Asianet Suvarna News Asianet Suvarna News

ದೆಹಲಿಯ ಕರ್ತವ್ಯಪಥದಲ್ಲಿ ಗಮನ ಸೆಳೆದ ಕರ್ನಾಟಕದ ಸ್ತಬ್ಧಚಿತ್ರ

ಗಣತಂತ್ರ ಪರೇಡಲ್ಲಿ ಆತ್ಮನಿರ್ಭರತೆ ಅನಾವರಣ, ದೆಹಲಿಯ ಕರ್ತವ್ಯಪಥದಲ್ಲಿ ಸೇನಾಶಕ್ತಿ ಪ್ರದರ್ಶನ, ದೇಶದ ವೈವಿಧ್ಯತೆ, ಸಂಸ್ಕೃತಿಯ ಮೆರವಣಿಗೆ. 

Karnatakas Tableau Caught Attention During Republic Day Celebration in New Delhi grg
Author
First Published Jan 27, 2023, 7:58 AM IST

ನವದೆಹಲಿ(ಜ.27):  ದೇಶದ ಸಂವಿಧಾನ ಅಸ್ತಿತ್ವಕ್ಕೆ ಬಂದ ಸ್ಮರಣಾರ್ಥ ಆಚರಿಸಲಾಗುವ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ಕರ್ತವ್ಯಪಥದಲ್ಲಿ ನಡೆದ ಭವ್ಯ ಮೆರವಣಿಗೆಯಲ್ಲಿ ಗುರುವಾರ ಸೇನೆಯ ಶಕ್ತಿ ಪ್ರದರ್ಶನಗೊಂಡಿತು. ಇದೇ ವೇಳೆ, ಮಿಲಿಟರಿ ಕ್ಷೇತ್ರದಲ್ಲಿ ಕಳೆದ ಕೆಲವೇ ವರ್ಷಗಳಲ್ಲಿ ಭಾರತ ಸಾಧಿಸಿರುವ ಆತ್ಮನಿರ್ಭರತೆ (ಸ್ವಾವಲಂಬಿತನ)ಯೂ ಅನಾವರಣಗೊಂಡಿತು. ಭಾರತದ ಶ್ರೀಮಂತ ಸಂಸ್ಕೃತಿ, ವೈವಿಧ್ಯತೆಯನ್ನು ಸಹಸ್ರಾರು ಜನರು ಕಣ್ತುಂಬಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸೇನಾ ಸ್ಮಾರಕಕ್ಕೆ ತೆರಳಿ, ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಮಾಡುವುದರೊಂದಿಗೆ 74ನೇ ಗಣರಾಜ್ಯೋತ್ಸವ ಸಮಾರಂಭ ಆರಂಭವಾಯಿತು. ಕರ್ತವ್ಯ ಪಥವಾಗಿ ನವೀಕರಣಗೊಂಡಿರುವ ರಾಜಪಥದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜವನ್ನು ಹಾರಿಸಿದರು. ಈ ವೇಳೆ, ಸ್ವದೇಶಿ ನಿರ್ಮಿತ 105 ಎಂಎಂ ಗನ್‌ ಬಳಸಿ ಕುಶಾಲತೋಪು ಹಾರಿಸಿ ಗೌರವ ಸಲ್ಲಿಸಲಾಯಿತು. ಸಾಮಾನ್ಯವಾಗಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ವಿದೇಶಿ ನಿರ್ಮಾಣದ 25- ಪೌಂಡರ್‌ ಗನ್‌ ಬಳಸಿ ಗೌರವ ವಂಚನೆ ನೀಡಲಾಗುತ್ತಿತ್ತು. ಆದರೆ ಭಾರತೀಯ ಗನ್‌ ಬಳಸಿದ್ದು ಇದೇ ಮೊದಲು.

Republic Day: ರಾಜಸ್ಥಾನಿ ಬಂದೇಜ್‌ ಟರ್ಬನ್‌ನಲ್ಲಿ ಮಿಂಚಿದ ಪ್ರಧಾನಿ ನರೇಂದ್ರ ಮೋದಿ!

ಈ ವರ್ಷದ ಕಾರ್ಯಕ್ರಮಕ್ಕೆ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತ್ತಾ ಅಲ್‌ ಸಿಸಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಷ್ಟ್ರಪತಿ, ಪ್ರಧಾನಿ ಜತೆಗೂಡಿ ಭಾರತದ ವೈಭವದ ಅನಾವರಣವನ್ನು ಈಜಿಪ್‌್ಟಅಧ್ಯಕ್ಷರು ಕಣ್ತುಂಬಿಕೊಂಡರು. ಗಣತಂತ್ರ ಪೆರೇಡ್‌ನಲ್ಲಿ ಈಜಿಪ್‌್ಟನ 144 ಸೈನಿಕರು ಕೂಡ ಪಾಲ್ಗೊಂಡಿದ್ದರು.

