ಪಾಟ್ನಾ[ನ.26]: ಕ್ರಿಮಿನಲ್‌ಗಳು, ಅಪರಾಧಿಗಳನ್ನು ಪೊಲೀಸರು ತಮ್ಮ ವ್ಯಾನ್‌ನಲ್ಲಿ ಕೊಂಡೊಯ್ಯತ್ತಾರೆ. ಆದರೆ, ಅದೇ ವ್ಯಾನ್‌ನಲ್ಲಿ ಬಿಹಾರದ ಶಾಸಕರೊಬ್ಬರು ವಿಧಾನಸೌಧಕ್ಕೆ ಆಗಮಸಿದ್ದಾರೆ.

ಎ.ಕೆ.47 ರೈಫಲ್‌, ಕೊಲೆ ಯತ್ನ ಹೀಗೆ ವಿವಿಧ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಶಾಸಕ ಅನಂತ್‌ ಸಿಂಗ್‌ ಸದ್ಯ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಈ ಮಧ್ಯೆ ಬಿಹಾರ ವಿಧಾನಸಭೆ ಅಧಿವೇಶನ ಆರಂಭವಾಗಿದ್ದರಿಂದ ಅನಂತ್‌ ಸಿಂಗ್‌ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿದ್ದರು. ಕೋರ್ಟ್‌ನಿಂದ ಅನುಮತಿ ಸಿಕ್ಕಿದ್ದರಿಂದ ನೇರವಾಗಿ ಜೈಲಿನಿಂದಲೇ ಪೊಲೀಸ್‌ ವ್ಯಾನ್‌ನಲ್ಲಿ ವಿಧಾನಸಭೆಗೆ ಅನಂತ್‌ ಸಿಂಗ್‌ ಆಗಮಿಸಿದ್ದಾರೆ.

ಹಣೆಗೆ ಉದ್ದದ ನಾಮ, ಸೂಟ್‌- ಬೂಟ್‌ ಧರಿಸಿ ವಿಧಾನಸಭೆಯಲ್ಲಿ ಆಸೀನರಾಗಿದ್ದಾರೆ. ಅನಂತ್‌ ಸಿಂಗ್‌ ಒಬ್ಬ ರೌಡಿಯಾದರೂ ‘ಚೋಟೆ ಸರ್ಕಾರ್‌’ ಎಂದೇ ಹೆಸರುವಾಸಿಯಾಗಿದ್ದಾರೆ.

ಕ್ರಿಮಿನಲ್‌ ರಾಜಕಾರಣಿಗಳಿಗೆ ಕಂಟಕ?

ಕ್ರಿಮಿನಲ್‌ ಹಿನ್ನೆಲೆಯ ರಾಜಕಾರಣಿಗಳು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ಕುರಿತು ಮೂರು ತಿಂಗಳಲ್ಲಿ ಸೂಕ್ತ ಆದೇಶ ಹೊರಡಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ಸೋಮವಾರ ಸೂಚನೆ ನೀಡಿದೆ. ಇದರಿಂದಾಗಿ ಚುನಾವಣಾ ಕಣವನ್ನು ಕ್ರಿಮಿನಲ್‌ ಮುಕ್ತಗೊಳಿಸುವ ಚೆಂಡು ಈಗ ಮತ್ತೆ ಚುನಾವಣಾ ಆಯೋಗದ ಅಂಗಳಕ್ಕೆ ಬಂದಂತಾಗಿದ್ದು, ಕ್ರಿಮಿನಲ್‌ ಹಿನ್ನೆಲೆಯ ರಾಜಕಾರಣಿಗಳಿಗೆ ಕಂಟಕ ಎದುರಾಗಿದೆ. ಆಯೋಗ ಯಾವ ರೀತಿಯ ನಿಲುವು ತಳೆಯುತ್ತದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.