ಪಣಜಿ(ನ.01): ‘ಕರ್ನಾಟಕ ಜತೆಗಿನ ಮಹದಾಯಿ ವಿಚಾರದಲ್ಲಿ ಗೋವಾ ಪ್ರದೇಶ ಕಾಂಗ್ರೆಸ್‌ ಘಟಕವು ಯಾವ ನಿರ್ಣಯ ಕೈಗೊಳ್ಳುತ್ತದೋ ಆ ನಿರ್ಣಯವನ್ನು ತಾವು ಬೆಂಬಲಿಸುವುದಾಗಿ ರಾಜ್ಯದ ಕಾಂಗ್ರೆಸ್‌ ಉಸ್ತುವಾರಿ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ’ ಎಂದು ಗೋವಾ ವಿಧಾನಸಭೆ ವಿಪಕ್ಷ ನಾಯಕ ಹಾಗೂ ದಿಗಂಬರ ಕಾಮತ್‌ ಶನಿವಾರ ಹೇಳಿದ್ದಾರೆ. ಸ್ಥಳೀಯ ಪ್ರುಡೆಂಟ್‌ ಮೀಡಿಯಾ ಎಂಬ ಸುದ್ದಿವಾಹಿನಿ, ಕಾಮತ್‌ ಅವರ ಈ ಹೇಳಿಕೆಯನ್ನು ಪ್ರಕಟಿಸಿದೆ.

"

ಮಹದಾಯಿ ಬಗ್ಗೆ ಗೋವಾದ ವಿರುದ್ಧ ಕರ್ನಾಟಕ ಕಾನೂನು ಹೋರಾಟದಲ್ಲಿ ನಿರತವಾಗಿದೆ. ಇಂಥ ಸಂದರ್ಭದಲ್ಲಿ ದಿನೇಶ್‌ ಅವರು ಈ ರೀತಿ ಹೇಳಿದ್ದಾರೆ ಎಂಬ ಕಾಮತ್‌ ಹೇಳಿಕೆ ಮಹತ್ವ ಪಡೆದಿದೆ. ಪಕ್ಷದ ಉಸ್ತುವಾರಿಯ ಹೊಣೆಗಿಂತ ರಾಜ್ಯದ ಪರ ಹೆಚ್ಚು ನಿಲುವು ವ್ಯಕ್ತಪಡಿಸಬೇಕಾಗಿದ್ದ, ದಿನೇಶ್‌ ಗುಂಡೂರಾವ್‌ ಅವರ ಈ ಅಭಿಪ್ರಾಯ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಜೊತೆಗೆ ಮಹದಾಯಿ ವಿಷಯದಲ್ಲಿ ದಿನೇಶ್‌ ಗುಂಡೂರಾವ್‌ ಅವರು ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿದರಾ ಎಂಬ ಪ್ರಶ್ನೆಗಳೂ ಎದ್ದಿವೆ.

ದಿನೇಶ್‌ ಗುಂಡೂರಾವ್‌ ಅವರನ್ನು ಕೆಲ ದಿನಗಳ ಹಿಂದಷ್ಟೇ ಗೋವಾ ಕಾಂಗ್ರೆಸ್‌ ಪ್ರಭಾರಿಯನ್ನಾಗಿ ನೇಮಿಸಲಾಗಿತ್ತು. ಈ ನಡುವೆ ಅಕ್ಟೋಬರ್‌ 24ರಂದು ಗೋವಾಗೆ ಆಗಮಿಸಿದ ವೇಳೆ ದಿನೇಶ್‌ ಅವರು ‘ಮಹದಾಯಿ ವಿವಾದದಲ್ಲಿ ಸುಪ್ರೀಂ ಕೋರ್ಟ್‌ ತೀರ್ಮಾನವೇ ಅಂತಿಮ. ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕಿತ್ತು’ ಎಂದಿದ್ದರು. ಬಳಿಕ ಗೋವಾದಲ್ಲಿ, ‘ದಿನೇಶ್‌ ಗೋವಾ ಕಾಂಗ್ರೆಸ್‌ ಪ್ರಭಾರಿಯಾಗಿ ಗೋವಾವನ್ನು ಬೆಂಬಲಿಸಲಿಲ್ಲ’ ಎಂದು ಪ್ರತಿಭಟನೆಗಳು ಆರಂಭವಾಗಿದ್ದವು.