ನವದೆಹಲಿ(ಜೂ.21): ಕೊರೋನಾ ವೈರಸ್‌ ನಿಗ್ರಹ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೆಚ್ಚುಗೆ ಗಳಿಸಿರುವ ಕರ್ನಾಟಕಕ್ಕೆ ಮತ್ತೊಂದು ಗರಿಮೆ ಪ್ರಾಪ್ತವಾಗಿದೆ. ಸೋಂಕಿತರು ಹಾಗೂ ಸಾವಿಗೀಡಾದವರಿಗೆ ಸಂಬಂಧಿಸಿದ ದೈನಂದಿನ ಅಂಕಿ-ಅಂಶಗಳನ್ನು ನೀಡುವುದರಲ್ಲಿ ಕರ್ನಾಟಕ ದೇಶದ ಇತರೆಲ್ಲಾ ರಾಜ್ಯಗಳಿಗಿಂತ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ವರದಿಯೊಂದು ತಿಳಿಸಿದೆ.

ದೇಶದ ಹಲವು ರಾಜ್ಯಗಳು ಕೊರೋನಾ ವೈರಸ್‌ ಸೋಂಕು ಹಾಗೂ ಸಾವಿಗೆ ಸಂಬಂಧಿಸಿದ ದೈನಂದಿನ ವಿವರವನ್ನೇ ನೀಡುತ್ತಿಲ್ಲ. ಆದರೆ ಕರ್ನಾಟಕ ತಾಲೂಕು ಮಟ್ಟದ ಮಾಹಿತಿಯನ್ನೂ ನೀಡುವುದರ ಜೊತೆಗೆ ಆರೋಗ್ಯ ಇಲಾಖೆಯ ವೆಬ್‌ಸೈಟ್‌ನಲ್ಲೂ ಈ ಮಾಹಿಯನ್ನು ಅಪ್‌ಲೋಡ್‌ ಮಾಡುತ್ತಿದೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ.

ಕೇಂದ್ರ ಸರ್ಕಾರ ದೈನಂದಿನ ಕೊರೋನಾ ವೈರಸ್‌ ಪ್ರಕರಣಗಳು, ರಾಜ್ಯವಾರು ಸಂಖ್ಯೆ, ಸಾವು, ಸಕ್ರಿಯ ಪ್ರಕರಣಗಳು, ಗುಣಮುಖರಾದವರ ಸಂಖ್ಯೆಯ ಬಗ್ಗೆ ಮಾಧ್ಯಮಗಳಿಗೆ ಪ್ರಕಟಣೆಯನ್ನು ಬಿಡುಗಡೆ ಮಾಡುತ್ತದೆ. ಆದರೆ, ಇದರಲ್ಲಿ ಜಿಲ್ಲಾವಾರು ಮಾಹಿತಿ ಇರುವುದಿಲ್ಲ. ಅವುಗಳನ್ನು ರಾಜ್ಯಗಳು ವಿಸ್ತೃತವಾಗಿ ಬಿಡುಗಡೆ ಮಾಡಬೇಕು. ಆದರೆ, ಬಹುತೇಕ ರಾಜ್ಯಗಳು ಈ ಮಾಹಿತಿಯನ್ನು ನೀಡುತ್ತಲೇ ಇಲ್ಲ. ಹೆಚ್ಚೆಂದರೆ ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣಗಳನ್ನಷ್ಟೇ ನೀಡುತ್ತಿವೆ. ಉದಾಹರಣೆಗೆ ಅತಿ ಹೆಚ್ಚು ಸೋಂಕು ಪತ್ತೆ ಆದ ರಾಜ್ಯಗಳಲ್ಲಿ ಒಂದಾದ ಬಿಹಾರ ಮತ್ತು ಉತ್ತರ ಪ್ರದೇಶಗಳು ದೈನಂದಿನ ಕೊರೋನಾ ವೈರಸ್‌ ಪ್ರಕರಣಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿಯನ್ನೇ ಬಿಡುಗಡೆ ಮಾಡುತ್ತಿಲ್ಲ.

ಆದರೆ, ಕರ್ನಾಟಕದಲ್ಲಿ ಮಾತ್ರ ಆರಂಭದಿಂದ ಈವರೆಗೆ ಪ್ರತಿ ನಿತ್ಯ ದಾಖಲಾದ ಕೊರೋನಾ ವೈರಸ್‌ ಪ್ರಕರಣಗಳ ತಾಲೂಕು ಮಟ್ಟದ ದತ್ತಾಂಶವನ್ನೂ ನೀಡಲಾಗುತ್ತಿದೆ. ಈ ಕಾರ್ಯದಲ್ಲಿ ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರಗಳು ನಂತರದ ಸ್ಥಾನದಲ್ಲಿವೆ. ಆದರೆ, ಕರ್ನಾಟಕದಷ್ಟುವಿಸ್ತೃತ ಮಾಹಿತಿ ನೀಡುತ್ತಿಲ್ಲ ಎಂದು ವರದಿ ತಿಳಿಸಿದೆ.

ದೆಹಲಿ, ತೆಲಂಗಾಣ, ಜಾರ್ಖಂಡ್‌ ಮತ್ತು ಅಸ್ಸಾಂ ರಾಜ್ಯಗಳು ಒದಗಿಸುತ್ತಿರುವ ಮಾಹಿತಿಗಳು ಕೇವಲ ಮಾಧ್ಯಮಗಳಿಗೆ ಪ್ರಕಟಣೆಗಷ್ಟೇ ಸೀಮಿತವಾಗಿದೆ. ಈ ಹಿಂದೆ ಕೊರೋನಾ ರೋಗಿಗಳ ಬಗ್ಗೆ ವಿಸ್ತೃತ ಮಾಹಿತಿ ನೀಡುತ್ತಿದ್ದ ಆಂಧ್ರ ಪ್ರದೇಶ ಹಾಗೂ ಮಧ್ಯ ಪ್ರದೇಶ ರಾಜ್ಯಗಳು ಇದೀಗ ಸೀಮಿತ ಮಾಹಿತಿಯನ್ನಷ್ಟೇ ಬಿಡುಗಡೆ ಮಾಡುತ್ತಿವೆ ಎಂದು ಹೇಳಿದೆ.