ಬೆಂಗಳೂರು[ಫೆ.03]: ಕೇಂದ್ರ ಸರ್ಕಾರ ಆಯವ್ಯಯದಲ್ಲಿ ಘೋಷಣೆ ಮಾಡಿರುವ ರಾಜಧಾನಿಯ ನಾಗರಿಕರ ಬಹುದಿನಗಳ ಕನಸಾಗಿದ್ದ ‘ಸಬ್‌ ಅರ್ಬನ್‌ ರೈಲು’ ಯೋಜನೆಯನ್ನು ಮೂರು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಭಾನುವಾರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಬ್‌ ಅರ್ಬನ್‌ ರೈಲು ಜಾಲ 148.17 ಕಿ.ಮೀ ಉದ್ದವಿದ್ದು, ನಾಲ್ಕು ಕಾರಿಡಾರ್‌ಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಕೆಂಗೇರಿಯಿಂದ ವೈಟ್‌ಫೀಲ್ಡ್‌, ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ ಯಶವಂತಪುರ ಮೂಲಕ ದೇವನಹಳ್ಳಿ (ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕ) ಚಿಕ್ಕಬಾಣಾವರದಿಂದ ಬೈಯಪ್ಪನಹಳ್ಳಿ ಹಾಗೂ ಹೀಲಲಿಗೆಯಿಂದ ರಾಜಾನುಕುಂಟೆವರೆಗೆ ಕಾರ್ಯನಿರ್ವಹಿಸಲಿದೆ. ಯೋಜನೆಯ ಅಂದಾಜು ವೆಚ್ಚ .18,600 ಕೋಟಿಗಳಾಗಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರ ತಲಾ ಶೇ.20ರಷ್ಟುಪಾಲು ನೀಡಲಿದೆ. ಉಳಿದ ಶೇ.60ರಷ್ಟುವೆಚ್ಚವನ್ನು ಸಾಂಸ್ಥಿಕ ಸಾಲವಾಗಿ ಪಡೆದು ಅನುಷ್ಠಾನ ಮಾಡಲಾಗುವುದು ಎಂದು ವಿವರಿಸಿದರು.

ಬೆಂಗಳೂರಿಗರಿಗೆ ಇಲ್ಲಿದೆ ಗುಡ್ ನ್ಯೂಸ್ : ಶೀಘ್ರ ಬರಲಿದೆ ಉಪನಗರ ರೈಲು

ಈ ಯೋಜನೆಯು ಬೆಂಗಳೂರು ನಗರದ 57 ಪ್ರಮುಖ ಸ್ಥಳಗಳಲ್ಲಿ ರೈಲ್ವೆ ನಿಲ್ದಾಣಗಳನ್ನು ಒಳಗೊಳ್ಳಲಿದೆ, ಹವಾನಿಯಂತ್ರಿತ ಬೋಗಿಗಳನ್ನು ಒಳಗೊಂಡಿರುತ್ತದೆ. ಪ್ರತಿ ದಿನ ಬೆಳಗ್ಗೆ ಐದು ಗಂಟೆಯಿಂದ ಮಧ್ಯರಾತ್ರಿವರೆಗೆ ಸಂಚರಿಸಲಿವೆ ಎಂದರು.

ಈ ಹಿಂದೆಯೇ ಯೋಜನೆ ಅನುಷ್ಠಾನವಾಗಬೇಕಿತ್ತು. ಆದರೆ ಕೆಲವು ಕಾರಣಾಂತರಗಳಿಂದ ಮುಂದೂಡಿಕೆಯಾಗಿತ್ತು. ಈಗ ಯೋಜನೆ ಅನುಷ್ಠಾನದಿಂದ ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸಂಚರಿಸುವ ಲಕ್ಷಾಂತರ ಜನರಿಗೆ ಅನುಕೂಲವಾಗುವ ಜೊತೆಗೆ ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ, ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಯೋಜನೆ ಅನುಷ್ಠಾನಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಕೇಂದ್ರ ರೈಲ್ವೆ ಸಚಿವ ಪಿಯೂಶ್‌ ಗೋಯಲ್‌ ಹಾಗೂ ರೈಲ್ವೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಸಂಸದ ಪಿ.ಸಿ.ಮೋಹನ್‌ ಮಾತನಾಡಿ, ಬೆಂಗಳೂರಿನಲ್ಲಿ ಸಬ್‌ ಅರ್ಬನ್‌ ರೈಲು ಯೋಜನೆ ಅನುಷ್ಠಾನಗೊಳಿಸಬೇಕೆಂಬುದು ದಿವಂಗತ ಅನಂತಕುಮಾರ್‌ ಅವರ ಅವರ ಕನಸಾಗಿತ್ತು. ಇದಕ್ಕಾಗಿ ಅವರು ಅನೇಕ ಭಾರಿ ಪ್ರಯತ್ನ ಮಾಡಿದ್ದರು. ಈಗ ರೈಲ್ವೆ ರಾಜ್ಯ ಸಚಿವರಾಗಿರುವ ಸುರೇಶ ಅಂಗಡಿ ಅವರು ಯೋಜನೆ ಜಾರಿಗೆ ನಿರಂತರವಾಗಿ ಪ್ರಯತ್ನ ಪಟ್ಟರು ಎಂದು ಹೇಳಿದರು.