ಮೆರವಣಿಗೆಯಲ್ಲಿ ಇದೇ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ಸೇನಾ ಶಸ್ತ್ರಾಸ್ತ್ರಗಳನ್ನು ಮಾತ್ರವೇ ಪ್ರದರ್ಶಿಸಲಾಯಿತು. ಮುಖ್ಯ ಯುದ್ಧ ಟ್ಯಾಂಕ್‌ ಅರ್ಜುನ್‌, ನಾಗ್‌ ಮಿಸೈಲ್‌ ಸಿಸ್ಟಂ, ಕೆ-9 ವಜ್ರ ಗನ್‌ಗಳು ಗಮನಸೆಳೆದವು.
ಈ ಬಾರಿಯ ಗಣರಾಜ್ಯ ದಿನ ಧ್ಯೇಯವಾಕ್ಯ ‘ನಾರಿಶಕ್ತಿ’ಯಾಗಿತ್ತು. ಅದಕ್ಕೆ ಅನ್ವರ್ಥವಾಗುವಂತೆ ಆಕಾಶ್‌ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಲೆಫ್ಟಿನಂಟ್‌ ಚೇತನಾ ಶರ್ಮಾ ಅವರು ಮುನ್ನಡೆಸಿದರು. ಸೇನೆಯ ವಿವಿಧ ಪದಾತಿದಳಗಳು ಆಕರ್ಷಕ ಪಥಸಂಚಲನ ನಡೆಸಿದವು.

ಲಾಲ್ ಚೌಕ್‌ನಲ್ಲಿ ಗಣತಂತ್ರ ದಿನಾಚರಣೆ, 1990ರ ಬಳಿಕ ಮೊದಲ ಬಾರಿಗೆ ಅಂಗಡಿಗಳು ಓಪನ್!

ಕರ್ನಾಟಕದ್ದೂ ಸೇರಿದಂತೆ ಒಟ್ಟು 23 ಸ್ತಬ್ಧಚಿತ್ರಗಳು ನೆರೆದಿದ್ದವರ ಮನಸೂರೆಗೊಂಡವು. ಕರ್ತವ್ಯಪಥ, ಸೆಂಟ್ರಲ್‌ ವಿಸ್ತಾ ನಿರ್ಮಾಣ ಕಾಮಗಾರಿಯಲ್ಲಿ ಪಾಲ್ಗೊಂಡಿದ್ದ ಶ್ರಮಜೀವಿಗಳು, ಹಾಲು, ತರಕಾರಿ ಮಾರುವವರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಇದೇ ಮೊದಲ ಬಾರಿ ಮುಂದಿನ ಸಾಲಿನ ಆಸನವನ್ನು ಮೀಸಲಿಡಲಾಗಿತ್ತು. ಮೂವರು ಪರಮವೀರ ಚಕ್ರ, ಮೂವರು ಅಶೋಕ ಚಕ್ರ ಪುರಸ್ಕೃತರನ್ನು ಮೆರವಣಿಗೆ ಮಾಡಲಾಯಿತು.

ವಿಮಾನ ಕಾಣದೆ ಜನರಿಗೆ ನಿರಾಸೆ:

ಗಣರಾಜ್ಯೋತ್ಸವ ಸಮಾರಂಭದ ಪ್ರಮುಖ ಆಕರ್ಷಣೆಯಾದ ವಿಮಾನಗಳ ಹಾರಾಟವನ್ನು ಕಣ್ತುಂಬಿಕೊಳ್ಳಲು ಈ ಬಾರಿ ಆಗಲಿಲ್ಲ. ರಫೇಲ್‌, ಮಿಗ್‌-20, ಸುಖೋಯ್‌ ವಿಮಾನಗಳು ಪ್ರದರ್ಶನ ಆರಂಭಿಸಿದ ಕೂಡಲೇ ಜನರು ಮೊಬೈಲ್‌ಗಳಲ್ಲಿ ವಿಡಿಯೋ ಮಾಡಲು ಪ್ರಯತ್ನಪಟ್ಟರು. ಆದರೆ ದಟ್ಟಮಂಜು ಆವರಿಸಿದ್ದರಿಂದ ವಿಮಾನಗಳು ಕಾಣಲಿಲ್ಲ. ಬರೀ ಶಬ್ದವಷ್ಟೇ ಕೇಳಿಸಿತು. ಇದರಿಂದಾಗಿ ನೆರೆದಿದ್ದ ಜನರು ನಿರಾಶರಾದರು.

Follow Us:
Download App:
  • android
  • ios