ಬೋಪಾಲ್[ಡಿ.11]: ಇತ್ತೀಚೆಗೆ ಭಾರೀ ಕ್ರೇಜ್ ಹುಟ್ಟಿಸಿರುವ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಗೆ ನಿಷೇಧ ಹೇರಲಾಗಿದೆ. ಹೌದು ಭೋಪಾಲ್ ನ ಜೈನ, ಗುಜರಾತಿ, ಸಿಂಧಿ ಸಂಘಟನೆಗಳು ವಿವಾಹ ಪೂರ್ವ ಅದ್ದೂರಿ ಚಿತ್ರೀಕರಣಕ್ಕೆ ನಿಷೇಧ ಹೇರಿವೆ. ಹೀಗಾಗಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಎಂಬ ಸಂಪ್ರದಾಯಕ್ಕೆ ಮಧ್ಯಪ್ರದೇಶದ ರಾಜಧಾನಿಯಲ್ಲಿ ಪೂರ್ಣ ವಿರಾಮ ಬಿದ್ದಿದೆ. 

ಜೈನ, ಗುಜರಾತಿ, ಸಿಂಧಿ ಈ ಮೂರೂ ಸಮುದಾಯದ ಮುಖ್ಯಸ್ಥರು ಪ್ರಿ ವೆಡ್ಡಿಂಗ್ ಫೋಟೋ ಶೂಟ್ ನಿಷೇಧಿಸಲು ಈ ಆದೇಶ ಹೊರಡಿಸಿದ್ದಾರೆ. ಈ ಆದೇಶ ಉಲ್ಲಂಘಿಸಿದವರನ್ನು ಸಮುದಾಯದಿಂದ ಬಹಿಷ್ಕರಿಸುವುದಾಗಿಯೂ ಹೇಳಿದ್ದಾರೆ. ಇಷ್ಟೇ ಅಲ್ಲದೇ ಮದುವೆ ಕಾರ್ಯಕ್ರಮಗಳಲ್ಲಿ ನಡೆಯುವ ಮಹಿಳೆಯರ ನೃತ್ಯಕ್ಕೆ ಪುರುಷರನ್ನು ತರಬೇತುದಾರರನ್ನಾಗಿ ನೇಮಿಸಿಕೊಳ್ಳದಂತೆ ಮತ್ತು ಮದುವೆ ಮೆರವಣಿಗೆ[ದಿಬ್ಬಣ]ಯಲ್ಲಿ ಮಾಡುವ ನೃತ್ಯದಲ್ಲಿ ಕುಟುಂಬದ ಮಹಿಳೆಯರು ಭಾಗವಹಿಸಬಾರದೆಂದೂ ಆದೇಶಿಸಿದ್ದಾರೆ.

ಇದು ಅಂತಿಂಥ ಪೋಟೋ ಶೂಟ್ ಅಲ್ಲ...72 ವಸಂತಗಳ ಕತೆ ಹಿಂದಿದೆ!

ಪ್ರಿ ವೆಡ್ಡಿಂಗ್ ಪೋಟೋಶೂಟ್ ಹಾಗೂ ಮದುವೆ ಮಂಟಪದಲ್ಲಿ ಸಭ್ಯತೆ ಮೀರಿ ನಡೆಯುವ ನೃತ್ಯದಿಂದ ತಮ್ಮ ಸಮುದಾಯದ ಗೌರವ ಹಾಗೂ ಸಂಪ್ರದಾಯಕ್ಕೆ ಧಕ್ಕೆಯಾಗುತ್ತಿದೆ. ಸಮುದಾಯದ ಸಂಸ್ಕೃತಿ ಮತ್ತು ಸಂಪ್ರದಾಯ ಕಾಪಾಡುವ ನಿಟ್ಟಿನಲ್ಲಿ ಇವುಗಳನ್ನು ನಿಷೇಧಿಸಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. 

ಇನ್ನು ತಮ್ಮ ಈ ನಿರ್ಧಾರವನ್ನು ಬೆಂಬಲಿಸುವಂತೆ ಇತರ ರಾಜ್ಯದಲ್ಲಿರುವ ತಮ್ಮ ಸಮುದಾಯದ ನಾಯಕರಿಗೂ ಕರೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಭೋಪಾಲ್‌ ಗುಜರಾತ್‌ ಸಮಾಜ ಸಂಸ್ಥೆ ಅಧ್ಯಕ್ಷ ಸಂಜಯ್‌ ಪಟೇಲ್‌ 'ಈ ನಿಷೇಧ ಕೇವಲ ಮಧ್ಯಪ್ರದೇಶಕ್ಕೆ ಸೀಮಿತವಾಗಬಾರದು, ದೇಶಾದ್ಯಂತ ಇರುವ ನಮ್ಮ ಸಮುದಾಯಗಳಿಗೆ ಅನ್ವಯವಾಗಬೇಕು ಎಂಬುದು ನನ್ನ ಅಪೇಕ್ಷೆ. ಅನೇಕ ವಿವಾಹಗಳು ಸಂಬಂಧಗಳು ಆರಂಭವಾಗುವುದಕ್ಕೆ ಮೊದಲೇ ಮುರಿದು ಹೋಗುತ್ತದೆ. ಇಂತಹ ಆಧುನಿಕ ಸಂಪ್ರದಾಯ ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ' ಎಂದಿದ್ದಾರೆ.

ಭಾರತದಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸೋಕೆ ಈ ಸ್ಥಳಗಳು ಬೆಸ್ಟ್!