ನವದೆಹಲಿ[ಜ.08]: ಪ್ರತಿಷ್ಠಿತ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮುಸುಕುಧಾರಿ ದಾಳಿಕೋರರ ಪತ್ತೆಗೆ ದೆಹಲಿ ಪೊಲೀಸರು ಫೇಸ್‌ ರೆಕಗ್ನಿಷನ್‌ ವ್ಯವಸ್ಥೆಯ ಮೊರೆ ಹೋಗಿದ್ದಾರೆ. ಇದೇ ವೇಳೆ, ಲಭ್ಯವಿರುವ ಎಲ್ಲ ವಿಡಿಯೋಗಳ ಪರಿಶೀಲನೆಯನ್ನು ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ, ಹಿಂಸಾಚಾರ ಕುರಿತು ಯಾವುದೇ ಪ್ರತಿಕ್ರಿಯೆ ನೀಡದೆ ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಗಿದ್ದ ಜೆಎನ್‌ಯು ಉಪಕುಲಪತಿ ಜಗದೀಶ ಕುಮಾರ್‌ ಅವರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ದಾಳಿಕೋರರಿಂದ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಭಾರಿ ಹಾನಿಯಾಗಿದೆ. ದಾಳಿಕೋರರನ್ನು ಗುರುತಿಸಿ, ಅವರಿಂದಲೇ ನಷ್ಟ ವಸೂಲಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

JNU ಹೋರಾಟಕ್ಕೆ ದೀಪಿಕಾ ಪಡುಕೋಣೆ ಬೆಂಬಲ!

ಈ ನಡುವೆ, ಹಿಂಸಾಚಾರದ ಮುನ್ನಾದಿನ ವಿವಿಯಲ್ಲಿನ ಭದ್ರತಾ ಸಿಬ್ಬಂದಿ ಮೇಲೆ ದಾಳಿ ಮಾಡಿ, ಸರ್ವರ್‌ ಕೋಣೆಯನ್ನು ಧ್ವಂಸಗೊಳಿಸಿದ ಆರೋಪ ಸಂಬಂಧ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್‌ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭಾನುವಾರ ದೆಹಲಿ ಪೊಲೀಸರು ಒಟ್ಟು 3 ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಪೈಕಿ ಎರಡರಲ್ಲಿ ಆಯಿಷಿ ಘೋಷ್‌ ಆರೋಪಿಯಾಗಿದ್ದಾರೆ. ಭಾನುವಾರ ಸಂಜೆ 8.39ಕ್ಕೆ ಮತ್ತು 8.43ಕ್ಕೆ ಈ ಎರಡು ಎಫ್‌ಐಆರ್‌ ದಾಖಲಿಸಲಾಗಿದೆ. ಭಾನುವಾರ ಜೆಎನ್‌ಯು ಆವರಣದಲ್ಲಿ ಗುಂಪೊಂದು ದಾಳಿ ನಡೆಸುತ್ತಿದ್ದ ವೇಳೆಯೇ ಈ ಎಫ್‌ಐಆರ್‌ ದಾಖಲಿಸಲಾಗಿದೆ. ಈ ವೇಳೆ ಆಯಿಷಾ ಭಾರೀ ಏಟು ತಿಂದು ರಕ್ತಸಿಕ್ತ ಸ್ಥಿತಿಯಲ್ಲಿದ್ದರು.

ಏತನ್ಮಧ್ಯೆ, ಗೃಹ ಸಚಿವಾಲಯ ವಿಚಾರಣೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ದಾಳಿಕೋರರ ಮುಸುಕನ್ನು ಶೀಘ್ರದಲ್ಲೇ ತೆರೆಯಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

JNU ಹುಡುಗಿಯರನ್ನು ಹೊಡೆದಿದ್ದು ಪಿಂಕಿ: ಹೊಣೆ ಹೊತ್ತ ಹಿಂದೂ ರಕ್ಷಾ ಸಂಘಟನೆ!