ಶ್ರೀನಗರ[ಡಿ.15]:ಸಂವಿಧಾನದ 370ನೇ ವಿಧಿಯ ಅನ್ವಯ ಪಡೆದಿದ್ದ ವಿಶೇಷ ಸ್ಥಾನಮಾನವನ್ನು ಕಳೆದುಕೊಂಡಿದ್ದ ಜಮ್ಮು-ಕಾಶ್ಮೀರಕ್ಕೆ ಪರಿಹಾರಾರ್ಥವಾಗಿ 371ನೇ ವಿಧಿಯನ್ನು ಕೇಂದ್ರ ಸರ್ಕಾರ ದಯ ಪಾಲಿಸುವ ನಿರೀಕ್ಷೆಯಿದೆ.

ಕರ್ನಾಟಕದ ಹೈದರಾಬಾದ್‌ ಕರ್ನಾಟಕ (ಕಲ್ಯಾಣ ಕರ್ನಾಟಕ) ಪ್ರದೇಶಕ್ಕೆ 371ಜೆ ಕಲಮಿನ ಅನ್ವಯ ವಿಶೇಷ ಸ್ಥಾನಮಾನ ನೀಡಲಾಗಿದ್ದು, ಈ ಭಾಗದ ಜನರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗುತ್ತದೆ. ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗುತ್ತದೆ. ಈಗ ಇದೇ ಮಾದರಿಯ ಕೊಡುಗೆಯನ್ನು ಕಾಶ್ಮೀರಕ್ಕೆ ನೀಡಲು ಕೇಂದ್ರ ಗೃಹ ಸಚಿವಾಲಯ ಚಿಂತನೆ ನಡೆಸುತ್ತಿದೆ ಎಂದು ವರದಿಯೊಂದು ಹೇಳಿದೆ.

ಗೃಹ ಸಚಿವಾಲಯವು ಈ ಕುರಿತಂತೆ ಕಾನೂನು ಸಚಿವಾಲಯಕ್ಕೆ ಕೋರಿಕೆಯೊಂದನ್ನು ಸಲ್ಲಿಸಿ, ‘ಇದರ ಸಾಧಕ-ಬಾಧಕಗಳನ್ನು ಅಧ್ಯಯನ ನಡೆಸಬೇಕು. ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದೆ. ಆ ಪ್ರಕಾರ ಕಾನೂನು ಸಚಿವಾಲಯವು ಇದರ ಅಧ್ಯಯನ ಆರಂಭಿಸಿದೆ.

370ನೇ ವಿಧಿಯ ವಿಶೇಷ ಸ್ಥಾನಮಾನ ರದ್ದಾದ ನಂತರ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಸ್ಥಿತಿ ಮಂಕಾಗಿದ್ದು, ಸ್ಥಿತಿ ಸಹಜಗೊಳಿಸಲು ಹಾಗೂ ಪುನಃ ರಾಜಕೀಯ ಚಟುವಟಿಕೆಗಳಿಗೆ, ನೀತಿಗಳಿಗೆ ಚಾಲನೆ ನೀಡಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಅಂಥದ್ದರಲ್ಲಿ 371 ಅಡಿಯ ವಿಶೇಷ ಸ್ಥಾನಮಾನವು ಅದರತ್ತ ದೊಡ್ಡ ಹೆಜ್ಜೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಏನಿದು 371ನೇ ವಿಧಿ?

