ಜಪಾನ್ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತ್ ಚಲೋ, ಭಾರತ್ ಸೆ ಜೂಡೋ ಅಭಿಯಾನ ಭಾರತೀಯ ಸಮುದಾಯಕ್ಕೆ ಕರೆ ನೀಡಿದ ಪ್ರಧಾನಿ ಮೋದಿ

ಟೋಕಿಯೋ(ಮೇ.23):ಭಾರತ್ ಚಲೋ, ಭಾರತ್ ಸೆ ಜೂಡೋ ವಿಶೇಷ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಭಾರತವನ್ನು ವಿಶ್ವಮಟ್ಟದಲ್ಲಿ ಮತ್ತಷ್ಟು ಬಲಿಷ್ಠ ಮಾಡಲು, ಅಭಿವೃದ್ಧಿಯ ಪಥದಲ್ಲಿ ಸಾಗಲು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮೋದಿ ಮನವಿ ಮಾಡಿದ್ದಾರೆ.

ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಟೋಕಿಯೋದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಮೂಲಸೌಕರ್ಯ, ಡಿಜಿಟಲ್ ಕ್ರಾಂತಿ, ಹಸಿರು ಬೆಳವಣಿಗೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸರ್ಕಾರ ಮಾಡಿರುವ ಸಾಧನೆಗಳು ಹಾಗೂ ಯೋಜನೆಗಳ ಕುರಿತು ಬೆಳಕು ಚೆಲ್ಲಿದರು. ಈ ಯೋಜನೆಗಳನ್ನು ಪರಿಣಾಮಕಾರಿಯಾಗಿಸಲು ಭಾರತ್ ಚಲೋ ಹಾಗೂ ಭಾರತ್ ಸೇ ಜುಡೋ ಅಭಿಯಾನದಲ್ಲಿ ಪಾಲ್ಗೊಳ್ಳಲು ಮೋದಿ ಕರೆ ನೀಡಿದರು. 700 ಕ್ಕೂ ಹೆಚ್ಚು ಭಾರತೀಯಸಮುದಾಯದ ಜೊತೆ ಮೋದಿ ಸಂವಾದ ನಡೆಸಿದರು. 

ಹಿಂದಿಯಲ್ಲಿ ಮೋದಿಗೆ ಸ್ವಾಗತ ಕೋರಿದ ಜಪಾನಿ ಬಾಲಕ, ಭಾಷಾಪ್ರೇಮಕ್ಕೆ ನಮೋ ಫಿದಾ!

ಮೋದಿ ಜೊತೆ ಜಪಾನಿ ಮಕ್ಕಳ ಹಿಂದಿ ಸಂವಾದ
ಎರಡು ದಿನಗಳ ಜಪಾನ್‌ ಪ್ರವಾಸಕ್ಕಾಗಿ ಆಗಮಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು, ಜಪಾನ್‌ನಲ್ಲಿರುವ ಭಾರತೀಯ ಸಮುದಾಯ ಮತ್ತು ಕೆಲ ಜಪಾನಿ ಪ್ರಜೆಗಳು ಸೋಮವಾರ ಇಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.

ಈ ವೇಳೆ ಮೋದಿ ಎಲ್ಲರ ಜೊತೆ ಆತ್ಮೀಯವಾಗಿ ಬೆರೆಯುವ ಮೂಲಕ ಅವರ ಜೊತೆ ಕಿರು ಮಾತುಕತೆ ನಡೆಸಿದರು. ಈ ಸಮಯದಲ್ಲಿ ಜಪಾನಿ ಬಾಲಕನೊಬ್ಬ ಮೋದಿ ಜೊತೆ ಹಿಂದಿಯಲ್ಲೇ ಸಂವಾದ ನಡೆಸುವ ಮೂಲಕ ಎಲ್ಲರ ಗಮನ ಸೆಳೆದ.

ಜಪಾನಿ ಬಾಲಕ, ತಮ್ಮ ಜೊತೆ ಹಿಂದಿಯಲ್ಲೇ ಮಾತನಾಡಿದ್ದನ್ನು ನೋಡಿ ಅಚ್ಚರಿಗೊಂಡ ಪ್ರಧಾನಿ ಮೋದಿ, ‘ವಾಹ್‌, ನೀನು ಎಲ್ಲಿಂದ ಹಿಂದಿ ಕಲಿತೆ? ನೀನು ಸಾಕಷ್ಟುಚೆನ್ನಾಗಿಯೇ ಹಿಂದಿ ಮಾತನಾಡುತ್ತೀಯಲ್ಲ?’ ಎಂದು ಬಾಲಕನನ್ನು ಶ್ಲಾಘಿಸಿದರು. ಆಗ ಆತ ‘ನಾನು ಜಪಾನ್‌ನಲ್ಲೇ ಹಿಂದಿ ಕಲಿತೆ’ ಎಂದ. ಆಗ ಮೋದಿ ತುಂಬಾ ಸಂತಸಗೊಂಡು ಆತನ ತಲೆಗೆ ಕೈಸವರಿದರು.

ಪೆಟ್ರೋಲ್‌ ದರ ಇಳಿಕೆ, ಪಾಕ್‌ನಿಂದಲೂ ಶ್ಲಾಘನೆ, ಮೋದಿ ಸ್ಟ್ರಾಟಜಿ ಬೇರೆನೇ..!