ಕಂದಾಯ ಸಚಿವ ಆರ್‌.ಅಶೋಕ್‌, ಸಂಸದ ತೇಜಸ್ವಿ ಸೂರ್ಯ, ಶಾಸಕ ಉಮೇಶ್‌ ಕತ್ತಿ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಮುಂತಾದವರು ಉಪಸ್ಥಿತರಿದ್ದರು.

ಇದು ಅಪ್ಪಟ ಬಡವರ ರೈಲು: ಅಂಗಡಿ

ರೈಲ್ವೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಮಾತನಾಡಿ, ಈ ಹಿಂದೆಯೇ ಯೋಜನೆ ಅನುಷ್ಠಾನವಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರ ಕೇಳಿದ ಕೆಲವು ಮಾಹಿತಿಯನ್ನು ರಾಜ್ಯ ಸರ್ಕಾರ ನೀಡದ ಕಾರಣ ವಿಳಂಬವಾಯಿತು. ಈಗ ಸಂಸದರು, ಅಧಿಕಾರಿಗಳು ಹಾಗೂ ತಾವು ಯೋಜನೆ ಜಾರಿಗೆ ಸಾಕಷ್ಟುಪ್ರಯತ್ನ ಮಾಡಿದ್ದೇವೆ. ಹಿಂದಿನ ಸರ್ಕಾರಗಳು ಸಹ ಕೆಲಸ ಮಾಡಿವೆ. ಒಟ್ಟಾರೆ ಈಗ ಆಯವ್ಯಯದಲ್ಲಿ ಯೋಜನೆ ಅನುಷ್ಠಾನಕ್ಕೆ ಘೋಷಿಸಿರುವುದರಿಂದ ತ್ವರಿತವಾಗಿ ಯೋಜನೆ ಕಾಮಗಾರಿ ಆರಂಭವಾಗಲಿದೆ. ಕೇಂದ್ರದ ಘೋಷಣೆಯಿಂದ ಬ್ಯಾಂಕ್‌ಗಳು ಸಾಲ ಸೌಲಭ್ಯವನ್ನು ನೀಡುವುದು ಸುಲಭವಾಗಲಿದೆ ಎಂದರು.

ಸಬ್‌ ಅರ್ಬನ್‌ ರೈಲು ಹವಾನಿಯಂತ್ರಿತವಾಗಿದ್ದ ಮಾತ್ರಕ್ಕೆ ಬಡವರು ಇದರಿಂದ ವಂಚಿತರಾಗುವುದಿಲ್ಲ, ಚಹ ಮಾರುವವರು ದೇಶದ ಪ್ರಧಾನಿಯಾಗಿದ್ದಾರೆ. ಮಿಲ್‌ನಲ್ಲಿ ಕೆಲಸ ಮಾಡಿದವರು ಮುಖ್ಯಮಂತ್ರಿಗಳಾಗಿರುವಾಗ ಸಬ್‌ಅರ್ಬನ್‌ ರೈಲು ಸಹ ಬಡವರಿಗಾಗಿಯೇ ಇರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಬ್‌ಅರ್ಬನ್‌ ರೈಲು ತಕ್ಷಣಕ್ಕೆ ಓಡಲ್ಲ?

ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣ ಆಧುನೀಕರಣ ಕಾಮಗಾರಿ ಬರುವ ಮಾಚ್‌ರ್‍ ಒಳಗಾಗಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸಣ್ಣ ಪುಟ್ಟಸಮಸ್ಯೆ ಉಂಟಾಗದಿದ್ದರೆ 15 ದಿನ ಹೆಚ್ಚಾಗಬಹುದು, ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವ ಸುರೇಶ್‌ ಅಂಗಡಿ ತಿಳಿಸಿದರು.