ನವದೆಹಲಿ(ಅ.28): ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ಪ್ರಕರಣವೊಂದರ ವರ್ಚುವಲ್‌ ವಿಚಾರಣೆಯ ವೇಳೆ ವಕೀಲರೊಬ್ಬರು ಅಂಗಿ ಧರಿಸದೇ ಬರಿ ಮೈನಲ್ಲಿ ಹಾಜರಾಗಿ ಮುಜುಗರ ಸೃಷ್ಟಿಸಿದ ಘಟನೆ ನಡೆದಿದೆ.

ಸುದರ್ಶನ ಟೀವಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ವೇಳೆ ವಕೀಲರೊಬ್ಬರು ಶರ್ಟ್‌ ಧರಿಸದೇ ವಿಡಿಯೋದಲ್ಲಿ ಕಾಣಿಸಿಕೊಂಡರು. ನ್ಯಾಯಪೀಠದ ಮುಖ್ಯಸ್ಥರಾಗಿದ್ದ ನ್ಯಾ| ಡಿ.ವೈ. ಚಂದ್ರಚೂಡ್‌ ಅವರು ಯಾರು ಆ ವಕೀಲ ಎಂದು ಪ್ರಶ್ನಿಸಿದರು. ಕೂಡಲೇ ವಿಚಾರಣೆಯಿಂದ ವಕೀಲ ಲಾಗೌಟ್‌ ಆದರು ಎಂದು ವರದಿಗಳು ತಿಳಿಸಿವೆ.

ವಕೀಲರ ಈ ರೀತಿ ವರ್ತನೆಗೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾ|ಚಂದ್ರಚೂಡ್‌ ಅವರು, ಸಂಬಂಧಿಸಿದ ವಕೀಲರ ಜತೆ ಮಾತನಾಡಿ ಮುಂದೆ ಈ ರೀತಿಯ ತಪ್ಪು ಆಗದಂತೆ ನೋಡಿಕೊಳ್ಳಲು ಹೇಳಿ ಎಂದು ತಿಳಿಸಿದರು. ಪೀಠದಲ್ಲಿದ್ದ ಮಹಿಳಾ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರು, ಇದು ಕೆಟ್ಟನಡವಳಿಕೆ ಎಂದು ಬಣ್ಣಿಸಿದರು.

ಕೋರ್ಟ್‌ ವರ್ಚುವಲ್‌ ವಿಚಾರಣೆಯ ವೇಳೆ ವಕೀಲರು ಅನುಚಿತವಾಗಿ ನಡೆದುಕೊಂಡಿದ್ದು ಇದೇ ಮೊದಲಲ್ಲ. ಈ ಮುನ್ನ ಹಿರಿಯ ವಕೀಲರೊಬ್ಬರು ವಿಚಾರಣೆಯ ವೇಳೆ ಸಿಗರೇಟ್‌ ಸೇದುತ್ತಿರುವುದು ಕಂಡುಬಂದಿತ್ತು. ಬಳಿಕ ಅವರಿಗೆ ಗುಜರಾತ್‌ ಹೈಕೋರ್ಟ್‌ 10 ಸಾವಿರ ರು. ದಂಡ ವಿಧಿಸಿತ್ತು.