ಆಘಾತಕಾರಿ ಘಟನೆಯೊಂದರಲ್ಲಿ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನನ್ನು ಅಲ್ಲಿಯೇ ಸಾಯಲು ಬಿಟ್ಟು ಆತನ ಬೈಕನ್ನು ಕದ್ದುಕೊಂಡು ಹೋದಂತಹ ಅಮಾನವೀಯ ಘಟನೆಯೊಂದು ಗುರುಗ್ರಾಮ್‌ ಬಳಿ ನಡೆದಿತ್ತು. ಆದರೆ ಹೀಗೆ ಮಾಡಿದ ಮೂವರು ಬೈಕ್ ಕಳ್ಳರಿಗೆ ದೇವರು ಆ ಕ್ಷಣದಲ್ಲೇ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ಶಿಕ್ಷೆ ನೀಡಿದ್ದು ಏನದು ಶಿಕ್ಷೆ ಮುಂದೆ ಓದಿ

ಆಘಾತಕಾರಿ ಘಟನೆಯೊಂದರಲ್ಲಿ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನನ್ನು ಅಲ್ಲಿಯೇ ಸಾಯಲು ಬಿಟ್ಟು ಆತನ ಬೈಕನ್ನು ಕದ್ದುಕೊಂಡು ಹೋದಂತಹ ಅಮಾನವೀಯ ಘಟನೆಯೊಂದು ಗುರುಗ್ರಾಮ್‌ ಬಳಿ ನಡೆದಿತ್ತು. ಆದರೆ ಹೀಗೆ ಮಾಡಿದ ಮೂವರು ಬೈಕ್ ಕಳ್ಳರಿಗೆ ದೇವರು ಆ ಕ್ಷಣದಲ್ಲೇ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ಶಿಕ್ಷೆ ನೀಡಿದ್ದು, ಬೈಕನ್ನು ಡ್ರೈವ್ ಮಾಡಿಕೊಂಡು ಹೋದ ಕೆಲ ನಿಮಿಷಗಳಲ್ಲಿ ಅವರಿಗೂ ಅಪಘಾತವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಗುರುಗ್ರಾಮ್ ಮೂಲದ ವಿಕಾಸ್‌ ಎಂಬುವವರು ಕಾಲ್ ಸೆಂಟರ್ ಉದ್ಯೋಗಿಯಾಗಿದ್ದು, ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ರಾತ್ರಿ ಮೂರು ಗಂಟೆ ಸುಮಾರಿಗೆ ಅವರ ಬೈಕ್ ಘಿತ್ರೊನಿ ಎಂಬಲ್ಲಿ ಸ್ಕಿಡ್ ಆಗಿ ಬಿದ್ದಿದೆ. ಇದರಿಂದ ವಿಕಾಸ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರು ರಸ್ತೆಯ ಮೇಲೆ ಬಿದ್ದಿದ್ದಾರೆ. ಇದರಿಂದ ವಿಕಾಸ್ ಪ್ರಜ್ಞೆ ಕಳೆದುಕೊಂಡಿದ್ದಾರೆ. ಇದೇ ವೇಳೆ ಆ ದಾರಿಯಲ್ಲಿ ಬಂದ ಮೂವರು ಖದೀಮರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ರಸ್ತೆಯಲ್ಲೇ ಸಾಯಲು ಬಿಟ್ಟು ಅವರ ಬೈಕ್ ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ. ಇತ್ತ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಿಕಾಸ್ ರಸ್ತೆಯಲ್ಲೇ ಸಾವನ್ನಪ್ಪಿದ್ದಾರೆ.

