ಬೆಂಗಳೂರು [ಡಿ.27]:  ಖಾಸಗಿ ಟ್ರಾವೆಲ್‌ ಏಜೆನ್ಸಿ ಮೂಲಕ ಇರಾಕ್‌ನ ಧಾರ್ಮಿಕ ಸ್ಥಳಗಳಿಗೆ ಪ್ರವಾಸಕ್ಕೆ ಹೋಗಿ ಏಜೆನ್ಸಿ ಮಾಲೀಕನಿಂದ ವಂಚನೆಗೆ ಒಳಗಾಗಿ ವಾಪಸ್‌ ಬರಲಾಗದೆ ತೊಂದರೆಯಲ್ಲಿದ್ದ ಯಾತ್ರಾರ್ಥಿಗಳು ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಧ್ಯ ಪ್ರವೇಶದಿಂದ ವಾಪಸ್‌ ಬಂದಿದ್ದಾರೆ.

ಏಜೆನ್ಸಿ ವಿರುದ್ಧ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಂ ಅವರು ಪೊಲೀಸ್‌ ಠಾಣೆಗೆ ದೂರು ನೀಡುತ್ತಿದ್ದಂತೆ ಅದರ ಮಾಲೀಕ 54 ಯಾತ್ರಾರ್ಥಿಗಳ ಪೈಕಿ 10 ಜನರು ವಾಪಸ್‌ ಬರಲು ವ್ಯವಸ್ಥೆ ಮಾಡಿದ್ದು, ಉಳಿದವರನ್ನು ಕರೆ ತರಲು ಕ್ರಮ ಕೈಗೊಳ್ಳಲಾಗಿದೆ.

ವಂಚನೆ ದೂರು:

ಇರಾಕ್‌ ದೇಶದ ಧಾರ್ಮಿಕ ಪವಿತ್ರ ಸ್ಥಳಗಳಿಗೆ ಪ್ರವಾಸ ಕರೆದೊಯ್ಯುವುದಾಗಿ ನಂಬಿಸಿ 54 ಮಂದಿಯಿಂದ .35 ಲಕ್ಷ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ಅಲ್ಪಸಂಖ್ಯಾತ ಆಯೋಗ ಖಾಸಗಿ ಟ್ರಾವೆಲ್‌ ಏಜೆನ್ಸಿ ಮಾಲೀಕನೊಬ್ಬನ ವಿರುದ್ಧ ಹಲಸೂರುಗೇಟ್‌ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿತ್ತು.

