ದೇಶದ 4001 ಶಾಸಕರ ಬಳಿ 54000 ಕೋಟಿ ಸಂಪತ್ತು, ಚುನಾವಣೆ ವೇಳೆ ಶಾಸಕರು ಸಲ್ಲಿಸಿದ್ದ ಅಫಿಡವಿಟ್ ಆಧರಿಸಿ ಲೆಕ್ಕಾಚಾರ, ಎಡಿಆರ್, ಎನ್‌ಇಡಬ್ಲ್ಯು ಸಂಸ್ಥೆಗಳಿಂದ ವಿಶ್ಲೇಷಣೆಯ ವರದಿ ಬಿಡುಗಡೆ, ದೇಶದ ಶಾಸಕರ ಒಟ್ಟು ಆಸ್ತಿಯಲ್ಲಿ ಕರ್ನಾಟಕದವರ ಪಾಲು ಶೇ.26, ದೇಶದ ಬಿಜೆಪಿ ಶಾಸಕರ ತಲಾವಾರು ಸರಾಸರಿ ಆಸ್ತಿ 11.97 ಕೋಟಿ, ಕಾಂಗ್ರೆಸ್ ಶಾಸಕರ ಸರಾಸರಿ ತಲಾ ಆಸ್ತಿ 21.97 ಕೋಟಿ ರುಪಾಯಿ
ನವದೆಹಲಿ(ಆ.03): ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿರುವ 223 ಶಾಸಕರ ಒಟ್ಟು ಆಸ್ತಿ 14,359 ಕೋಟಿ ರುಪಾಯಿ. ಈ ಹಣ ಮಿಜೋರಂ ಹಾಗೂ ಸಿಕ್ಕಿಂನ 2023-24ರ ಬಜೆಟ್‌ಗೆ ಸಮ ಎಂದು ವರದಿಯೊಂದು ಬಣ್ಣಿಸಿದೆ.
ಜೊತೆಗೆ ದೇಶದ 4001 ಶಾಸಕರ ಒಟ್ಟು ಆಸ್ತಿ 54,545 ಕೋಟಿ ರುಪಾಯಿ. ಇದು ಮಿಜೋರಂ, ನಾಗಾಲ್ಯಾಂಡ್ ಹಾಗೂ ಸಿಕ್ಕಿಂ ರಾಜ್ಯಗಳ ಬಜೆಟ್ ಮೊತ್ತವಾದ 49,103 ಕೋಟಿ ರು.ಗಿಂತ ಅಧಿಕ ಎಂದು ಅಸೋಸಿಯೇಷನ್ ಫಾರ್ ಡೆಮೊಕ್ರಟಿಕ್ ರೀಸರ್ಚ್ (ಎಡಿಆರ್) ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ (ಎನ್‌ಇಡಬ್ಲ್ಯು) ವಿಶ್ಲೇಷಣೆ ಮಾಡಿವೆ.
ಶಾಸಕರು ಸಲ್ಲಿಸಿದ ಅಫಿಡವಿಟ್ ಆಧರಿಸಿ ಅವು ಈ ಲೆಕ್ಕಾಚಾರ ಹಾಕಿವೆ. ಒಟ್ಟಾರೆ 4033 ಶಾಸಕರ ಪೈಕಿ 4001 ಶಾಸಕರ ಚುನಾವಣಾ ಅಫಿಡವಿಟ್ಟುಗಳ ವಿಶ್ಲೇಷಣೆ ಮಾಡಲಾಗಿದೆ. ಎಲ್ಲರ ಆಸ್ತಿ ಸರಾಸರಿ ತೆಗೆದರೆ ಒಬ್ಬರಿಗೆ ತಲಾ 13.63 ಕೋಟಿ ರು. ಆಸ್ತಿ ಇದ್ದಂತಾಗಿದೆ.
ಕರ್ನಾಟಕದ ಒಂದು ವಿಶ್ವವಿದ್ಯಾಲಯ ಸೇರಿ, ದೇಶದ 20 ನಕಲಿ ವಿವಿಗಳ ಪಟ್ಟಿ ರಿಲೀಸ್ ಮಾಡಿದ ಯುಜಿಸಿ!
ಇನ್ನು ಪಕ್ಷವಾರು ಹೋಲಿಸಿದರೆ 1,356 ಬಿಜೆಪಿ ಶಾಸಕರ ತಲಾ ಆಸ್ತಿ 11.97 ಕೋಟಿ ರು., 719 ಕಾಂಗ್ರೆಸ್ ಶಾಸಕರ ತಲಾ ಆಸ್ತಿ 21.97 ಕೋಟಿ ರು. ಆಗಿದೆ. ಇನ್ನು ಬಿಜೆಪಿ ಶಾಸಕರ ಒಟ್ಟು ಆಸ್ತಿ 16,234 ಕೋಟಿ ರು. ಹಾಗೂ ಕಾಂಗ್ರೆಸ್ ಶಾಸಕರ ಆಸ್ತಿ 15,798 ಕೋಟಿ ರು. ಆಗಿದೆ. ಇದಲ್ಲದೆ, ದೇಶದ ಶಾಸಕರ ಒಟ್ಟು 54,545 ಕೋಟಿ ರು. ಆಸ್ತಿಯಲ್ಲಿ ಕರ್ನಾಟಕ ಶಾಸಕರ ಪಾಲು ಶೇ.26 ಆಗಿದೆ.
