ಜೆಎನ್‌ಯುನಲ್ಲಿ ಉಗ್ರ ನಿಗ್ರಹ ಕೋರ್ಸ್: ಭಾರೀ ವಿವಾದ!
* ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಭಯೋತ್ಪಾದಕ ನಿಗ್ರಹದ ಕೋರ್ಸ್
* ವಿವಿಯ ನಿರ್ಧಾರಕ್ಕೆ ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗದಿಂದ ತೀವ್ರ ಆಕ್ರೋಶ
ನವದೆಹಲಿ(A.೦೪): ಇಲ್ಲಿನ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಭಯೋತ್ಪಾದಕ ನಿಗ್ರಹದ ಬಗ್ಗೆ ಬೋಧಿಸುವ ಐಚ್ಛಿಕ ಕೋರ್ಸ್ ಆರಂಭಕ್ಕೆ ಅನುಮತಿ ನೀಡಲಾಗಿದೆ. ಆದರೆ ವಿವಿಯ ನಿರ್ಧಾರಕ್ಕೆ ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರ ಹೊರತಾಗಿಯೂ ಉಪಕುಲಪತಿ ಜಗದೀಶ್ ಕುಮಾರ್ ವಿವಿಯ ನಿರ್ಧಾರ ಸಮರ್ಥಿಸಿಕೊಂಡಿದ್ದಾರೆ.
‘ಕೌಂಟರ್ ಟೆರರಿಸಂ, ಅಸಿಮೆಟ್ರಿಕ್ ಕಾನ್‌ಫ್ಲಿಕ್ಟ್$್ಸ ಆ್ಯಂಡ್ ಸ್ಟ್ರಾಟರ್ಜಿಸ್ ಫಾರ್ ಕೊ ಆಪರೇಷನ್ ಅಮಾಂಗ್ ಮೇಜರ್ ಪವರ್ಸ್’ ಹೆಸರಿನ ಕೋರ್ಸ್‌ನಲ್ಲಿ ಪ್ರಸ್ತಾಪಿಸಲಾಗಿರುವ ಕೆಲ ಅಂಶಗಳ ಬಗ್ಗೆ ಇದೀಗ ವಿರೋಧ ವ್ಯಕ್ತವಾಗಿದೆ. ‘ಜಿಹಾದಿ ಭಯೋತ್ಪಾದನೆಯೇ, ಮೂಲಭೂತವಾದಿ- ಧಾರ್ಮಿಕ ಭಯೋತ್ಪಾದನೆಗೆ ಉದಾಹರಣೆ. ಈ ಹಿಂದಿನ ಸೋವಿಯತ್ ಒಕ್ಕೂಟ ಮತ್ತು ಚೀನಾ ದೇಶಗಳ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯು, ಮೂಲಭೂತವಾದಿ ಇಸ್ಲಾಮಿಕ್ ದೇಶಗಳಿಗೆ ಪ್ರೇರೇಪಣೆ’ ಎಂದು ಹೇಳಲಾಗಿದೆ.
ಇನ್ನೊಂದು ವಿಷಯದಲ್ಲಿ ‘ಮೂಲಭೂತವಾದಿಗಳು ಮತ್ತು ಧರ್ಮದಿಂದ ಪ್ರಚೋದಿತ ಭಯೋತ್ಪಾದನೆಯು, 21ನೇ ಶತಮಾನದ ಆರಂಭದಲ್ಲಿ ಉಗ್ರರ ಹಿಂಸಾಚಾರ ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜೊತೆಗೆ ಕುರಾನ್ ಅನ್ನು ವಿಕೃತ ರೀತಿಯಲ್ಲಿ ವ್ಯಾಖ್ಯಾನ ಮಾಡಿರುವುದು, ಉಗ್ರವಾದ ಮತ್ತು ಹತ್ಯೆಗೆ ಪ್ರಚೋದನೆ ಮೂಲಕ ಸಾವನ್ನು ವೈಭವೀಕರಿಸುವ ಜಿಹಾದಿ ಭಯೋತ್ಪಾದನೆ ಹೆಚ್ಚಳಕ್ಕೆ ಕಾರಣವಾಗಿದೆ’ ಎಂದು ಹೇಳಲಾಗಿದೆ.
ಇದು ಸೇರಿದಂತೆ ಕೆಲ ವಿಷಯಗಳು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.