ಚೆನ್ನೈ/ನವದೆಹಲಿ(ಜ.03): ತಮಿಳುನಾಡು ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್‌ ಪಕ್ಷವು ಪಕ್ಷದ ತನ್ನ ಇಡೀ ರಾಜ್ಯ ಘಟಕವನ್ನು ಪುನಾರಚಿಸಿ ‘ಜಂಬೋ ಸಮಿತಿ’ಗಳನ್ನು ಸೃಷ್ಟಿಸಿದೆ. ಆದರೆ ಇದಕ್ಕೆ ಆರಂಭದಲ್ಲೇ ಅಪಸ್ವರ ಕೇಳಿಬಂದಿದ್ದು, ಯುವ ಮುಖಂಡ ಕಾರ್ತಿ ಚಿದಂಬರಂ ಆಕ್ಷೇಪ ಎತ್ತಿದ್ದಾರೆ.

ಪಕ್ಷವು ರಾಜ್ಯ ಘಟಕಕ್ಕೆ 32 ಉಪಾಧ್ಯಕ್ಷರು, 57 ಪ್ರಧಾನ ಕಾರ್ಯದರ್ಶಿಗಳು ಹಾಗೂ 104 ಕಾರ್ಯದರ್ಶಿಗಳನ್ನು ನೇಮಿಸಿದೆ. ಇದರ ಜತೆಗೆ 56 ಸದಸ್ಯರ ಕಾರ್ಯಕಾರಿಣಿ ಸಮಿತಿ ಹಾಗೂ 34 ಸದಸ್ಯರ ಚುನಾವಣಾ ಸಮಿತಿಯನ್ನೂ ಅದು ರಚಿಸಿದೆ.

ಕಾರ್ಯಕಾರಿಣಿ ಸಮಿತಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್‌. ಅಳಗಿರಿ, ಮಾಜಿ ಕೇಂದ್ರ ಸಚಿವರಾದ ಪಿ.ಚಿದಂಬರಂ, ಮಣಿಶಂಕರ್‌ ಅಯ್ಯರ್‌, ಯುವ ಮುಖಂಡ ಕಾರ್ತಿ ಚಿದಂಬರಂ, ಮೊದಲಾದವರಿದ್ದಾರೆ. ಚುನಾವಣಾ ಸಮಿತಿಯಲ್ಲೂ ಚಿದು ಹಾಗೂ ಅಯ್ಯರ್‌ ಸ್ಥಾನ ಪಡೆದಿದ್ದಾರೆ.

ಆದರೆ ಇದಕ್ಕೆ ಕಾರ್ತಿ ಚಿದಂಬರಂ ಆಕ್ಷೇಪ ಎತ್ತಿದ್ದಾರೆ. ‘ಇಂಥ ಬೃಹತ್‌ ಸಮಿತಿಗಳು ಪಕ್ಷ ಗೆಲ್ಲಲು ಸಹಾಯ ಮಾಡಲ್ಲ. ಹೊಣೆಗಾರಿಕೆಯನ್ನು ಇನ್ನೊಬ್ಬರ ಮೇಲೆ ಎತ್ತಿಹಾಕಲು ಅನುಕೂಲ ಮಾಡುತ್ತವೆ. ಯಾರಿಗೂ ಅಧಿಕಾರವಿಲ್ಲ ಎಂದಾದಲ್ಲಿ ಯಾರಿಗೂ ಹೊಣೆಗಾರಿಕೆ ಇರಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.