ಹಲಸೂರು ಗೇಟ್‌ನ ಅಲ್‌ ಫಜಿಲ್‌ ಟೂ​ರ್‍ಸ್ ಅಂಡ್‌ ಟ್ರಾವೆಲ್ಸ್‌ ಮಾಲೀಕ ಫಹೀಮ್‌ ಪಾಷಾ ವಿರುದ್ಧ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಂ ದೂರು ನೀಡಿದ್ದರು. ದೂರಿನ ಅನ್ವಯ ಎಫ್‌ಐಆರ್‌ ದಾಖಲಿಸಿದ ಪೊಲೀಸರು, ಇರಾಕ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಪ್ರವಾಸಿಗರಿಗೆ ದೇಶಕ್ಕೆ ಮರಳಲು ಕೂಡಲೇ ವ್ಯವಸ್ಥೆ ಕಲ್ಪಿಸುವಂತೆ ಪಾಷಾಗೆ ಸೂಚಿಸಿದ್ದಾರೆ. ಆಯೋಗದ ಮಧ್ಯಪ್ರವೇಶದಿಂದ 54 ಮಂದಿ ಪೈಕಿ 10 ಜನರು ಸುರಕ್ಷಿತವಾಗಿ ತಾಯ್ನಾಡಿಗೆ ಹಿಂತಿರುಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ನಡು ನೀರಿನಲ್ಲಿ ಕೈ ಬಿಟ್ಟಿದ್ದ:  ಇರಾಕ್‌ನ ಬಾಗ್ದಾದ್‌ನಲ್ಲಿ ಇಸ್ಲಾಂ ಧರ್ಮದ ಪವಿತ್ರ ಸ್ಥಳಗಳಿದ್ದು, ಪ್ರತಿ ವರ್ಷ ಹಜ್‌ ಯಾತ್ರೆಯಂತೆ ಇರಾಕ್‌ಗೆ ಕೂಡ ಮುಸ್ಲಿಂ ಸಮುದಾಯದವರು ಭೇಟಿ ನೀಡುತ್ತಾರೆ. ಅದರಂತೆ ಹಲಸೂರು ಗೇಟ್‌ನಲ್ಲಿ ಕಚೇರಿ ಹೊಂದಿರುವ ಅಲ್‌ ಫಜಿಲ್‌ ಟ್ರಾವೆಲ್ಸ್‌ ಮಾಲೀಕ ಪಾಷಾ, ಕಡಿಮೆ ವೆಚ್ಚದಲ್ಲಿ ಇರಾಕ್‌ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸ ಕರೆದುಕೊಂಡು ಹೋಗುವುದಾಗಿ ಸಮುದಾಯದ ಜನರಿಗೆ ಪ್ರಚಾರ ಮಾಡಿದ್ದ. ಬೆಂಗಳೂರು ಸುತ್ತಮುತ್ತಲಿನ ಜನರು ಪಾಷಾ ಮಾತಿಗೆ ಮರಳಾಗಿದ್ದರು ಎಂದು ಆಯೋಗದ ಅಧ್ಯಕ್ಷ ಅಜೀಂ ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆನಂತರ ಪಾಷಾ, ತಲಾ ಒಬ್ಬರಿಗೆ 65 ಸಾವಿರ ರು. ಪ್ಯಾಕೇಜ್‌ ಹಣ ನಿಗದಿಪಡಿಸಿದ್ದ. ಇದರಲ್ಲಿ ವಸತಿ, ಹೋಗಿ-ಬರುವ ವಿಮಾನ ಟಿಕೆಟ್‌ ಸೇರಿದಂತೆ ಪ್ರವಾಸದ ಎಲ್ಲ ಖರ್ಚು-ವೆಚ್ಚಗಳು ಒಳಗೊಂಡಿದ್ದವು. ಅದರಂತೆ 54 ಜನರಿಂದ 35.10 ಲಕ್ಷ ರು. ಹಣ ಸಂಗ್ರಹವಾಯಿತು. ಕೊನೆಗೆ ಬಾಗ್ದಾದ್‌ಗೆ ಪ್ರವಾಸಿಗರನ್ನು ಆತ ಕಳುಹಿಸಿದ. ಆದರೆ ಅವರಿಗೆ ಮರಳುವ ಟಿಕೆಟ್‌, ವಸತಿ, ಊಟೋಪಚಾರ ಹಾಗೂ ಸಾರಿಗೆ ಸೌಲಭ್ಯ ಕಲ್ಪಿಸದೆ ವಂಚಿಸಿದ್ದ. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನರು, ತಕ್ಷಣವೇ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಕರೆ ಮಾಡಿ ಸಹಾಯ ಕೋರಿದ್ದರು. ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿ ಜನರ ರಕ್ಷಣೆಗೆ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದೆ ಎಂದು ಅಬ್ದುಲ್‌ ಅಜೀಂ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಹಲಸೂರು ಗೇಟ್‌ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪಾಷಾ, ಪ್ರವಾಸಿಗರನ್ನು ಕರೆತರುವುದಾಗಿ ಪೊಲೀಸರಿಗೆ ಮುಂದೆ ಹೇಳಿಕೆ ನೀಡಿದ್ದಾನೆ. ಈ ಮಾತಿಗೆ ಒಪ್ಪಿ ಕಾಲಾವಕಾಶ ಕೊಡಲಾಗಿದೆ. ಮೊದಲ ಹಂತವಾಗಿ 10 ಮಂದಿ ಮರಳಿದ್ದು, ಇನ್ನುಳಿದವರನ್ನು ಕರೆತರಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.