ಸಂವಿಧಾನದ 371ನೇ ವಿಧಿಯು 371ಎ ವಿಧಿಯಿಂದ 371 ಜೆ ವಿಧಿಯವರೆಗೆ ವಿಸ್ತಾರ ಹೊಂದಿದೆ. ಭಾರತದ ಕೆಲವು ರಾಜ್ಯಗಳ ಭಾಗಗಳು ತೀರಾ ಹಿಂದುಳಿದಿವೆ. ಇನ್ನೂ ಕೆಲವು ಪ್ರದೇಶಗಳು ವಿಶೇಷ ಸಾಂಸ್ಕೃತಿಕ ಹಾಗೂ ಭೌಗೋಳಿಕ ಸಂಪತ್ತನ್ನು ಹೊಂದಿವೆ. ಇಂತಹ ಹಿಂದುಳಿದ ಪ್ರದೇಶಗಳ ವಿಶೇಷ ಅಭಿವೃದ್ಧಿಗಾಗಿ ಮತ್ತು ಸಾಂಸ್ಕೃತಿಕ ಹಾಗೂ ಭೌಗೋಳಿಕ ಸಂಪತ್ತನ್ನು ಹೊಂದಿರುವ ರಾಜ್ಯಗಳ ಭಾಗಗಳ ರಕ್ಷಣೆಗಾಗಿ 371ಎ ವಿಧಿಯಿಂದ ಹಿಡಿದು 371ಜೆ ವಿಧಿಯವರೆಗೆ ವಿಶೇಷ ಸವಲತ್ತುಗಳನ್ನು ನೀಡಲಾಗಿದೆ.

ಅಂದರೆ ಸ್ಥಳೀಯರಿಗೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲು, ಅಭಿವೃದ್ಧಿಗೆ ವಿಶೇಷ ಅನುದಾನ, ಅಭಿವೃದ್ಧಿಗಾಗಿ ಪ್ರತ್ಯೇಕ ಮಂಡಳಿ ರಚನೆ- ಇಂತಹ ಇತ್ಯಾದಿ ಕ್ರಮಗಳನ್ನು ಜರುಗಿಸಲಾಗುತ್ತದೆ. ಕರ್ನಾಟಕದ ಹೈದರಾಬಾದ್‌ (ಕಲ್ಯಾಣ) ಕರ್ನಾಟಕ, ಮಹಾರಾಷ್ಟ್ರದ ವಿದರ್ಭ ಹಾಗೂ ಮರಾಠವಾಡಾ, ಗುಜರಾತ್‌ನ ಸೌರಾಷ್ಟ್ರ ಹಾಗೂ ಕಛ್‌, ಗೋವಾ ಮತ್ತು ಬಹುತೇಕ ಈಶಾನ್ಯದ ಗುಡ್ಡಗಾಡು ರಾಜ್ಯಗಳು ಈ ಸ್ಥಾನಮಾನ ಹೊಂದಿವೆ.

ಕೇಂದ್ರ ಸರ್ಕಾರದ ಈ ನಡೆಗೆ ಪೂರಕವಾಗಿ ಕಾಶ್ಮೀರದ ಪ್ರಮುಖ ಪಕ್ಷವಾದ ಪಿಡಿಪಿ ಪ್ರತಿಕ್ರಿಯೆ ನೀಡಿದೆ. ‘371ನೇ ವಿಧಿಯನ್ವಯ ನೀಡುವ ಸ್ಥಾನಮಾನದ ಬಗ್ಗೆ ನಮಗೆ ತೃಪ್ತಿಯಿದೆ’ ಎಂದು ಪಕ್ಷದ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಮುಜಫ್ಫರ್‌ ಹುಸೇನ್‌ ಬೇಗ್‌ ಹೇಳಿದ್ದಾರೆ. ‘ಆದರೆ ಬೇಗ್‌ ಅಭಿಪ್ರಾಯವನ್ನು ಪಕ್ಷಾಧ್ಯಕ್ಷೆ ಮೆಹಬೂಬಾ ಮುಫ್ತಿ ಒಪ್ಪುವುದು ಅನುಮಾನ. ಇದು ಬೇಗ್‌ ವೈಯಕ್ತಿಕ ಅಭಿಪ್ರಾಯವಾಗಿರಬಹುದು’ ಎಂದು ಪಕ್ಷದ ಕೆಲವು ಮುಖಂಡರು ಹೇಳಿದ್ದಾರೆ.