ನವದೆಹಲಿ(ಫೆ.27): ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್‌ ಕೀ ಬಾತ್‌’ನಲ್ಲಿ ಪ್ರಸ್ತಾಪಿಸಿದ್ದ, ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಹೆಚ್ಚಾಗಿ ಕಂಡುಬರುವ ‘ಮುಧೋಳ ನಾಯಿ’ಗಳು ಪೊಲೀಸ್‌ ಕೆಲಸಕ್ಕೆ ಸೂಕ್ತವಾದ ಶ್ವಾನಗಳಲ್ಲ ಎಂದು ಅರೆಸೇನಾ ಪಡೆಗಳಾದ ಇಂಡೋ-ಟಿಬೆಟನ್‌ ಗಡಿ ಪೊಲೀಸ್‌ (ಐಟಿಬಿಪಿ) ಹಾಗೂ ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ)ಗಳು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿವೆ.

ಕೇಂದ್ರ ಗೃಹ ಸಚಿವಾಲಯದ ಕೆ9 ಘಟಕದ ಸೂಚನೆ ಮೇರೆಗೆ 2018ರಿಂದ 8 ನಾಯಿಗಳನ್ನು ಐಟಿಬಿಪಿ ಹಾಗೂ ಎಸ್‌ಎಸ್‌ಬಿ ತರಬೇತಿಗೆ ಒಳಪಡಿಸಿದ್ದವು. ಇದೀಗ ಆ ಪಡೆಗಳ ತಜ್ಞರು ಕೆ9 ಘಟಕಕ್ಕೆ ವರದಿ ಸಲ್ಲಿಸಿದ್ದು, ಮುಧೋಳ ಶ್ವಾನಗಳು ಪೊಲೀಸ್‌ ಕೆಲಸಕ್ಕೆ ಆಗಿ ಬರುವುದಿಲ್ಲ ಎಂದು ವರದಿ ನೀಡಿದ್ದಾರೆ. ಅದನ್ನು ಪ್ರಧಾನ ಮಂತ್ರಿ ಕಾರ್ಯಾಲಯದ ಜತೆಗೂ ಗೃಹ ಸಚಿವಾಲಯ ಹಂಚಿಕೊಂಡಿದೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.

ಮುಧೋಳ ನಾಯಿಗಳು ಅತ್ಯುತ್ತಮ ನಿಷ್ಠೆ ಪ್ರದರ್ಶಿಸುತ್ತವೆ. ಚುರುಕಾಗಿವೆ. ಆರೋಗ್ಯಪೂರ್ಣವಾಗಿವೆ ಎಂಬುದೆಲ್ಲಾ ನಿಜ. ಆದರೆ ಈ ಶ್ವಾನಗಳು ಪುಕ್ಕಲು ಸ್ವಭಾವ ಹೊಂದಿವೆ. ಯಾವುದೇ ಚಲನಶೀಲ ವಸ್ತುವನ್ನು ಕಂಡರೆ ಅವುಗಳ ಚಿತ್ತ ಚಂಚಲನವಾಗುತ್ತದೆ. ಆ ವಸ್ತುವನ್ನು ಆಘ್ರಾಣಿಸಿ ಅದರ ಬಗ್ಗೆ ಗಮನಹರಿಸುವ ಬದಲು ಚಲನಶೀಲ ವಸ್ತುವನ್ನು ಅಟ್ಟಿಸಿಕೊಂಡು ಹೋಗುತ್ತವೆ. ಪೊಲೀಸ್‌ ಶ್ವಾನಗಳು ಈ ರೀತಿ ಇರಬಾರದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಪೊಲೀಸ್‌ ಕೆ9 ಜರ್ನಲ್‌ನ ಜನವರಿ ಸಂಚಿಕೆಯಲ್ಲೂ ಪ್ರಕಟವಾಗಿದೆ ಎಂದು ಪತ್ರಿಕೆ ತಿಳಿಸಿದೆ.

