ನವದೆಹಲಿ(ಜೂ.03): 1999ರ ಜೆಸ್ಸಿಕಾ ಲಾಲ್‌ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮನು ಶರ್ಮಾನನ್ನು ಸನ್ನಡತೆ ಆಧಾರದಲ್ಲಿ ಸೋಮವಾರ ತಿಹಾರ್‌ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಕಾರಾಗೃಹ ಮಹಾ ನಿರ್ದೇಶಕ ಸಂದೀಪ್‌ ಗೋಯಲ್‌ ತಿಳಿಸಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಮೇ 28ರಂದು ದೆಹಲಿ ಶಿಕ್ಷೆ ಪರಿಶೀಲನಾ ಮಂಡಳಿ ಮನು ಶರ್ಮಾ ಸೇರಿ 19 ಜನರನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಿ ಶಿಫಾರಸ್ಸನ್ನು ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌ ಅವರಿಗೆ ಕಳುಹಿಸಿತ್ತು. ಈ ಶಿಫಾರಸಿನನ್ವಯ ಬೈಜಲ್‌ ಅವರು ಮನು ಶರ್ಮಾ ಬಿಡುಗಡೆಗೆ ಅನುಮತಿಸಿದ್ದರು. ಅದರಂತೆ 17 ವರ್ಷಗಳಿಂದ ಜೈಲಿನಲ್ಲಿದ್ದ ಶರ್ಮಾನನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.

ಏನಿದು ಪ್ರಕರಣ?: 1999 ಏ.30ರಂದು ದೆಹಲಿಯಲ್ಲಿ ನಡೆದ ಖಾಸಗಿ ಪಾರ್ಟಿಯೊಂದರಲ್ಲಿ ರೂಪದರ್ಶಿ ಜೆಸ್ಸಿಕಾ ತನಗೆ ಮದ್ಯ ಸವ್‌ರ್‍ ಮಾಡಲಿಲ್ಲ ಎಂಬ ಕಾರಣಕ್ಕೆ ಕೇಂದ್ರದ ಮಾಜಿ ಸಚಿವ ವಿನೋದ್‌ ಶರ್ಮಾ ಪುತ್ರ ಮನು ಶರ್ಮಾ ಆಕೆಯ ಮೇಲೆ ಗುಂಡು ಹಾರಿಸಿ ಕೊಲೆಗೈದಿದ್ದ. ಈ ಪ್ರಕರಣದ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಕೊಲೆ ಆರೋಪ ಸಾಬೀತಾದ ಹಿನ್ನೆಲೆ 2010ರಲ್ಲಿ ಮನುಶರ್ಮಾಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಈವರೆಗೆ 17 ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿದ್ದ ಮನು ಶರ್ಮಾನನ್ನು ಸನ್ನಡತೆಯ ಆಧಾರದಲ್ಲಿ 3 ವರ್ಷ ಮುಂಚಿತವಾಗಿ ತಿಹಾರ್‌ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಶರ್ಮಾ ಈವರೆಗೆ 12 ಬಾರಿ ಪರೋಲ್‌ ಮತ್ತು 24 ಬಾರಿ ಬಿಡುಗಡೆ ಪಡೆದಿದ್ದ.