ಜೈಪುರದಲ್ಲಿ ಒಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಅಲ್ಲಿ ಅಣ್ಣ ಮತ್ತು ತಾಯಿಯ ಎದುರಿನಲ್ಲೇ ಮೂರು ವರ್ಷದ ಮಗು ಸಾವನ್ನಪ್ಪಿದೆ. ಸ್ವಲ್ಪ ಸಮಯದ ಮೊದಲು ಮುದ್ದು ಮಗು ತನ್ನ ಅಣ್ಣನನ್ನು ತಬ್ಬಿಕೊಂಡಿತ್ತು, ಅಷ್ಟರಲ್ಲೇ ಆಕೆ ಸಾವಿನ ಮನೆ ಸೇರಿದಳು.
ಜೈಪುರ (ಮಾ.6): 3 ವರ್ಷದ ಪುಟ್ಟ ಬಾಲಕಿ ಪಿಹುಗೆ ಬೆಳಗ್ಗೆಯಿಂದ ಯಾರಿಗೋಸ್ಕರ ಕಾಯುತ್ತಿದ್ದಳೋ, ಆ ಅಣ್ಣನ ಜೊತೆಗಿನ ಕೊನೆಯ ಭೇಟಿ ಇದಾಗುತ್ತದೆ ಎನ್ನುವ ಸಣ್ಣ ಸೂಚನೆಯೂ ಇದ್ದಿರಲಿಲ್ಲ. ದುರಾದೃಷ್ಟವಶಾತ್ ತನ್ನ ಪ್ರೀತಿಯ ಅಣ್ಣ ಹಾಗೂ ತಾಯಿಯ ಎದುರಿನಲ್ಲಿಯೇ ಆಕೆ ಪ್ರಾಣ ಬಿಟ್ಟಿದ್ದಾಳೆ. ಈ ಘಟನೆ ಇಡೀ ಊರಿನ ಶೋಕಕ್ಕೆ ಕಾರಣವಾಗಿದೆ. ರಕ್ತಸಿಕ್ತವಾಗಿ ರಸ್ತೆಯಲ್ಲಿ ಬಿದ್ದಿದ್ದ ತನ್ನ ಮಗುವಿನ ಶವವನ್ನು ನೋಡಿ ತಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ವಿಚಾರ ಏನೆಂದರೆ, 3 ವರ್ಷದ ಮಗವಿನ ಮೇಲೆ ಬಸ್ ಹರಿದಿತ್ತು. ಈ ದುರಂತ ಘಟನೆ ರಾಜಧಾನಿ ಜೈಪುರದ ಕರ್ಣಿ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಣ್ಣನನ್ನು ತಬ್ಬಿಕೊಂಡ ಮುದ್ದು ಮಗು, ಮರುಕ್ಷಣವೇ ದಾರುಣ ಸಾವು: ರಸ್ತೆ ಅಪಘಾತದಲ್ಲಿ 3 ವರ್ಷದ ಮಗು ಸಾವು ಕಂಡಿದೆ. ಕರ್ಣಿ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ 6 ವರ್ಷದ ದೇವಾಂಶ್ ಪ್ರತಿದಿನ ಹತ್ತಿರದ ರೋಜ್ ಇಂಟರ್ನ್ಯಾಷನಲ್ ಶಾಲೆಗೆ ಹೋಗುತ್ತಿದ್ದ. ಆತನ ತಂದೆ ವಿಷ್ಣು ಪ್ರತಾಪ್ ದೊಡ್ಡ ಫಾರ್ಮಾ ಕಂಪನಿಯಲ್ಲಿ ಸೀನಿಯರ್ ಹುದ್ದೆಯಲ್ಲಿದ್ದಾರೆ. ಘಟನೆ ನಡೆಯುವ ಸಂದರ್ಭದಲ್ಲಿ ಅವರು ಊರಿನಿಂದ ಹೊರಗಿದ್ದರು. ಫೆಬ್ರವರಿ 28 ರಂದು ಪ್ರತಿದಿನದಂತೆ ತಂಗಿ ತನ್ನ ಅಣ್ಣನಿಗಾಗಿ ಕಾಯುತ್ತಿದ್ದಳು. ಮಧ್ಯಾಹ್ನ 2:00 ಗಂಟೆಗೆ ಬಸ್ ಹಾರ್ನ್ ಕೇಳಿದ ತಕ್ಷಣ ಪಿಹು ತನ್ನ ತಾಯಿಯೊಂದಿಗೆ ಅಣ್ಣನನ್ನು ಕರೆದುಕೊಂಡು ಬರಲು ಮನೆಯಿಂದ ಹೊರಗೆ ಬಂದಿದ್ದಳು. ದೇವಾಂಶ್ ಬಸ್‌ನಿಂದ ಇಳಿದ ತಕ್ಷಣ ಪಿಹು ಆತನನ್ನು ತಬ್ಬಿಕೊಂಡರೆ, ತಾಯಿ ತನ್ನ ಮಗನ ಬ್ಯಾಗ್ ತೆಗೆದುಕೊಂಡು ಮನೆ ಕಡೆಗೆ ಹೋಗುತ್ತಿದ್ದಳು. ಈ ವೇಳೆ ಶಾಲಾ ಬಸ್ ಮುಂದೆ ಹೋಗುವಾಗ ಚಾಲಕ ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿದ್ದಾನೆ. ತಾಯಿ ಮತ್ತು ಅಣ್ಣನ ಎದುರಿನಲ್ಲೇ 3 ವರ್ಷದ ಪಿಹು ಮೇಲೆ ಬಸ್ ಹರಿದು ಕೊನೆಯುಸಿರೆಳೆದಿದ್ದಾಳೆ. ಘಟನೆ ನಡೆದ ಬೆನ್ನಲ್ಲಿಯೇ ಬಸ್ ಚಾಲಕ ಅಲ್ಲಿಂದ ಪರಾರಿಯಾಗಿದ್ದಾರೆ. ಸ್ವಲ್ಪ ದೂರದಲ್ಲಿ ಬಸ್ ನಿಲ್ಲಿಸಿ, ಬಸ್‌ನಿಂದ ಇಳಿದು ಓಡಿಹೋಗಿದ್ದಾನೆ.
ಈ ಸಂಪೂರ್ಣ ಘಟನೆಯ ಬಗ್ಗೆ ವಿಷ್ಣು ಪ್ರತಾಪ್ ಅಪಘಾತ ಪೊಲೀಸ್ ಠಾಣೆ ಪಶ್ಚಿಮದಲ್ಲಿ ದೂರು ದಾಖಲಿಸಿದ್ದಾರೆ. ಕುಟುಂಬವು 5 ದಿನಗಳಿಂದ ಆಘಾತದಲ್ಲಿದೆ ಮತ್ತು ಅಂತ್ಯಕ್ರಿಯೆಗೆ ಸಂಬಂಧಿಸಿದ ಕೆಲಸಗಳಲ್ಲಿ ನಿರತವಾಗಿತ್ತು. ವಿಷ್ಣು ಪ್ರತಾಪ್ ಅವರು ಮೂಲತಃ ಧೌಲ್‌ಪುರ ಜಿಲ್ಲೆಯವರು, ಆದರೆ ಜೈಪುರದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಪ್ರತಿದಿನ ಮಗಳು ಮಗನಿಗಾಗಿ ಕಾಯುತ್ತಿದ್ದಳು, ಆತನೊಂದಿಗೆ ಆಟವಾಡಲು, ಅವಳು ನಮ್ಮ ಇಡೀ ಕುಟುಂಬದ ಮುದ್ದಿನ ಮಗಳಾಗಿದ್ದಳು. ಆದರೆ ಈಗ ಶಾಶ್ವತವಾಗಿ ಅಳುವಂತೆ ಮಾಡಿ ಹೋಗಿದ್ದಾಳೆ ಎಂದು ಕುಟುಂಬ ಕಣ್ಣೀರಿಟ್ಟಿದೆ.
