Asianet Suvarna News Asianet Suvarna News

ಭಾರತಕ್ಕೆ ಬಂತು 5ನೇ ಲಸಿಕೆ: ಶೇ.85ರಷ್ಟು ಪರಿಣಾಮಕಾರಿ ಈ ಲಸಿಕೆ!

* ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಲಸಿಕೆಗೆ ಕೇಂದ್ರ ಅಸ್ತು

* ಭಾರತಕ್ಕೆ ಬಂತು 5ನೇ ಲಸಿಕೆ

* ಶೇ.85ರಷ್ಟು ಪರಿಣಾಮಕಾರಿ ಈ ಲಸಿಕೆ!

Johnson and Johnson Single Dose Covid Vaccine Approved In India pod
Author
Bangalore, First Published Aug 8, 2021, 7:47 AM IST

ನವದೆಹಲಿ(ಆ.08): ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ದೇಶ, ಶನಿವಾರ ಮತ್ತೊಂದು ಆಶಾದಾಯಕ ಬೆಳವಣಿಗೆ ಕಂಡಿದೆ. ಶೇ.85ರಷ್ಟುಪರಿಣಾಮಕಾರಿ ಎಂದು ಸಾಬೀತಾಗಿರುವ ಅಮೆರಿಕದ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಸಿಂಗಲ್‌ ಡೋಸ್‌ ಲಸಿಕೆಯ ತುರ್ತುಬಳಕೆಗೆ ಶನಿವಾರ ಭಾರತ ಅನುಮೋದನೆ ನೀಡಿದೆ. ಇದರಿಂದಾಗಿ ದೇಶಕ್ಕೆ 5ನೇ ಲಸಿಕೆ ಪ್ರವೇಶಿಸಿದಂತಾಗಿದೆ.

ಶುಕ್ರವಾರ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿ, ಭಾರತದ ಔಷಧ ನಿಯಂತ್ರಣ ಸಂಸ್ಥೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಈ ಕೋರಿಕೆಗೆ ಅದೇ ದಿನ ಆನುಮೋದನೆ ದೊರಕಿದೆ. 18 ವರ್ಷ ಮೇಲ್ಪಟ್ಟವರಿಗೆ ಈ ಲಸಿಕೆ ನೀಡಲಾಗುತ್ತದೆ.

ಜಾನ್ಸನ್‌ ಕಂಪನಿಯ ಲಸಿಕೆಯ, ಇತ್ತೀಚೆಗೆ ವಿಶ್ವದಾದ್ಯಂತ ಅತ್ಯಂತ ಮಾರಕ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಡೆಲ್ಟಾತಳಿಯ ವೈರಸ್‌ಗಳ ಮೇಲೂ ಪರಿಣಾಮಕಾರಿ ಎಂದು ಸಾಬೀತಾಗಿದೆ. ಜೊತೆಗೆ ಒಂದು ಡೋಸ್‌ ಲಸಿಕೆ ಕನಿಷ್ಠ 8 ತಿಂಗಳವರೆಗೆ ದೇಹಕ್ಕೆ ರಕ್ಷಣೆ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಹೊಸ ಲಸಿಕೆ:

‘ಭಾರತ ತನ್ನ ಲಸಿಕೆಯ ‘ಬಾಸ್ಕೆಟ್‌’ ವಿಸ್ತರಿಸಿಕೊಳ್ಳುತ್ತಿದೆ. ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ’ ಎಂದು ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಪ್ರಕಟಿಸಿದ್ದಾರೆ. ಜಾನ್ಸನ್‌ ಕಂಪನಿ ಕೂಡ ಇದಕ್ಕೆ ಹರ್ಷ ವ್ಯಕ್ತಪಡಿಸಿದ್ದು, ಕೋವಿಡ್‌ ನಿರ್ಮೂಲನೆಯತ್ತ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದಂತಾಗಿದೆ ಎಂದಿದೆ.

ಈವರೆಗೆ ಭಾರತದಲ್ಲಿ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌, ಸ್ಪುಟ್ನಿಕ್‌, ಮಾಡೆರ್ನಾ ಲಸಿಕೆಗಳು ಲಭ್ಯ ಇದ್ದವು. ಇವುಗಳ ಸಾಲಿಗೆ ಈಗ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಲಸಿಕೆ ಕೂಡ ಸೇರಿಕೊಂಡಂತಾಗಿದೆ. ಈವರೆಗೆ ಭಾರತದಲ್ಲಿರುವ ಬಹುತೇಕ ಲಸಿಕೆಗಳು ಎರಡು ಡೋಸ್‌ನದ್ದಾಗಿದ್ದರೆ, ಜಾನ್ಸನ್‌ ಲಸಿಕೆ ಸಿಂಗಲ್‌ ಡೋಸ್‌ನದ್ದಾಗಿದೆ.

ಈ ಮುಂಚೆ ಜಾನ್ಸನ್‌ ಕಂಪನಿ 3ನೇ ಹಂತದ ಪರೀಕ್ಷೆಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ ವಿದೇಶದಲ್ಲಿ ಅನುಮೋದನೆ ಪಡೆದ ಲಸಿಕೆಗಳ ಪ್ರಯೋಗ ಭಾರತದಲ್ಲಿ ಅಗತ್ಯವಿಲ್ಲ ಎಂದು ಮೋದಿ ಸರ್ಕಾರ ಇತ್ತೀಚೆಗೆ ನಿಯಮ ಬದಲಿಸಿತ್ತು. ಈ ಪ್ರಕಾರ ಪ್ರಯೋಗದ ಅರ್ಜಿ ಹಿಂಪಡೆದಿದ್ದ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿ, ತುರ್ತು ಬಳಕೆಗೆ ಅನುಮೋದನೆ ನೀಡಿ ಎಂದು ಶುಕ್ರವಾರ ಅರ್ಜಿ ಸಲ್ಲಿಸಿತ್ತು. ವಿದೇಶಗಳಲ್ಲಿ ಈ ಲಸಿಕೆ ಶೇ.85ರಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ.

Follow Us:
Download App:
  • android
  • ios