Asianet Suvarna News Asianet Suvarna News

ಉದ್ಧವ್ ಠಾಕ್ರೆ ಸರ್ಕಾರದಿಂದ ಕರ್ನಾಟಕಕ್ಕೆ ಕಂಟಕ

ಮಹಾರಾಷ್ಟ್ರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಉದ್ಧವ್ ಠಾಕ್ರೆ ಸರ್ಕಾರದಿಂದ ಕರ್ನಾಟಕಕ್ಕೆ ಇದೀಗ ಹೊಸ ಕಂಟಕ ಎದುರಾಗಿದೆ. 

Karnataka Face Border Problem From Uddhav Thackeray Govt
Author
Bengaluru, First Published Dec 2, 2019, 7:32 AM IST

ಬೆಳಗಾವಿ (ನ.02): ಬದಲಾದ ರಾಜಕೀಯ ಸನ್ನಿವೇಶದಲ್ಲಿಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿಯುತ್ತಿ ದ್ದಂತೆ ಕರ್ನಾಟಕಕ್ಕೆ ಹೊಸ ತಲೆನೋವು ಶುರು ವಾಗಿದೆ. ಮರಾಠಿ ಅಸ್ಮಿತೆಯನ್ನೇ ಬಂಡವಾಳ ಮಾಡಿಕೊಂಡು ರಾಜಕಾರಣ ಮಾಡಿಕೊಂಡು ಬಂದಿರುವ ಶಿವಸೇನೆ, ಎನ್‌ಸಿಪಿ ಮತ್ತಿನ್ನೆಲ್ಲಿ ಗಡಿ-ಭಾಷೆ ಕ್ಯಾತೆ ತೆಗೆಯಲಿದೆಯೋ ಎಂಬ ಆತಂಕ ಕನ್ನಡಿಗರಲ್ಲಿ ಮನೆ ಮಾಡಿದೆ. 

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕೆಂಬ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹೋರಾಟ ಇಂದು, ನಿನ್ನೆಯದಲ್ಲ. ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಕಂದಕ ಸೃಷ್ಟಿಸುವ ಪ್ರಯತ್ನವನ್ನು ಎಂಇಎಸ್ ದಶಕಗಳಿಂದ ನಡೆಸುತ್ತಲೇ ಬಂದಿದೆ. 

ಎಂಇಎಸ್‌ನ ಈ ಹೋರಾಟಕ್ಕೆ ಬಹಿರಂಗ ಬೆಂಬಲ ನೀಡುತ್ತಾ ಬಂದಿರುವುದು ಶಿವಸೇನೆ ಮತ್ತು ಎನ್‌ಸಿಪಿ. ಆದರೆ, ಮಹಾರಾಷ್ಟ್ರದಲ್ಲಿ ಫಡ್ನವೀಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೆಳಗಾವಿಯಲ್ಲಿ ಎಂಇಎಸ್ ಕ್ಯಾತೆ ಕೊಂಚ ತಗ್ಗಿತ್ತು. ಎರಡೂ ರಾಜ್ಯಗಳಲ್ಲಿ ಒಂದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದ ಕಾರಣವೇನೋ ಎಂಇಎಸ್ ಹೋರಾಟಕ್ಕೆ ಹೆಚ್ಚಿನ ಕಿಮ್ಮತ್ತು ಕೊಡುವವರೇ ಇಲ್ಲದಂತಾಗಿತ್ತು. ಇದೇ ಕಾರಣಕ್ಕೆ ಈ ಬಾರಿ ನ.1 ರಂದು ವರ್ಷಂಪ್ರತಿಯಂತೆ ಕರಾಳ ದಿನ ಆಚರಣೆ ನಡೆಸಿದರೂ ಅದಕ್ಕೆ ಮರಾಠಿ ಭಾಷಿಕರಿಂದಲೇ ನಿರೀಕ್ಷಿತ ಸ್ಪಂದನೆ ಸಿಗದೆ ಎಂಇಎಸ್ ಕಂಗಾಲಾಗಿತ್ತು. ಆದರೀಗ ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್‌ಸಿಪಿ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಎಂಇಎಸ್ ಪಾಲಿಗೆ ಹೊಸ ಹುರುಪು ನೀಡಿದಂತಾಗಿದೆ.

