ರಾಂಚಿ(ಏ.14): ಕೊರೋನಾ ಎರಡನೇ ಅಲೇ ಇಡೀ ದೇಶವನ್ನೇ ನಡುಗಿಸಿದೆ. ಅತ್ತ ಝಾರ್ಖಂಡ್‌ನಲ್ಲೂ ಏಕಾಏಕಿ ಕೊರೋನಾ ಪ್ರಕರಣಗಳು ಏರಿದ ಹಿನ್ನೆಲೆ ಜನರು ವೈದ್ಯಕೀಯ ಸೌಲಭ್ಯ ಕೊರತೆ ಎದುರಿಸುತ್ತಿದ್ದಾರೆ. ಸದ್ಯ ಇಲ್ಲೊಬ್ಬ ಕೊರೋನಾ ರೋಗಿ ಚಿಕಿತ್ಸೆ ಸಿಗದೇ ನರಳಾಡುತ್ತಾ ಪ್ರಾಣ ಬಿಟ್ಟಿದ್ದಾನೆ. ಇನ್ನು ಈ ವ್ಯಕ್ತಿಯನ್ನು ಉತ್ತಮ ಚಿಕಿತ್ಸೆಗಾಗಿ ಹಜಾರಿಭಾಗ್‌ನಿಂದ ರಾಂಚಿಗೆ ಕರೆತರಲಾಗಿತ್ತು. ಇಲ್ಲಿ ವೈದ್ಯರಿಗಾಗಿ ಕಾದೂ ಕಾದೂ ಆತ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. 

ಇನ್ನು ಈ ಹೃದಯ ವಿದ್ರಾವಕ ಘಟನೆ ನಡೆದ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಸಚಿವ ಬನ್ನ ಗುಪ್ತಾ ಅದೇ ಆಸ್ಪತ್ರೆ ಒಳಗಿದ್ದರು. ಇಲ್ಲಿ ಕೊರೋನಾ ರೋಗಿಗಳಿಗೆ ಒದಗಿಸುತ್ತಿದ್ದ ಸೌಲಭ್ಯಗಳ ಪರಿಶೀಲನೆ ನಡೆಸುತ್ತಿದ್ದರೆನ್ನಲಾಗಿದೆ.

ತಾವು ವೈದ್ಯರ ಬಳಿ ಚಿಕಿತ್ಸೆ ನೀಡುವಂತೆ ಗೋಗರೆಯುತ್ತಿದ್ದೆವು. ಆದರೆ ಬಹಳಷ್ಟು ಸಮಯ ಕಾದರೂ ಯಾರೂ ನಮ್ಮ ಸಹಾಯಕ್ಕೆ ಬರಲಿಲ್ಲ. ಇದೇ ಕಾರಣಕ್ಕೆ ನಾವು ಆತನನ್ನು ಕಳೆದುಕೊಂಡೆವು ಎಂಬುವುದು ಮೃತ ವ್ಯಕ್ತಿಯ ಕುಟುಂಬ ಸದಸ್ಯರ ಆರೋಪವಾಗಿದೆ.

ಇನ್ನು ಕುಟುಂಬ ಸದಸ್ಯರು ಕೊರೋನಾ ಪೀಡಿತನಿಗೆ ಉತ್ತಮ ಚಿಕಿತ್ಸೆ ಸಿಗಲಿ ಎಂಬ ನಿಟ್ಟಿನಲ್ಲಿ ಇಂದು, ಬುಧವಾರ ಬೆಳಗ್ಗೆ ರಾಂಚಿಗೆ ಕರೆ ತಂದಿದ್ದರು. ಆದರೆ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಬೆಡ್‌ಗಳು ಸಿಗದೆ, ಅಂತಿಮವಾಗಿ ಇಲ್ಲಿನ ಸರ್ದಾರ್‌ ಆಸ್ಪತ್ರೆಗೆ ಕರೆ ತಂದಿದ್ದರು. ಆದರೆ ಇಲ್ಲೂ ಸಿಬ್ಬಂದಿ ರೋಗಿಯನ್ನು ಹಲವಾರು ತಾಸು ಆಸ್ಪತ್ರೆ ಹೊರಗೆ ಬಿಸಿಲಿನಲ್ಲೇ ಕಾಯುವಂತೆ ಮಾಡಿದ್ದಾರೆ. ಇಲ್ಲೇ ಆತ ನರಳಾಡುತ್ತಾ ಕೊನೆಗೆ ಪ್ರಾಣ ಬಿಟ್ಟಿದ್ದಾನೆ ಎಂದು ಕುಟುಂಬ ಸದಸ್ಯರೊಬ್ಬರು ತಿಳಿಸಿದ್ದಾರೆ.

ಇಷ್ಟೆಲ್ಲಾ ನಡೆದ ಬಳಿಕ ರೋಗಿಯನ್ನು ಒಳ ಕರೆದೊಯ್ದ ವೈದ್ಯರು, ಆತ ಮೃತಪಟ್ಟಿದ್ದಾನೆಂದು ಘೋಷಿಸಿದ್ದಾರೆ. ಇನ್ನು ಮೃತದೇಹ ಹೊರ ತರುವ ಸಂದರ್ಭದಲ್ಲೇ ಆಸ್ಪತ್ರೆಯೊಳಗೆ ತಪಾಸಣೆ ನಡೆಸಿ ಸಚಿವರೂ ಹೊರ ಬಂದಿದ್ದಾರೆ. ಈ ವೇಳೆ ಸಚಿವರನ್ನು ನೋಡಿದ ಕುಟುಂಬಸ್ಥರ ಕೋಪ ನೆತ್ತಿಗೇರಿದ್ದು, ರಾಜ್ಯದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮೃತ ವ್ಯಕ್ತಿಯ ಮಗಳು, ಸಚಿವರೇ ನಾವು ಬಹಳಷ್ಟು ಸಮಯದಿಂದ ತಂದದೆಗೆ ಚಿಕಿತ್ಸೆ ನೀಡಿ ಎಂದು ಗೋಗರೆದೆವು, ಆದರೆ ಯಾವೊಬ್ಬ ವೈದ್ಯರೂ ಬರಲಿಲ್ಲ. ಕೊನೆಗೆ ನರಳಾಡುತ್ತಲೇ ಅವರು ಪ್ರಾಣ ಬಿಟ್ಟರು. ನೀವು ಮತ ಬೇಕಾದಾಗ ಮಾತ್ರ ಬರುತ್ತೀರಿ. ರಾಜ್ಯದಲ್ಲಿ ಆರೋಗ್ಯ ಸೌಲಭ್ಯಗಳೇ ಇಲ್ಲ ಅನೇಕ ಮಂದಿ ಸೌಲಭ್ಯವಿಲ್ಲದೇ ಪ್ರಾಣ ಬಿಡುತ್ತಾರೆ ಎಂದು ಕಿರುಚಾಡಿದ್ದಾರೆ.

ಈ ವೇಳೆ ಸಚಿವರು ಯುವತತಿಯನ್ನು ಸಮಾಧಾನಪಡಿಸಲು ಯತ್ನಿಸಿದರಾದರೂಊ ಯಾವುದೇ ಪ್ರಯೋಜನವಾಗಲಿಲ್ಲ.