ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅರೆಸ್ಟ್, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ!
ಭೂ ಅಕ್ರಮ ಪ್ರಕರಣ, ಅಕ್ರಮ ಗಣಿಗಾರಿಕೆ ಸೇರಿದಂತೆ ಕೆಲ ಆರೋಪ ಎದುರಿಸುತ್ತಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅರೆಸ್ಟ್ ಆಗಿದ್ದಾರೆ. ಅರೆಸ್ಟ್ ಬೆನ್ನಲ್ಲೇ ಸಿಎಂ ಸ್ಥಾನಕ್ಕೆ ಹೇಮಂತ್ ಸೊರೆನ್ ರಾಜೀನಾಮೆ ನೀಡಿದ್ದಾರೆ. ಇತ್ತ ನೂತನ ಮುಖ್ಯಮಂತ್ರಿಯಾಗಿ ಚಂಪಾಯ್ ಸೊರೆನ್ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ.
ರಾಂಚಿ(ಜ.31) ದೇಶದ ರಾಜಕೀಯ ಇತಿಹಾಸದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಭೂ ಅಕ್ರಮ ಪ್ರಕರಣ, ಅಕ್ರಮ ಗಣಿಗಾರಿಕೆ, ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅರೆಸ್ಟ್ ಆಗಿದ್ದಾರೆ. ಇಂದು ಮಧ್ಯಾಹ್ನ ರಾಂಚಿಯಲ್ಲಿರುವ ಹೇಮಂತ್ ಸೊರೆನ್ ಮನೆಗೆ ಆಗಮಿಸಿದ ಇಡಿ ಅಧಿಕಾರಿಗಳು ಸತತ ವಿಚಾರಣೆ ನಡೆಸಿದ್ದರು. ಸುದೀರ್ಘ ವಿಚಾರಣೆ ಬಳಿಕ ಹೇಮೆಂತ್ ಸೊರೆನ್ ಅವರನ್ನು ಇಡಿ ಅದಿಕಾರಿಗಳು ಬಂಧಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿರುವ ಕಾರಣ ಬಂಧನಕ್ಕೂ ಮೊದಲು ರಾಜ್ಯಪಾಲರ ಅನುಮತಿ ಕಡ್ಡಾಯವಾಗಿದೆ. ಹೀಗಾಗಿ ಇಡಿ ಅಧಿಕಾರಿಗಳು ಎಲ್ಲಾ ಅನುಮತಿ ಪತ್ರದೊಂದಿಗೆ ಸೊರೆನ್ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿ ಇದೀಗ ಬಂಧಿಸಿದ್ದಾರೆ.
ಭೂಹಗರಣ ಸಂಬಂಧ ಪ್ರಕರಣದಡಿಯಲ್ಲಿ ಇದೀಗ ಹೇಮಂತ್ ಸೊರೆನ್ ಬಂಧನವಾಗಿದೆ. ಸತತ 7 ಗಂಟೆಗಳ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಸೊರೆನ್ ಬಂಧಿಸಿದ್ದಾರೆ. ಸೊರೆನ್ ಬಂಧಿಸಿದ ಇಡಿ ಅದಿಕಾರಿಗಳು ನೇರವಾಗಿ ರಾಜ್ಯಪಾಲರ ಭವನಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಹೇಮಂತ್ ಸೊರೆನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತ ಜಾರ್ಖಂಡ್ ರಾಜಕೀಯ ಚುರುಕುಗೊಂಡಿದೆ. ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಲು ಸಾರಿಗೆ ಸಚಿವ ಚಂಪಾಯ್ ಸೊರೆನ್ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಚಂಪಾಯ್ ಸೊರೆನ್‌ಗೆ 41 ಶಾಸಕರ ಬೆಂಬಲ ಇದೆ ಎಂದು ಹೇಳಲಾಗುತ್ತಿದೆ.
ಜಾರ್ಖಂಡ್ ಆರೋಗ್ಯ ಸಚಿವನ ಅನಾರೋಗ್ಯಕಾರಿ ವರ್ತನೆ: ಅಶ್ಲೀಲ ವಿಡಿಯೋ ಚಾಟ್ ವೈರಲ್
ಜಾರ್ಖಂಡ್ ಮುಕ್ತಿ ಮೋರ್ಚಾದ ಪ್ರಮುಖ ನಾಯಕ ಹೇಮಂತ್ ಸೊರೆನ್ ಬಂಧನ ಜಾರ್ಖಂಡ್‌ನಲ್ಲಿ ತಲ್ಲಣ ಸೃಷ್ಟಿಸಿದೆ. ಒಂದೆಡೆ ಹೇಮಂತ್ ಸೊರೆನ್ ವಿಚಾರಣೆ ನಡೆಯುತ್ತಿದ್ದಂತೆ ಇತ್ತ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಸೇರಿದಂತೆ ಮೈತ್ರಿ ಪಕ್ಷಗಳು ಶಾಸಕಾಂಗ ಪಕ್ಷದ ಸಭೆ ನಡೆಸಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ವಾನುತಮತದಿಂದ ಚಂಪಾಯ್ ಸೊರೆನ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಶೀಘ್ರದಲ್ಲೇ ಚಂಪಾಯ್ ಸೊರೆನ್ ಜಾರ್ಖಂಡ್‌ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಹೇಮಂತ್ ಸೊರೆನ್ ಪತ್ನಿ ಕಲ್ಪನಾ ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಇದಕ್ಕೆ ಕುಟುಂಬ ಹಾಗೂ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಚಂಪಾಯ್ ಸೊರೆನ್ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿದಿದೆ.
ಇ.ಡಿ. ಅಧಿಕಾರಿಗಳು ಸೋಮವಾರ ಹೇಮಂತ್‌ರ ದೆಹಲಿ ನಿವಾಸದ ಮೇಲೆ ದಾಳಿ ನಡೆಸಿದ್ದರಾದರೂ ಅವರು ಪತ್ತೆಯಾಗಿರಲಿಲ್ಲ. ಈ ದಾಳಿ ವೇಳೆ 36 ಲಕ್ಷ ರು. ನಗದು, ಒಂದು ಬಿಎಂಡಬ್ಲ್ಯು ಕಾರು ಮತ್ತು ಹಗರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಆದಾದ ಬಳಿಕ ಸುಮಾರು 30 ಗಂಟೆ ಕಾಲ ಹೇಮಂತ್ ಸುಳಿವೇ ಸಿಕ್ಕಿರಲಿಲ್ಲ. ಹೀಗಾಗಿ ಅವರು ವಿದೇಶಕ್ಕೆ ಪರಾರಿಯಾಗಬಹುದು ಎಂಬ ಕಾರಣಕ್ಕೆ ಇ.ಡಿ. ಅಧಿಕಾರಿಗಳು ವಿಮಾನ ನಿಲ್ದಾಣಗಳಿಗೆ ಅಲರ್ಟ್ ನೀಡಿದ್ದರು.
"ಪ್ರಶ್ನೆ ಯಾಕೆ ಮಾಡ್ತೀರ, ನನ್ನನ್ನು ಬಂಧಿಸಿ": ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್