ಪ್ರಮಾಣವಚನ ವೇಳೆ ಅಪ್ಪ ಅಮ್ಮ ಹೆಸರು: ಉದ್ಧವ್ ಅಂದ್ರು ಅವರೇ ಅಲ್ವೇ ನನ್ನುಸಿರು!...

ಎನ್‌ಸಿಪಿ ಕಾಟ: ಪರಭಾಷಾ ವಿರೋಧಿ ಯಾಗಿರುವ ಶಿವಸೇನೆ ರೀತಿಯಲ್ಲೇ ಈಗಿನ ಮಹಾರಾಷ್ಟ್ರ ಸರ್ಕಾರದ ಭಾಗವಾಗಿರುವ ಎನ್‌ಸಿಪಿ ಕೂಡ ಒಂದು ಕಾಲದಲ್ಲಿ ಬೆಳಗಾವಿ ಗಡಿ ವಿಚಾರದಲ್ಲಿ ಮಾಡಿದ ತಂಟೆ-ತಕರಾರು ಕಡಿಮೆಯೇನಲ್ಲ ‘ಸೀಮಾ ಲಡಾಯಿ’ ಹೋರಾಟದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮುಂಚೂಣಿಯಲ್ಲಿದ್ದವರು. 

ಮಹಾರಾಷ್ಟ್ರದ ಜನರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟಿದವರು ಅವರು. 1986 ರ ಜೂನ್ 1 ರಂದು ‘ಸೀಮಾ ಲಡಾಯಿ’ಯಲ್ಲಿ ಪಾಲ್ಗೊ ಳ್ಳಲು ಅವರು ಬೆಳಗಾವಿಗೂ ಆಗಮಿಸಿದ್ದರು. ಅದಾದ ಬಳಿಕ ಮತ್ತೆ ಅವರು ‘ಸೀಮಾ ಲಡಾಯಿ’ ಚಳವಳಿ ಬಗ್ಗೆ ಆಸಕ್ತಿ ಕಳೆದುಕೊಂಡರು. ರಾಷ್ಟ್ರೀಯ ಪಕ್ಷ ಕಟ್ಟಿದ್ದರಿಂದ ಗಡಿ ವಿವಾದದಿಂದ ದೂರವೇ ಉಳಿದರು. ಆದರೂ ಎನ್‌ಸಿಪಿ ಮುಖಂಡರು ಮಾತ್ರ ಗಡಿವಿವಾದ ಕೆದಕುವುದನ್ನು ನಿಲ್ಲಿಸಿಲ್ಲ. 2013 ರಲ್ಲಿ ಬೆಳಗಾವಿಯಲ್ಲಿ ಕಾರ್ಯಕ್ರಮ ವೊಂದರಲ್ಲಿ  ಪಾಲ್ಗೊಂಡಿದ್ದ ಆಗಿನ ಮಹಾ ರಾಷ್ಟ್ರದ ಗೃಹ ಸಚಿವ ಆರ್.ಆರ್.ಪಾಟೀಲ ಅವರ ವಿರುದ್ಧ ಭಾಷೆಯ  ವಿಚಾರವಾಗಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಕ್ಕೆ ಬೆಳಗಾ ವಿಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಏತನ್ಮಧ್ಯೆ, ಇತ್ತೀಚೆಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಮಹಾರಾಷ್ಟ್ರದ ಚಂದಗಡ ಕ್ಷೇತ್ರದ ಎನ್‌ಸಿಪಿ ಶಾಸಕ ರಾಜೇಶ ಪಾಟೀಲ ಬೆಳಗಾವಿ ಸೇರಿ ಗಡಿಭಾಗದ ಮರಾಠಿ ಭಾಷಿಕರು ಬಹುಸಂಖ್ಯಾತರಿರುವ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವ ವಿಚಾರ ಪ್ರಸ್ತಾಪಿಸಿದ್ದರು. ಹೀಗಾಗಿ ಹೊಸ ಸರ್ಕಾರ ಮತ್ತೆ ಕರ್ನಾಟಕದ ಜತೆಗೆ ಗಡಿ ತಿಕ್ಕಾಟಕ್ಕಿಳಿದರೂ ಅಚ್ಚರಿ ಇಲ್ಲಎನ್ನುವ ಆತಂಕ ಬೆಳಗಾವಿ ಕನ್ನಡಿಗರಲ್ಲಿದೆ. 

Follow Us:
Download App:
  • android
  • ios