ಯು.ಪಿ ಲವ್ ಜಿಹಾದ್ ಕೇಸಲ್ಲಿ ಕರ್ನಾಟಕದ ಮುಸ್ಲಿಂ ವ್ಯಕ್ತಿ ಬಂಧನ
19 ವರ್ಷದ ಹಿಂದೂ ಯುವತಿಯನ್ನು ಅಪಹರಣ ಮಾಡಿದ ಆರೋಪ| ಕರ್ನಾಟಕ ಮೂಲದ ಮುಸ್ಲಿಂ ಯುವಕನ ಬಂಧನ| ಯುವತಿಯ ತಂದೆ ದೂರಿನ ಮೇರೆಗೆ ಆರೋಪಿ ವಿರುದ್ಧ ನೂತನ ಲವ್ ಜಿಹಾದ್ ಕಾಯ್ದೆಯಡಿ ಕೇಸ್ ದಾಖಲು
ಗೋರಖ್‌ಪುರ(ಜ.19): 19 ವರ್ಷದ ಹಿಂದೂ ಯುವತಿಯನ್ನು ಅಪಹರಣ ಮಾಡಿದ್ದಾನೆ ಎಂದು ಆರೋಪಿಸಲಾಗಿದ್ದ ಕರ್ನಾಟಕ ಮೂಲದ ಮುಸ್ಲಿಂ ಯುವಕನನ್ನು ಬಂಧಿಸಿ ರಾಜ್ಯಕ್ಕೆ ಕರೆತರಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ ಗೋರಖ್‌ಪುರ ಪೊಲೀಸರು, ಯುವತಿಯ ತಂದೆ ದೂರಿನ ಮೇರೆಗೆ ಆರೋಪಿ ವಿರುದ್ಧ ನೂತನ ಲವ್ ಜಿಹಾದ್ ಕಾಯ್ದೆಯಡಿ ಕೇಸ್ ದಾಖಲಿಸಿಕೊಳ್ಳಲಾಗಿತ್ತು. ಇದೀಗ ಯುವತಿಯನ್ನು ಆಕೆಯ ಪೋಷಕರಿಗೆ ಒಪ್ಪಿಸಿದ್ದೇವೆ. ಆರೋಪಿ ವಿರುದ್ಧ ಮುಂದಿನ ಕ್ರಮ ಏನು ಕೈಗೊಳ್ಳಬೇಕು ಎಂಬುದು ಯುವತಿ ಹೇಳಿಕೆಯನ್ನು ಆಧರಿಸಿದೆ ಎಂದು ಹೇಳಿದ್ದಾರೆ.
ತಾನು ಮುಸ್ಲಿಂ ಎಂಬ ವಿಚಾರವನ್ನು ಮುಚ್ಚಿಟ್ಟು ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ಮಗಳನ್ನು ಅಪಹರಣ ಮಾಡಿದ್ದಾನೆ ಎಂದು ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಮೂಲದ ಆರೋಪಿ ವಿರುದ್ಧ ನೂತನ ಲವ್ ಜಿಹಾದ್ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆಗಿಳಿದಿದ್ದರು. ಕರೆ ದಾಖಲೆಗಳ ಪರಿಶೀಲನೆ ಬಳಿಕ ಆರೋಪಿ ಬಂಧನ ಮತ್ತು ಯುವತಿ ರಕ್ಷಣೆಗಾಗಿ ಮೂವರು ಸದಸ್ಯರನ್ನೊಳಗೊಂಡ ಪೊಲೀಸರ ತಂಡ ಕರ್ನಾಟಕಕ್ಕೆ ಆಗಮಿಸಿತ್ತು.