ಬಳಿಕ ತಮ್ಮೊಂದಿಗೆ ಮಾತನಾಡಿದ ಮಕ್ಕಳಿಗೆ ಮೋದಿ ಹಸ್ತಾಕ್ಷರ ನೀಡುವ ಮೂಲಕ ಅವರ ಮನಗೆದ್ದರು. ಈ ವೇಳೆ ಕೆಲವರು ಮೋದಿ ಉದ್ದೇಶಿಸಿ ‘ಭಾರತ್‌ ಮಾ ಕಾ ಶೇರ್‌’ ಎಂಬ ಘೋಷಣೆ ಹಾಕಿದರು.

ಮುಕ್ತ, ಸ್ವತಂತ್ರ ಇಂಡೋ ಪೆಸಿಫಿಕ್‌ ವಲಯಕ್ಕೆ ಮೋದಿ ಕರೆ
ಇಂಡೋ-ಪೆಸಿಫಿಕ್‌ ವಲಯವನ್ನು ಮುಕ್ತ, ಸ್ವತಂತ್ರ ಮತ್ತು ಸಮಗ್ರವಾಗಿಸುವ ಯತ್ನಕ್ಕೆ ಭಾರತ-ಜಪಾನ್‌ ಎಲ್ಲಾ ನೆರವನ್ನೂ ನೀಡಲಿವೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಈ ವಲಯದಲ್ಲಿ ಅಧಿಪತ್ಯಕ್ಕೆ ಯತ್ನಿಸುತ್ತಿರುವ ನೆರೆಯ ಚೀನಾಕ್ಕೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.

‘ಯೋಮಿಉರಿ ಶಿಂಬುನ್‌’ ದಿನ ಪತ್ರಿಕೆಯಲ್ಲಿ ಭಾರತ ಮತ್ತು ಜಪಾನ್‌ ನಡುವಿನ ಸ್ಪಂದನಶೀಲ ಸಂಬಂಧದ ಬಗ್ಗೆ ಸೋಮವಾರ ಲೇಖನ ಬರೆದಿರುವ ಪ್ರಧಾನಿ ಮೋದಿ ‘ಎರಡೂ ಪ್ರಜಾಪ್ರಭುತ್ವಗಳು(ಭಾರತ ಮತ್ತು ಜಪಾನ್‌) ಇಂಡೋ ಪೆಸಿಫಿಕ್‌ ವಲಯದಲ್ಲಿ ಆಯಕಟ್ಟಿನ ಜಾಗದಲ್ಲಿ ಸ್ಥಿತವಾಗಿರುವ ಹಿನ್ನೆಲೆಯಲ್ಲಿ, ಈ ವಲಯವನ್ನು ಸ್ಥಿರ ಮತ್ತು ಸುರಕ್ಷಿತ ವಲಯವನ್ನಾಗಿಸುವಲ್ಲಿ ನಾವು ಮಹತ್ವದ ಆಧಾರ ಸ್ತಂಭವಾಗಬಲ್ಲೆವು. ಹೀಗಾಗಿಯೇ ಉಭಯ ದೇಶಗಳ ನಡುವಿನ ಸಂಬಂಧ ವಿಷಯಾತೀತವಾಗಿ ವಿಸ್ತರಿಸುತ್ತಿದೆ’ ಎಂದು ಬಣ್ಣಿಸಿದ್ದಾರೆ.

ರಕ್ಷಣಾ ವಲಯದಲ್ಲಿ ನಮ್ಮ ಸಂಬಂಧ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಕವಾಯತಿನಿಂದ ಹಿಡಿದು, ಮಾಹಿತಿ ವಿನಿಮಯ ಮತ್ತು ರಕ್ಷಣಾ ಉತ್ಪಾದನೆವರೆಗೂ ಸಂಬಂಧ ವಿಸ್ತರಿಸಿದೆ. ಸೈಬರ್‌, ಬಾಹ್ಯಾಕಾಶ ಮತ್ತು ಭೂಗರ್ಭ ವಲಯದಲ್ಲೂ ಸಂಬಂಧ ಏರ್ಪಟ್ಟಿದೆ ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ ‘ಸುರಕ್ಷಿತ ಸಮುದ್ರಗಳ ಸಂಪರ್ಕದ ಮೂಲಕ, ವ್ಯಾಪಾರ ಮತ್ತು ಹೂಡಿಕೆಯನ್ನು ಒಳಗೊಂಡ, ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದರೊಂದಿಗೆ, ಅಂತಾರಾಷ್ಟ್ರೀಯ ಕಾನೂನುಗಳ ಅನ್ವಯ ಮುಕ್ತ, ಸ್ವತಂತ್ರ ಮತ್ತು ಸಮಗ್ರ ಒಳಗೊಳ್ಳುವಿಕೆಯ ಇಂಡೋ-ಪೆಸಿಫಿಕ್‌ ವಲಯ ನಿರ್ಮಾಣಕ್ಕೆ ಭಾರತ ಮತ್ತು ಜಪಾನ್‌ ಕೈಜೋಡಿಸಲಿವೆ ಎಂದು ಮೋದಿ ಹೇಳಿದ್ದಾರೆ.