ಫೋಬ್ಸ್‌ರ್‍ಗಂಜ್‌/ಸಹಾರ್ಸ(ನ.04): ಬಿಹಾರ ಚುನಾವಣೆಯ 2ನೇ ಹಂತದ ಮತದಾನದ ದಿನವೇ ಆರ್‌ಜೆಡಿ- ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಜಂಗಲ್‌ರಾಜ್‌ ಮಿತ್ರರಿಗೆ ‘ಭಾರತ ಮಾತಾ ಕೀ ಜೈ’ ಹಾಗೂ ‘ಜೈ ಶ್ರೀರಾಮ್‌’ ಘೋಷಣೆ ಕಂಡರೆ ಆಗುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಬಿಹಾರದ ಅರಾರಿಯಾ, ಸಹಾರ್ಸದಲ್ಲಿ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ಜನರು ಭಾರತ ಮಾತಾ ಕೀ ಜೈ ಎನ್ನುವುದು ಜಂಗಲ್‌ ರಾಜ್‌ ನಡೆಸಿದವರಿಗೆ ಹಾಗೂ ಅವರ ಮಿತ್ರರಿಗೆ ರುಚಿಸುತ್ತಿಲ್ಲ. ಭಾರತ ಮಾತಾ ಕೀ ಜೈ ಎಂದುಬಿಟ್ಟರೆ ಇವರೆಲ್ಲಾ ಜ್ವರ ಬಂದ ರೀತಿ ಆಡುತ್ತಾರೆ. ಆ ಘೋಷಣೆಯನ್ನೇ ಜನ ಕೂಗಬಾರದು ಎಂದು ಅವರ ಮಿತ್ರರು ಬಯಸುತ್ತಾರೆ. ಆ ಘೋಷಣೆ ಕೇಳಿದರೆ ಅವರಿಗೆ ತಲೆ ನೋವು ಬರುತ್ತದೆ. ಜೈ ಶ್ರೀರಾಮ್‌ ಘೋಷಣೆಯನ್ನೂ ಅವರು ಬಯಸುವುದಿಲ್ಲ. ಇದೀಗ ಅದೇ ವ್ಯಕ್ತಿಗಳು ಮತ ಕೇಳಲು ಬಂದಿದ್ದಾರೆ. ತಕ್ಕ ಉತ್ತರ ಕೊಡಿ ಎಂದು ಕರೆ ನೀಡಿದರು.

ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ ಸರ್ಕಾರ ಕಳೆದ 10 ವರ್ಷಗಳಲ್ಲಿ ಜನರ ಅವಶ್ಯಕತೆಗಳನ್ನು ಈಡೇರಿಸಿದೆ. ಈಗ ಆಕಾಂಕ್ಷೆಗಳತ್ತ ಗಮನಹರಿಸಿದೆ. ಮೊದಲ ಹಾಗೂ 2ನೇ ಹಂತದ ಮತದಾನವನ್ನು ಗಮನಿಸಿದರೆ, ಬಿಹಾರ ಡಬಲ್‌ ಯುವರಾಜರನ್ನು ತಿರಸ್ಕರಿಸಿದೆ ಎಂದು ಹೇಳಿದರು.

ಬಿಹಾರದಲ್ಲಿ ರೌಡಿಸಂ, ಸುಲಿಗೆ ಸೋಲುತ್ತಿದೆ. ಅಭಿವೃದ್ಧಿ, ಕಾನೂನು- ಸುವ್ಯವಸ್ಥೆ ಗೆಲ್ಲುತ್ತಿದೆ. ಪರಿವಾರವಾದವನ್ನು ಜನತಂತ್ರ ಮಣಿಸುತ್ತಿದೆ. ದಶಕದ ಹಿಂದೆ ಅಧಿಕಾರದಲ್ಲಿದ್ದವರು ಬಡ ಜನರ ಮತ ಹಕ್ಕನ್ನೂ ಕಸಿದುಕೊಂಡಿದ್ದರು. ಮನೆಯಿಂದ ಹೊರಬರಲೂ ಬಿಡುತ್ತಿರಲಿಲ್ಲ. ಮತಗಟ್ಟೆಗಳನ್ನೇ ವಶಕ್ಕೆ ತೆಗೆದುಕೊಳ್ಳುತ್ತಿದ್ದರು. ಇದೀಗ ಅದೇ ವ್ಯಕ್ತಿಗಳು ಮತ್ತೆ ಬಿಹಾರದಲ್ಲಿ ಗದ್ದುಗೆ ಹಿಡಿಯಲು ಯತ್ನಿಸುತ್ತಿದ್ದಾರೆ. ಬಿಹಾರದ ಜನತೆಯನ್ನು ಈ ಬಾರಿ ದಾರಿ ತಪ್ಪಿಸಲು ಆಗದು ಎಂಬುದೇ ಅವರಿಗೆ ತಿಳಿದಿಲ್ಲ ಎಂದು ಹೇಳಿದರು.

ಬಡತನ ನಿರ್ಮೂಲನೆ, ಕೃಷಿ ಸಾಲ ಮನ್ನಾ, ಒನ್‌ ರಾರ‍ಯಂಕ್‌ ಒನ್‌ ಪೆನ್ಷನ್‌ ವಿಚಾರವಾಗಿ ಕಾಂಗ್ರೆಸ್‌ ಯಾವಾಗಲೂ ಸುಳ್ಳು ಭರವಸೆಗಳನ್ನೇ ನೀಡುತ್ತಾ ಬಂದಿದೆ. ಹೀಗಾಗಿಯೇ ಆ ಪಕ್ಷ ಸಂಸತ್ತಿನ ಉಭಯ ಸದನಗಳಲ್ಲಿ ಒಟ್ಟಾರೆ 100ಕ್ಕಿಂತ ಕಡಿಮೆ ಸದಸ್ಯರನ್ನು ಹೊಂದಿದೆ. ಉತ್ತರಪ್ರದೇಶ ಹಾಗೂ ಬಿಹಾರದಂತಹ ರಾಜ್ಯಗಳಲ್ಲಿ 3, 4ನೇ ಸ್ಥಾನಕ್ಕೆ ಕುಸಿದಿದೆ. ಅಸ್ತಿತ್ವಕ್ಕಾಗಿ ಬೇರೆ ಪಕ್ಷಗಳನ್ನು ಅವಲಂಬಿಸುವಂತಾಗಿದೆ ಎಂದು ಚಾಟಿ ಬೀಸಿದರು.