ಮುಧೋಳ ನಾಯಿಗಳು ಈಗಾಗಲೇ ಪಡೆದಿದ್ದ ತರಬೇತಿಯನ್ನು ಮರೆಯುವ ಗುಣ ಹೊಂದಿವೆ. ತರಬೇತಿ/ಅಭ್ಯಾಸದ ಸಂದರ್ಭದಲ್ಲಿ ಹಗ್ಗ ಬಿಚ್ಚಿದರೆ ಓಡಿ ಹೋಗುತ್ತವೆ. ಈ ಶ್ವಾನಗಳಿಗೆ ತರಬೇತಿ ಕೊಡುವುದು ಕೂಡ ಕಷ್ಟ. ಏಕೆಂದರೆ ಗ್ರಹಿಕೆ ಸಾಮರ್ಥ್ಯವೇ ಕಡಿಮೆ ಇದೆ. ಯಾವಾಗಲೂ ಬೇಟೆಯಾಡುವ ಮನಸ್ಥಿತಿಯಲ್ಲೇ ಇರುತ್ತವೆ. ಅಪರಿಚಿತರ ಜತೆ ಉತ್ತಮ ನಡವಳಿಕೆ ತೋರುವುದಿಲ್ಲ. ಈ ನಾಯಿಗಳ ಉದ್ದವಿದ್ದು, ಕುತ್ತಿಗೆ ಕಿರಿದಾಗಿದೆ. ಹೀಗಾಗಿ ಕುತ್ತಿಗೆಗೆ ಕಟ್ಟುವ ಚೈನ್‌ ಅನ್ನು ಕಳಚಿ ನಿಯಂತ್ರಕರಿಂದ ತಪ್ಪಿಸಿಕೊಂಡು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಇದೇ ವೇಳೆ ಮುಧೋಳ ನಾಯಿಗಳ ಧನಾತ್ಮಕ ಅಂಶಗಳನ್ನೂ ವರದಿಯಲ್ಲಿ ತಜ್ಞರು ಪ್ರಸ್ತಾಪಿಸಿದ್ದಾರೆ. ಈ ನಾಯಿಗಳು ತಮ್ಮ ನಿಯಂತ್ರಕರಿಗೆ ನಿಷ್ಠವಾಗಿರುತ್ತವೆ. ಸುಲಭವಾಗಿ ಬೆಳೆಸಬಹುದು. ಅದಕ್ಕಾಗುವ ಖರ್ಚು ಕಡಿಮೆ. ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ. ಉಷ್ಣ ವಾತಾವರಣಕ್ಕೂ ಹೊಂದಿಕೊಳ್ಳುತ್ತವೆ. ಯಾವುದೇ ಸಮಸ್ಯೆ ಇಲ್ಲದೆ ಬಹುದೂರ ಓಡುತ್ತವೆ ಎಂದು ವಿವರಿಸಿದ್ದಾರೆ.

2018ರಲ್ಲಿ ಐಟಿಬಿಪಿ ಹಾಗೂ ಎಸ್‌ಎಸ್‌ಬಿ ಪಡೆಗಳು 8 ಮುಧೋಳ ನಾಯಿಗಳನ್ನು ಸೇವೆಗೆ ಸೇರ್ಪಡೆ ಮಾಡಿಕೊಂಡು ತರಬೇತಿ ನೀಡಿದ್ದವು. ಸ್ಫೋಟಕ ಹಾಗೂ ಮಾದಕ ವಸ್ತು ಶೋಧ ಕಾರ್ಯಾಚರಣೆ ಕುರಿತು ತರಬೇತಿಯನ್ನು ನೀಡಲಾಗಿತ್ತು. ಛತ್ತೀಸ್‌ಗಢದ ನಕ್ಸಲ್‌ ನಿಗ್ರಹ ಪಡೆ ಹಾಗೂ ಭಾರತ- ನೇಪಾಳ ಗಡಿಯಲ್ಲಿ ನಿಯೋಜನೆ ಮಾಡಲಾಗಿತ್ತು. ಅವುಗಳ ನಡವಳಿಕೆ, ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ ವರದಿಯನ್ನು ತಜ್ಞರು ಸಲ್ಲಿಸಿದ್ದಾರೆ.