ನವದೆಹಲಿ[ಜ.14]: ಬಿಜೆಪಿಯ ಹಾಲಿ ಕಾರ್ಯಾಧ್ಯಕ್ಷರಾಗಿರುವ ಜೆ.ಪಿ. ನಡ್ಡಾ (59) ಅವರಿಗೆ ಮುಂದಿನ ವಾರ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಬಡ್ತಿ ದೊರೆಯುವ ಸಾಧ್ಯತೆಗಳು ಇವೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಅಧ್ಯಕ್ಷರ ಚುನಾವಣೆ ಕುರಿತು ಶೀಘ್ರದಲ್ಲೇ ವೇಳಾಪಟ್ಟಿಪ್ರಕಟವಾಗಲಿದೆ. ನಂತರ ನಡ್ಡಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತದೆ. ಜ.20ರಂದು ನಡ್ಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ವಿವರಿಸಿವೆ.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಸಾರ್ವತ್ರಿಕ ಲೋಕಸಭೆ ಚುನಾವಣೆ ಬಳಿಕ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿ ಗೃಹ ಮಂತ್ರಿಯಾದ ಹಿನ್ನೆಲೆಯಲ್ಲಿ 2019ರ ಜುಲೈನಲ್ಲಿ ಜೆ.ಪಿ. ನಡ್ಡಾ ಅವರನ್ನು ಕಾರ್ಯಾಧ್ಯಕ್ಷ ಸ್ಥಾನಕ್ಕೆ ತರಲಾಗಿತ್ತು.

ಅತ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬದಲಾವಣೆ: ಇತ್ತ ರಾಜ್ಯದ 18 ಹೊಸ ಜಿಲ್ಲಾಧ್ಯಕ್ಷರ ನೇಮಕ

ರಾಜಕೀಯವಾಗಿ ಮಹತ್ವದ್ದಾಗಿರುವ ಉತ್ತರಪ್ರದೇಶದಲ್ಲಿ ಲೋಕಸಭೆ ಚುನಾವಣೆಯ ವೇಳೆ ನಡ್ಡಾ ಅವರು ಪ್ರಚಾರ ಉಸ್ತುವಾರಿಯಾಗಿದ್ದರು. 80 ಸ್ಥಾನಗಳಿರುವ ಆ ರಾಜ್ಯದಲ್ಲಿ ಎಸ್ಪಿ- ಬಿಎಸ್ಪಿ ಮೈತ್ರಿಯಿಂದ ಎದುರಾಗಿದ್ದ ಪೈಪೋಟಿಯ ನಡುವೆಯೂ 62 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಇದಲ್ಲದೆ ಹಲವು ರಾಜ್ಯಗಳ ಚುನಾವಣಾ ವ್ಯವಹಾರಗಳನ್ನು ನಡ್ಡಾ ಅವರು ನಿರ್ವಹಿಸಿದ್ದರು.

ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಸಂಪುಟ ದರ್ಜೆ ಸಚಿವರಾಗಿ ಕಾರ್ಯನಿರ್ವಹಿಸಿರುವ ನಡ್ಡಾ ಅವರು ಪಕ್ಷದ ಪರಮೋಚ್ಚ ನೀತಿ ನಿರೂಪಣಾ ಮಂಡಳಿಯಾಗಿರುವ ಸಂಸದೀಯ ಪಕ್ಷದ ಸದಸ್ಯ ಕೂಡ ಆಗಿದ್ದಾರೆ. ದೆಹಲಿ ಮತ್ತು ಬಿಹಾರ ವಿಧಾನಸಭಾ ಚುನಾವಣೆಗಳು ನಡ್ಡಾ ಅವರ ಪಾಲಿಗೆ ಮೊದಲ ಅಗ್ನಿಪರೀಕ್ಷೆಯಾಗಲಿದೆ.

ಜೆ.ಪಿ.ನಡ್ಡಾ ಬಿಜೆಪಿ ಕಾರ್ಯಾಧ್ಯಕ್ಷ, ಪಕ್ಷದಲ್ಲಿ ಹೊಸ ಹುದ್ದೆ ಸೃಷ್ಟಿ!