ಜನವರಿ 11ರಂದು ಈ ಘಟನೆ ನಡೆದಿದ್ದು, ಇದರ ಸಿಸಿಟಿವಿ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದಲೇ ಖದೀಮರು ವಿಕಾಸ್‌ನನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಆತನ ಬೈಕನ್ನು ಕದ್ದುಕೊಂಡು ಹೋಗಿರುವುದು ತಿಳಿದು ಬಂದಿದೆ. ಹಾಗೆಯೇ ಹೀಗೆ ಅಪಘಾತಕ್ಕೀಡಾದ ವಿಕಾಸ್‌ನನ್ನು ಆಸ್ಪತ್ರೆಗೆ ಸೇರಿಸದೇ ಆತನ ಬೈಕ್‌ನೊಂದಿಗೆ ಎಸ್ಕೇಪ್ ಆದವರನ್ನು ಉದಯ್‌ಕುಮಾರ್, ಟಿಂಕು ಹಾಗೂ ಪರಂಬೀರ್ ಎಂದು ಗುರುತಿಸಲಾಗಿದೆ. ಆರೋಪಿಗಳೆಲ್ಲರೂ ಫತೇಪುರ್ ಬೆರಿಯವರಾಗಿದ್ದಾರೆ. ಇತ್ತ ವಿಕಾಸ್ ತಲೆಗೆ ತೀವ್ರವಾಗಿ ಗಾಯಗೊಂಡಿದ್ದರಿಂದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. 

ವಿಕಾಸ್‌ನ ಬೈಕ್ ಎತ್ತಿಕೊಂಡು ಹೋದ ಮೂವರಿಗೆ ಮೆಹ್ರುಲಿ ಬದರ್‌ಪುರ ರಸ್ತೆಯಲ್ಲಿ ಅಪಘಾತವಾಗಿದೆ. ಮೊದಲೇ ಸ್ಕಿಡ್ ಆದ ಅಪಘಾತದಿಂದಾಗಿ ಮೋಟಾರ್ ಬೈಕ್ ಸ್ಥಿತಿ ಸರಿ ಇರಲಿಲ್ಲ, ಹೀಗಾಗಿ ಅದನ್ನೇರಿದ ಇವರಿಗೂ ಅಪಘಾತವಾಗಿದೆ. ಹೀಗಾಗಿ ಈ ಎರಡು ಘಟನೆಗಳಿಗೆ ಸಂಬಂಧಿಸಿದಂತೆ ಎರಡು ಪಿಸಿಆರ್ ಕರೆಗಳು ಬಂದವು, ಒಂದು ಎಂಜಿ ರಸ್ತೆಯಿಂದ ಮತ್ತು ಇನ್ನೊಂದು ಎಂಬಿ ರಸ್ತೆಯಿಂದ. ಎಂಜಿ ರಸ್ತೆ ತಲುಪಿದಾಗ ವಿಕಾಸ್ ಮೃತಪಟ್ಟಿರುವುದು ಕಂಡುಬಂದಿದೆ. ಉಳಿದ ಮೂವರು ಎಂಬಿ ರಸ್ತೆಯಲ್ಲಿ ಗಾಯಗೊಂಡಿರುವುದು ಕಂಡುಬಂದಿದ್ದು, ಅವರನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಯ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಆರೋಪಿಗಳಲ್ಲಿ ಒಬ್ಬನಾದ ಕುಮಾರ್‌ಗೆ ತೀವ್ರ ಗಾಯವಾಗಿದ್ದು, ಆತ ಕೋಮಾಗೆ ಜಾರಿದ್ದಾನೆ ಹಾಗೆಯೇ ಇನ್ನಿಬ್ಬರು ಆರೋಪಿಗಳಾದ ಟಿಂಕು ಹಾಗೂ ಪರಂಬೀರ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಫತೇಪುರ್ ಬೆರಿಯಲ್ಲಿ ನಡೆದ ತನಿಖೆಯಲ್ಲಿ ಆರೋಪಿಗಳು ಬೈಕ್ ಕದಿಯಲು ಯತ್ನಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಪ್ರಸ್ತುತ, ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಘಟನೆಗೆ ಕಾರಣವಾದ ಎರಡು ಡಾಟ್‌ಗಳನ್ನು ಸೇರಿಸಲು ಪೊಲೀಸರು ಲಭ್ಯವಿರುವ ಎಲ್ಲಾ ಸಾಕ್ಷಿಗಳನ್ನು ಪರಿಶೀಲಿಸುತ್ತಿದ್ದಾರೆ.