ಅರಣ್ಯ ನಾಶ: ದೇಶಕ್ಕೇ ಕರ್ನಾಟಕ ನಂ.2!
ಕಳೆದ 2 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಅತಿ ಹೆಚ್ಚು ಅರಣ್ಯ ಮತ್ತು ಮರಗಳು ನಾಶವಾದ ರಾಜ್ಯಗಳ ಪೈಕಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ. 2021-23ರ ಅವಧಿಯಲ್ಲಿ ಕರ್ನಾಟಕದಲ್ಲಿ 459.36 ಚದರ ಕಿ.ಮೀನಷ್ಟು ಅರಣ್ಯ ನಾಶವಾಗಿದೆ. ಮೊದಲ ಸ್ಥಾನದಲ್ಲಿರುವ ಮಧ್ಯಪ್ರದೇಶದಲ್ಲಿ 612.41 ಚ.ಕಿ.ಮೀ ಮತ್ತು ಲಡಾಖ್‌ನಲ್ಲಿ 159.26 ಚ.ಕಿ.ಮೀ ಅರಣ್ಯ ನಾಶವಾಗಿದೆ.
ನವದೆಹಲಿ(ಡಿ.22): ಭಾರತದಲ್ಲಿ ಅರಣ್ಯ ಹಾಗೂ ಟ್ರೀ ಕವರ್ (ಹಸಿರು ಹಾಸು) ಪ್ರಮಾಣವು 2021ರಿಂದ 2023ರ ಅವಧಿಯಲ್ಲಿ 1,445 ಚದರ ಕಿ.ಮೀ.ನಷ್ಟು ವೃದ್ಧಿಸಿದೆ. ಅಂದರೆ ದೇಶದ ಒಟ್ಟು ಭೂಭಾಗದ 25.17 ಪ್ರದೇಶದಲ್ಲೀಗ ಅರಣ್ಯವಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ (ಐಎಸ್‌ಎಫ್‌ಆರ್) ಬಿಡುಗಡೆ ಮಾಡಿರು ವರದಿ ಅನ್ವಯ, ‘ದೇಶದಲ್ಲಿ 2021ರಲ್ಲಿ 7,13,789 ಚದರ ಕಿ.ಮೀ ಇದ್ದ ಅರಣ್ಯ ಪ್ರದೇಶ 2023ರಲ್ಲಿ 7,15,343 ಚದರ ಕಿ.ಮೀ.ಗೆ ವಿಸ್ತರಣೆಗೊಂಡಿದೆ. ಅಂತೆಯೇ, ಮರಗಳ ಸಂಖ್ಯೆಯೂ ಹೆಚ್ಚಾಗಿದ್ದು, ಒಟ್ಟು ಭೌಗೋಳಿಕ ಪ್ರದೇಶದ ಶೇ.3.41ರಷ್ಟು ವ್ಯಾಪಿಸಿದೆ. 1988ರ ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ದೇಶದ ಒಟ್ಟು ಭೂಭಾಗದ ಶೇ.33ರಷ್ಟು ಅರಣ್ಯ ಇರಬೇಕು.
ಟಾಪ್ 3 ರಾಜ್ಯ:
ಛತ್ತೀಸ್‌ಗಢ, ಉತ್ತರಪ್ರದೇಶ, ಒಡಿಶಾ ಅತಿ ಹೆಚ್ಚು ಪ್ರಮಾಣದಲ್ಲಿ ಅರಣ್ಯ ಮತ್ತು ಮರಗಳು ವೃದ್ಧಿಯಾದ ರಾಜ್ಯಗಳಾಗಿವೆ. ಮಧ್ಯಪ್ರದೇಶ, ಅರುಣಾಚಲ ಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಅರಣ್ಯಗಳ ಗಾತ್ರ ದೊಡ್ಡದಿದೆ.
ಅರಣ್ಯ ನಾಶ:
ಅತ್ತ ಪಶ್ಚಿಮ ಘಟ್ಟಗಳು ಹಾಗೂ ಪೂರ್ವದ ರಾಜ್ಯಗಳಲ್ಲಿ 58.22 ಚದರ ಕಿ.ಮೀ.ನಷ್ಟು ಅರಣ್ಯ ಪ್ರದೇಶ ನಾಶವಾಗಿದೆ ಎಂದು ವರದಿ ಹೇಳಿದೆ.
ಅರಣ್ಯ ಪ್ರದೇಶವೆಂದರೇನು?:
ಭಾರತೀಯ ಅರಣ್ಯ ಸಮೀಕ್ಷೆ(ಎಫ್‌ಎಸ್‌ಐ)ಯ ಪ್ರಕಾರ, 1 ಹೆಕ್ಟೇರ್ ಪ್ರದೇಶದಲ್ಲಿ ಶೇ.10ರಷ್ಟು ಮರಗಳ ಮೇಲ್ಛಾವಣಿಯಿದ್ದರೆ ಅದನ್ನು ಅರಣ್ಯ ಪ್ರದೇಶ ಎಂದು ಪರಿಗಣಿಸಲಾಗುತ್ತದೆ. ಇದು ಕಾಡು, ಮಾನವ ನಿರ್ಮಿತ ತೋಟಗಳು, ಮರಗಳನ್ನು ಒಳಗೊಂಡಿರುತ್ತದೆ. ಟ್ರೀ ಕವರ್ ಎಂದರೆ, ಸಂರಕ್ಷಿತ ಅರಣ್ಯ ಪ್ರದೇಶಗಳನ್ನು ಹೊರತುಪಡಿಸಿ, ಬೇರೆಡೆ 1 ಹೆಕ್ಟೇರ್‌ನಲ್ಲಿ ಇರುವ ಮರಗಳು. ಇದರಲ್ಲಿ ಬಿದಿರು ಮೆಳೆಗಳನ್ನೂ ಸೇರಿಸಿಕೊಳ್ಳಲಾಗಿದೆ.
ಅರಣ್ಯ ನಾಶದಲ್ಲಿ ಕರ್ನಾಟಕ ನಂ.2