ರಾಂಚಿ (ಅ. 21): ವಿಷಕಾರಿ ಹಾವು ಕಡಿದರೆ ಬದುಕಿ ಉಳಿಯುವುದೇ ಅನುಮಾನ. ಆದರೆ, ಜಾರ್ಖಂಡ್‌ನ ಜೆಮ್‌ಶೆಡ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಹಾವಾಡಿಗರು ಸರ್ಪದಂತಹ ವಿಷಕಾರಿ ಹಾವಿನಿಂದ ಕಚ್ಚಿಸಿಕೊಳ್ಳುವ ವಿಚಿತ್ರ ಸಂಪ್ರದಾಯ ಪಾಲಿಸುತ್ತಿದ್ದಾರೆ. ಹಾವಿನಿಂದ ಕಚ್ಚಿಸಿಕೊಂಡರೆ ವಿಷದಿಂದ ಪ್ರತಿರಕ್ಷಣೆ ದೊರೆಯಲಿದೆ ಎಂಬುದು ಅವರ ನಂಬಿಕೆ.

ಶಂಕರ್ದ ಎಂಬ ಗ್ರಾಮದಲ್ಲಿ ಹಾವಾಡಿಗರು ಉರಗ ದೇವತೆಯಾದ ಮಾನಸಾ ದೇವಿಯನ್ನು ಮೆಚ್ಚಿಸಲು ಪ್ರತಿವರ್ಷ ಈ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ. ಕಳೆದ 100 ವರ್ಷಗಳಿಂದಲೂ ಇಲ್ಲಿನ ಬುಡಕಟ್ಟು ಜನಾಂಗ ಸರ್ಪಗಳನ್ನು ಹಿಡಿದು ಅವುಗಳನ್ನು ಪ್ರದರ್ಶಿಸುವುದನ್ನೇ ಜೀವನೋಪಾಯವನ್ನಾಗಿಸಿಕೊಂಡಿದ್ದಾರೆ.

ಗೋವಾದಲ್ಲಿವೆ ನಾನ್ ವೆಜ್ ಹಸುಗಳು! ಸಸ್ಯಾಹಾರ ತಿನ್ನಲು ಹಿಂದೇಟು

ಸರ್ಪ ದೈವತ್ವ ಮತ್ತು ಸಾಂಪ್ರದಾಯಿಕ ವಿಧಾನಗಳಿಗೆ ಹೆಸರಾದ ಈ ಪೂಜೆಯಲ್ಲಿ ನೂರಾರು ಸಂಖ್ಯೆಯ ಹಾವಾಡಿಗರು ಪಾಲ್ಗೊಂಡು, ಹಾವಿನಿಂದ ಕಚ್ಚಿಸಿಕೊಳ್ಳುತ್ತಾರೆ. ಮಾನಸಾ ದೇವಿಯ ಪೂಜೆಯ ವೇಳೆ ಹಾವಾಡಿಗರು ಸಾರೋಟಿನ ಮೇಲೆ ಕುಳಿತು ದೇವಿಗೆ ಪೂಜೆ ನೆರವೇರಿಸುತ್ತಾರೆ.

ಸಾರೋಟು ಓಡಿಸುತ್ತಾ ಹಾವಿನಿಂದ ಕಚ್ಚಿಸಿಕೊಳ್ಳುತ್ತಾರೆ. ಪೂಜೆಯ ವೇಳೆ ಸಾರೋಟಿನ ಮೇಲೆ ಕುಳಿತಾಗ ಹಾವು ಕಚ್ಚಿದರೂ ಏನೂ ಆಗುವುದಿಲ್ಲ. ಹಾವಿನಿಂದ ಕಚ್ಚಿಸಿಕೊಳ್ಳುವುದರಿಂದ ವಿಷದಿಂದ ಪ್ರತಿರಕ್ಷಣೆ ದೊರೆಯಲಿದೆ ಮತ್ತು ರೋಗಗಳು ವಾಸಿಯಾಗಲಿದೆ ಎಂದು ಸ್ಥಳೀಯರು ಭಾವಿಸಿದ್ದಾರೆ.