ಸಿನಿಮಾದಲ್ಲಿ ಹೀರೋ ಎಂಟ್ರಿ ರೀತಿ ಬರೋಬ್ಬರಿ 400 ಕಾರು ಬೆಂಗಾವಲಾಗಿ ಹೊರಟರೆ, 300 ಕಿಲೋಮೀಟರ್ ದೂರ ಪ್ರಯಾಣಿಸಿದ ನಾಯಕ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದಾರೆ. ವಿಧಾನಸಭಾ ಚುನಾವಣೆ ಬೆನ್ನಲ್ಲೇ ಈ ನಡೆ ಭಾರಿ ಸಂಚಲನ ಸೃಷ್ಟಿಸಿದೆ.
ಭೋಪಾಲ್(ಜೂ.16): 300 ಕಿಲೋಮೀಟರ್ ದೂರ, 400 ಬೆಂಗಾವಲು ವಾಹನ. ಅತೀ ವೇಗದಲ್ಲಿ ಸಿನಿಮಾ ಹೀರೋ ರೀತಿ ಪ್ರಯಾಣಿಸಿ ಬಿಜೆಪಿ ನಾಯಕ ಮರಳಿ ಕಾಂಗ್ರೆಸ್ ಸೇರಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ಪಕ್ಷಾಂತರ ಪರ್ವ ಜೋರಾಗುತ್ತಿದೆ. ಆದರೆ ಕಳೆದ ಬಾರಿ ಕಮಲ್‌ನಾಥ್ ಸರ್ಕಾರವನ್ನು ಬೀಳಿಸಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ನೆರವು ನೀಡಿದ್ದ ಭೈಜನಾಥ್ ಸಿಂಗ್ ಇದೀಗ ಮತ್ತೆ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಚುನಾವಣೆ ಬೆನ್ನಲ್ಲೇ ಈ ನಡೆ ಕಾಂಗ್ರೆಸ್ ಶಕ್ತಿ ವರ್ಧಿಸಿದರೆ, ಬಿಜೆಪಿ ತಲೆನೋವು ಹೆಚ್ಚಿಸಿದೆ.
ಭೈಜನಾಥ್ ಸಿಂಗ್ ಮಧ್ಯಪ್ರದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಅಂದು ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲು ಭೈಜನಾಥ್ ಸಿಂಗ್ ನೆರವಾಗಿದ್ದರು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ. ಶಿವಪುರಿ ಕ್ಷೇತ್ರದ ಶಾಸಕ ಭೈಜನಾಥ್ ಸಿಂಗ್ ಶಿವಪುರಿಯಿಂದ ತಮ್ಮ ಬೆಂಬಲಿಗರೊಂದಿಗೆ 400 ಕಾರಿನ ಮೂಲಕ ಭೋಪಾಲ್‌ಗೆ ತೆರಳಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ಗ್ಯಾರಂಟಿಗೆ ಚಾಲನೆ ನೀಡಲು ಮಧ್ಯಪ್ರದೇಶದಿಂದ ಬರ್ತಾರೆ ಡಿಕೆಶಿ
ಭೋಪಾಲ್‌ಗೆ ತೆರಳಿ ಮರಳಿ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ಈ ಬಾರಿ ಭೈಜನಾಥ್ ಸಿಂಗ್‌ಗೆ ಬಿಜೆಪಿಯಿಂದ ಟಿಕೆಟ್ ಸಿಗುವ ಸಾಧ್ಯತೆ ಇಲ್ಲ. ಟಿಕೆಟ್ ಅಕಾಂಕ್ಷಿಯಾಗಿರುವ ಭೈಜನಾಥ್ ಸಿಂಗ್ ಇದೇ ಕಾರಣಕ್ಕೆ ಕಾಂಗ್ರೆಸ್ ಸೇರಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಭೈಜನಾಥ್ ಸಿಂಗ್‍ಗೆ ಶಿವಪುರಿಯಿಂದಲೇ ಕಾಂಗ್ರೆಸ್ ಟಿಕೆಟ್ ನೀಡುವ ಸಾಧ್ಯತೆಗಳಿವೆ.
2020ರಲ್ಲಿ ಮಧ್ಯಪ್ರದೇಶ ಕಾಂಗ್ರೆಸ್‌ನಲ್ಲಿ ಬಂಡಾಯ ಜೋರಾಗಿತ್ತು. ಪ್ರಭಾವಿ ನಾಯಕ ಜೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಹಲವು ನಾಯಕರ ಜೊತೆಗೆ ಬಿಜೆಪಿ ಸೇರಿಕೊಂಡಿದ್ದರು. ಇಷ್ಟೇ ಅಲ್ಲ ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಂಡಿತ್ತು. ಬಳಿಕ ಶಿವರಾಜ್ ಸಿಂಗ್ ಚವ್ಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.
ಈ ಬಾರಿ ಮಧ್ಯ ಪ್ರದೇಶ ಚನಾವಣೆ ಗೆಲ್ಲಲು ಪ್ರಿಯಾಂಕಾ ಗಾಂಧಿಗೆ ಎಲ್ಲಾ ಜವಾಬ್ದಾರಿ ನೀಡಲು ಕಾಂಗ್ರೆಸ್ ಮುಂದಾಗಿದೆ. ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಹೀಗಾಗಿ ಪ್ರಿಯಾಂಕಾ ಗಾಂಧಿ ಮುಂಬರುವ ತೆಲಂಗಾಣ ಹಾಗೂ ಮಧ್ಯ ಪ್ರದೇಶಗಳ ಚುನಾವಣೆ ಕಡೆ ಗಮನಹರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಈಗ ಬಿಜೆಪಿಯಿಂದಲೂ ಫ್ರೀ ಸ್ಕೀಂ: ಈ ರಾಜ್ಯದ ಸ್ತ್ರೀಯರಿಗೆ 1000 ರೂ. ಬಂಪರ್
ಉತ್ತರ ಪ್ರದೇಶ ಹಾಗೂ ಕರ್ನಾಟಕದಲ್ಲಿ ನಡೆಸಿದ ಮಹಿಳಾ ಸಂವಾದ ಎಂಬ ಕಾರ್ಯಕ್ರಮವನ್ನು ಇಲ್ಲೂ ನಡೆಸಲಿದ್ದು, ಇದರಲ್ಲಿ ಮಹಿಳೆಯರಿಗೆ 1500 ರು. ಭತ್ಯೆ, ಅಡುಗೆ ಅನಿಲವನ್ನು ಕೇವಲ 500 ರೂ.ಗಳಿಗೆ ನೀಡುವ ಗ್ಯಾರಂಟಿ ಹಾಗೂ ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಸಂಚಾರ ಎಂಬ ಭರವಸೆಗಳನ್ನು ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ ಈ ಹಿಂದೆ ಪ್ರಿಯಾಂಕಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಿರುಸಿನ ಪ್ರಚಾರವನ್ನು ಯಶಸ್ವಿಯಾಗಿ ತಡೆದು ರಾಹುಲ್ ಗಾಂಧಿಯೊಂದಿಗೆ ಕಾಂಗ್ರೆಸ್ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
