* ಜಿಗ್ನೇಶ್‌ ಮೇವಾನಿ ಮತ್ತು ಕನ್ಹಯ್ಯ ಕುಮಾರ್‌ ಕಾಂಗ್ರೆಸ್‌ಗೆ* ಗುಜರಾತ್‌ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ಮಹತ್ವದ ಬೆಳವಣಿಗೆ 

ಅಹಮದಾಬಾದ್‌(ಸೆ.26): ಗುಜರಾತ್‌ನ(gujarat) ಪಕ್ಷೇತರ ಶಾಸಕ ಜಿಗ್ನೇಶ್‌ ಮೇವಾನಿ(Gujarat Mevani) ಮತ್ತು ಜೆಎನ್‌ಯು(JNU) ಮಾಜಿ ವಿದ್ಯಾರ್ಥಿ ನಾಯ​ಕ ಕನ್ಹಯ್ಯ ಕುಮಾರ್‌(Kanhaiya Kumar) ಸೆ.28ರಂದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಆಡಳಿತದ ಗುಜರಾತ್‌ನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ಇರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

‘ಸೆ.28ರಂದು ಕನ್ಹಯ್ಯ ಕುಮಾರ್‌ ಜೊತೆಗೆ ಕಾಂಗ್ರೆಸ್‌ ಪಕ್ಷ ಸೇರುತ್ತಿದ್ದೇನೆ. ಪಕ್ಷಕ್ಕೆ ಸೇರುವ ಕಾರ್ಯಕ್ರಮದಲ್ಲಿ ಗುಜರಾತ್‌ ಕಾಂಗ್ರೆಸ್‌(Congress) ಕಾರ್ಯಾಧ್ಯಕ್ಷ ಹಾರ್ದಿಕ್‌ ಪಟೇಲ್‌ ಸಹಾ ಭಾಗವಹಿಸಲಿದ್ದಾರೆ’ ಎಂದು ಮೇವಾನಿ ಹೇಳಿದ್ದಾರೆ.

‘ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುವ ಉತ್ಸುಕತೆ ಇರುವ ಯುವಕರನ್ನು, ಮಹಾತ್ಮ ಗಾಂಧಿ, ನೆಹರು, ಸರ್ದಾರ್‌ ಅವರ ಧ್ಯೇಯಗಳೊಂದಿಗೆ ಕೆಲಸ ಮಾಡುವವರನ್ನು ಕಾಂಗ್ರೆಸ್‌ ಪಕ್ಷ ಸ್ವಾಗತಿಸುತ್ತದೆ ಎಂದು ಗುಜರಾತ್‌ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಹಾರ್ದಿಕ್‌ ಪಟೇಲ್‌ ಹೇಳಿದ್ದಾರೆ.

ಜಿಗ್ನೇಶ್‌ಗೆ ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸ್ಥಾನ

ಸದ್ಯ ಗುಜರಾತ್‌ನ ವಡ್ಗಾಂ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುತ್ತಿರುವ ದಲಿತ ಮುಖಂಡ ಜಿಗ್ನೇಶ್‌ ಅವರಿಗೆ ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸ್ಥಾನಮಾನ ನೀಡಲು ನಿರ್ಧರಿಸಲಾಗಿದೆ. ಇನ್ನು ಕನ್ಹಯ್ಯ ಕುಮಾರ್‌ ಅವರಿಗೆ ಪಕ್ಷದ ಪ್ರಮುಖ ರಾಷ್ಟ್ರೀಯ ಜವಾಬ್ದಾರಿಯನ್ನು ನೀಡಿ, ಬಿಹಾರದಲ್ಲಿ ಪಕ್ಷದ ಏಳಿಗೆಗಾಗಿ ಅವರ ಸೇವೆಯನ್ನು ಬಳಸಿಕೊಳ್ಳುವುದು ಕಾಂಗ್ರೆಸ್‌ ನಿರ್ಧಾರ ಎನ್ನಲಾಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿರುವ ಕನ್ಹಯ್ಯ ಕುಮಾರ್‌ ಅವರು ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಾರೆ 2022ರ ವಿವಿಧ ರಾಜ್ಯಗಳ ಚುನಾವಣೆ ಮತ್ತು 2024 ಲೋಕಸಭೆ ಚುನಾವಣೆಗೆ ಪಕ್ಷವನ್ನು ಹುರುಪುಗೊಳಿಸಲು ನಿರ್ಧರಿಸಿರುವ ಕಾಂಗ್ರೆಸ್‌ ಮುಖಂಡರು, ಯುವ ಮತ್ತು ಹೆಚ್ಚು ಮತಬ್ಯಾಂಕ್‌ ಹೊಂದಿದ ಅನ್ಯ ಪಕ್ಷಗಳ ನಾಯಕರನ್ನು ಕಾಂಗ್ರೆಸ್‌ಗೆ ಬರ ಮಾಡಿಕೊಳ್ಳುತ್ತಿದ್ದಾರೆ.