇನೇ ತೋರಿಸಿ? ಗಾಂಧೀಜಿ ಬಗ್ಗೆ ಒಂದೇ ಒಂದು ಶಬ್ಧವನ್ನೂ ನಾನು ಮಾತನಾಡಿಲ್ಲ. ನನ್ನನ್ನು ಟೀಕಿಸುವವರು ಮೊದಲು ನನ್ನ ಭಾಷಣದ ವಿಡಿಯೋ ನೋಡಲಿ. ಸ್ವಾತಂತ್ರ್ಯ ಹೋರಾಟಗಾರರ ನಡುವಿನ ವಿರೋಧಾಭಾಸದ ಬಗ್ಗೆ ಪ್ರಸ್ತಾಪಿಸಿದ್ದೆ' ಎಂದಿದ್ದಾರೆ.

"

ಹೆಗ್ಡೆ ಹೇಳಿಕೆ ಟೀಕೆಗೆ ಗುರಿಯಾದ ಬೆನ್ನಲ್ಲೇ ಪ್ರಧಾನಿ ಮೋದಿಯೂ ಗರಂ ಆಗಿದ್ದಾರೆ. ಕ್ಷಮೆ ಯಾಚಿಸಲು ಸೂಚಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಹೀಗಿರುವಾಗ ಹೆಗ್ಡೆ ತಮ್ಮ ಮಾತಿಗೆ ಬದ್ಧರಾಗಿರ್ತಾರಾ? ಅಥವಾ ಕ್ಷಮೆ ಯಾಚಿಸ್ತಾರಾ? ಕಾದು ನೋಡಬೇಕಷ್ಟೇ.