ಮಾಸ್ಕ್ ಧರಿಸದಿದ್ದರೆ 6 ತಿಂಗಳು ಜೈಲೂಟ, 5000 ರೂ. ದಂಡ!
ಬಹಳ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬುತ್ತಿರುವ ಕೊರೋನಾ ನಿಗ್ರಹಕ್ಕಾಗಿ ಸುಗ್ರೀವಾಜ್ಞೆ| ಮಾಸ್ಕ್ ಧರಿಸದಿದ್ದರೆ 6 ತಿಂಗಳು ಜೈಲೂಟ, 5000 ದಂಡ!
ಡೆಹ್ರಾಡೂನ್(ಜೂ.14): ಉತ್ತರಾಖಂಡ್ ರಾಜ್ಯದಲ್ಲಿ ಇನ್ನು ಮುಂದಿನ ದಿನಗಳಲ್ಲಿ ಮಾಸ್ಕ್ ಧಾರಣೆ ಮಾಡದೆ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡರೆ 6 ತಿಂಗಳು ಜೈಲೂಟ ಹಾಗೂ 5000 ರು. ದಂಡ ಗ್ಯಾರೆಂಟಿ.
ಹೌದು, ಬಹಳ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬುತ್ತಿರುವ ಕೊರೋನಾ ನಿಗ್ರಹಕ್ಕಾಗಿ ಉತ್ತರಾಖಂಡ್ ಸರ್ಕಾರದ ಈ ಸುಗ್ರೀವಾಜ್ಞೆಗೆ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅವರು ಅನುಮೋದನೆ ನೀಡಿದ್ದಾರೆ. ದೇಶದ ಎಲ್ಲ ರಾಜ್ಯಗಳಲ್ಲೂ ಮಾಸ್ಕ್ ಧಾರಣೆ ಕಡ್ಡಾಯವಾಗಿದೆ. ಆದರೆ, ಮಾಸ್ಕ್ ಧರಿಸದೆ ಇರುವವರಿಗೆ ಜೈಲು ಶಿಕ್ಷೆ ಮತ್ತು 5000 ರು.ನಷ್ಟುದಂಡ ವಿಧಿಸಲು ಮುಂದಾಗಿರುವುದು ಉತ್ತರಾಖಂಡ್ ಸರ್ಕಾರವೇ ಮೊದಲು.
ವರಮಾನಕ್ಕಾಗಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಉತ್ತರಾಖಂಡ್‌ನಲ್ಲಿ ಈಗಾಗಲೇ 1700ಕ್ಕೂ ಹೆಚ್ಚು ಸೋಂಕು ಪೀಡಿತರು ಕಂಡುಬಂದಿದ್ದು, ಇದರ ತ್ವರಿತ ನಿಗ್ರಹಕ್ಕಾಗಿ 1897ರ ಸಾಂಕ್ರಮಿಕ ರೋಗ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿದೆ. ಈ ಮೂಲಕ ಕೊರೋನಾ ತಡೆಗಾಗಿ ಈ ಕಾಯ್ದೆಯನ್ನು ತಿದ್ದುಪಡಿ ಮಾಡಿದ ಮೂರನೇ ರಾಜ್ಯವಾಗಿದೆ ಉತ್ತರಾಖಂಡ್. ಇದಕ್ಕೂ ಮುನ್ನ ಕೇರಳ ಹಾಗೂ ಒಡಿಶಾ ಸರ್ಕಾರಗಳು ಕಾಯ್ದೆಯನ್ನು ತಿದ್ದುಪಡಿ ಮಾಡಿವೆ.