ನವದೆಹಲಿ[ಫೆ.16]: ರನ್‌ ವೇಯಲ್ಲಿ ಗಂಟೆಗೆ 222 ಕಿ.ಮೀ. ವೇಗದಲ್ಲಿ ಹೋಗುತ್ತಿದ್ದ ವಿಮಾನಕ್ಕೆ ಅಡ್ಡಲಾಗಿ ಒಂದು ಜೀಪು ಹಾಗೂ ವ್ಯಕ್ತಿಯೊಬ್ಬ ಬಂದಿದ್ದನ್ನು ಗಮನಿಸಿದ ಏರ್‌ ಇಂಡಿಯಾ ಪೈಲಟ್‌ ತಕ್ಷಣವೇ ವಿಮಾನವನ್ನು ಮೇಲಕ್ಕೆ ಹಾರಿಸುವ ನಿರ್ಧಾರ ಕೈಗೊಂಡಿದ್ದರಿಂದ ಸಂಭವನೀಯ ದುರಂತವೊಂದು ಕೂದಲೆಳೆ ಅಂತರದಿಂದ ತಪ್ಪಿದ ಘಟನೆ ಪುಣೆ ವಿಮಾನ ನಿಲ್ದಾಣದಲ್ಲಿ ಶನಿವಾರ ಮುಂಜಾನೆ ನಡೆದಿದೆ. ತುರ್ತು ಟೇಕ್‌ ಆಫ್‌ ಆದ ಹೊರತಾಗಿಯೂ 180 ಪ್ರಯಾಣಿಕರಿದ್ದ ವಿಮಾನ ಪುಣೆಯಿಂದ ಹೊರಟು ದೆಹಲಿ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಇಳಿದಿದೆ.

ಘಟನೆಯಲ್ಲಿ ವಿಮಾನದ ದೇಹದ ಅಡಿಭಾಗ ಹಾಗೂ ರನ್‌ವೇಗೆ ಹಾನಿ ಸಂಭವಿಸಿದೆ. ವಿಮಾನದ ಕಾಕ್‌ಪಿಟ್‌ ರೆಕಾರ್ಡರ್‌ ಅನ್ನು ತರಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ತನಿಖೆಯ ಸಲುವಾಗಿ ಎ321ವಿಮಾನವನ್ನು ಸೇವೆಯಿಂದ ಹಿಂಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಣೆ ವಿಮಾನ ನಿಲ್ದಾಣ ಭಾರತೀಯ ವಾಯು ಪಡೆಯ ವಿಮಾನಗಳಿಗೆ ವಾಯು ನೆಲೆಯಾಗಿಯೂ ಬಳಕೆ ಆಗುತ್ತಿದೆ. ವಾಯು ಪಡೆ ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತದೆ. ಈ ಹಿನ್ನೆಲೆಯಲ್ಲಿ ಏರ್‌ ಟ್ರಾಫಿಕ್‌ ಕಂಟ್ರೋಲ್‌ನ ಮಾಹಿತಿಯನ್ನು ಕಾಯ್ದಿರಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ವಾಯು ಪಡೆಗೆ ಸೂಚನೆ ನೀಡಿದೆ.

ಆಗಿದ್ದೇನು?

ಪುಣೆಯಿಂದ ದೆಹಲಿಗೆ ತೆರಳ ಬೇಕಿದ್ದ ವಿಮಾನ ಟೇಕ್‌ ಆಫ್‌ ಆಗುವ ಸಲುವಾಗಿ 222 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದಾಗ ಪೈಲಟ್‌ಗೆ ರನ್‌ವೇಯಲ್ಲಿ ಒಂದು ಜೀಪು ಹಾಗೂ ಒಬ್ಬ ವ್ಯಕ್ತಿ ನಿಂತಿರುವುದು ಕಾಣಿಸಿದೆ. ಆ ಸಂದರ್ಭದಲ್ಲಿ ವಿಮಾನವನ್ನು ನಿಲ್ಲಿಸುವುದು ಅಸಾಧ್ಯವಾಗಿತ್ತು. ಒಂದು ವೇಳೆ ರನ್‌ವೇಯಲ್ಲೇ ಮುಂದುವರಿದರೂ ಡಿಕ್ಕಿ ಸಂಭವಿಸುವ ಅಪಾಯ ಇತ್ತು. ಹೀಗಾಗಿ ಪೈಲಟ್‌ ತಕ್ಷಣವೇ ವಿಮಾನವನ್ನು ಮೇಲಕ್ಕೆ ಹಾರಿಸಿದ್ದಾನೆ.