ಇಮೇಲ್‌ನಲ್ಲಿದ್ದ ಬೇಲ್ ಆರ್ಡರ್ ಓಪನ್ ಮಾಡಲು ಅಧಿಕಾರಿಗಳು ವಿಫಲ, 3 ವರ್ಷ ಜೈಲಿನಲ್ಲೇ ಉಳಿದ ವ್ಯಕ್ತಿ!
ಜೈಲಿನ ಅಧಿಕಾರಿಗಳು ಜಾಮೀನು ಆದೇಶವನ್ನು ಒಳಗೊಂಡ ಇಮೇಲ್ ಸ್ವೀಕರಿಸಿದರೂ, ಆರ್ಡರ್ ಕಾಪಿಯ ಪಿಡಿಎಫ್‌ಅನ್ನು ಓಪನ್ ಮಾಡಲು ವಿಫಲವಾಗಿದ್ದಾರೆ. ಇದರಿಂದಾಗಿ ಜಾಮೀನು ಪಡೆದ ವ್ಯಕ್ತಿ ಬರೋಬ್ಬರಿ ಮೂರು ವರ್ಷಗಳ ಕಾಲ ಸುಮ್ಮನೆ ಜೈಲಿನಲ್ಲಿ ಕಾಲ ಕಳೆದಿದ್ದಾರೆ.

ಅಹಮದಾಬಾದ್ (ಸೆ. 27): ಅಪರಾಧಿಯಾಗಿದ್ದ ವ್ಯಕ್ತಿಯೊಬ್ಬ ತನ್ನ ಕೇಸ್‌ನಲ್ಲಿ 2020ರಲ್ಲಿಯೇ ಗುಜರಾತ್ ಹೈಕೋರ್ಟ್‌ನಲ್ಲಿ ಜಾಮೀನು ಪಡೆದುಕೊಂಡಿದ್ದ. ಆತನಿಗೆ ಜಾಮೀನು ಸಿಕ್ಕಿರುವ ವಿಚಾರ ಹೈಕೋರ್ಟ್ ರಿಜಿಸ್ಟ್ರೀಯಿಂದ ಜೈಲಿನ ಇಮೇಲ್‌ಗೂ ರವಾನೆಯಾಗಿತ್ತು. ಆದರೆ, ಜೈಲಿನ ಅಧಿಕಾರಿಗಳು ಈ ಜಾಮೀನಿನ ಆರ್ಡರ್‌ನ ಪಿಡಿಎಫ್ ಕಾಪಿಯನ್ನು ಓಪನ್ ಮಾಡಲು ಸಾಧ್ಯವಾಗಿರಲಿಲ್ಲ. ಎಷ್ಟು ಬಾರಿ ಪ್ರಯತ್ನಪಟ್ಟರೂ ಅದರಲ್ಲಿ ವಿಫಲವಾಗಿದ್ದರು. ದಿನಗಳು ಕಳೆಯುತ್ತಾ ಹೋದವು. ಬರೋಬ್ಬರಿ ಮೂರು ವರ್ಷಗಳು ಕಳೆದ ಬಳಿಕ ತನ್ನ ಜಾಮೀನಿಗಾಗಿ ಅಪರಾಧಿ ಮತ್ತೆ ಕೋರ್ಟ್‌ನ ಮೊರೆ ಹೋಗಿದ್ದ, ಆಗ ಈ ಪ್ರಕರಣ ಮತ್ತೆ ಕೋರ್ಟ್‌ನ ಗಮನಕ್ಕೆ ಬಂದಿದೆ. ಈ ವೇಳೆ ಅಧಿಕಾರಿಗಳು ತಮ್ಮ ಉತ್ತರವನ್ನು ನೀಡಿದ್ದಾರೆ. ಜೈಲಿನ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಛೀಮಾರಿ ಹಾಕಿದ ಕೋರ್ಟ್, ಅಪರಾಧಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಸೂಚನೆ ನೀಡಿದೆ. ನ್ಯಾಯಮೂರ್ತಿ ಎಎಸ್ ಸುಪೇಹಿಯಾ ಮತ್ತು ನ್ಯಾಯಮೂರ್ತಿ ಎಂಆರ್ ಮೆಂಗ್ಡೆ ಅವರ ವಿಭಾಗೀಯ ಪೀಠವು 27 ವರ್ಷದ ಅಪರಾಧಿ ಚಂದನ್‌ಜಿ ಠಾಕೋರ್‌ನಿಂದ ಹೊಸ ಅರ್ಜಿಯನ್ನು ಸಲ್ಲಿಸಿದ ನಂತರ ರಾಜ್ಯಕ್ಕೆ ₹ 1 ಲಕ್ಷ ಪರಿಹಾರವನ್ನು ನೀಡುವಂತೆ ಆದೇಶ ನೀಡಿದೆ.
"ಈ ಪ್ರಕರಣದಲ್ಲಿ, ನ್ಯಾಯಾಲಯವು ಅರ್ಜಿದಾರರನ್ನು ಸಾಮಾನ್ಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ ಆದೇಶದ ಬಗ್ಗೆ ಈ ನ್ಯಾಯಾಲಯದ ರಿಜಿಸ್ಟ್ರಿಯಿಂದ ಜೈಲು ಅಧಿಕಾರಿಗಳಿಗೆ ಸ್ಪಷ್ಟವಾಗಿ ಮಾಹಿತಿ ನೀಡಿತ್ತು. ಆದರೆ, ತಮಗೆ ಇ-ಮೇಲ್ ಬಂದಿಲ್ಲ. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಇ-ಮೇಲ್ ಸ್ವೀಕರಿಸಿದ್ದರೂ, ಲಗತ್ತನ್ನು ತೆರೆಯಲು ಅವರಿಗೆ ಸಾಧ್ಯವಾಗಲಿಲ್ಲ ಎಂಬುದು ಜೈಲು ಅಧಿಕಾರಿಗಳ ವಾದವಾಗಿದೆ, ”ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಈ ಇಮೇಲ್ ಅನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೂ ಕಳುಹಿಸಲಾಗಿದ್ದರೂ, ಅಪರಾಧಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಆದೇಶವನ್ನು ಸೂಕ್ತವಾಗಿ ಜಾರಿಗೆ ತರಲು ನ್ಯಾಯಾಲಯವು ಯಾವುದೇ ಪ್ರಯತ್ನಗಳನ್ನು ಮಾಡಲಿಲ್ಲ ಎಂದು ನ್ಯಾಯಾಲಯವು ಎಚ್ಚರಿಸಿದೆ. ಪ್ರಸ್ತುತ ಪ್ರಕರಣವು ಸಮಾಜಕ್ಕೆ ಕಣ್ಣು ತೆರೆಸುವಂತಿದೆ ಎಂದು ನ್ಯಾಯಾಲಯ ಹೇಳಿದೆ.
ಜಾಮೀನು ಪಡೆದಿದ್ದರೂ ಸುಮಾರು ಮೂರು ವರ್ಷಗಳ ಕಾಲ ಜೈಲಿನಲ್ಲಿ ಕಳೆದ ಕೈದಿಯ ದುಃಸ್ಥಿತಿಯನ್ನು ಪರಿಗಣಿಸಿ, ನ್ಯಾಯಾಲಯವು ಅವರಿಗೆ ಪರಿಹಾರವನ್ನು ನೀಡಲು ಒಲವು ತೋರಿತು. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ವ್ಯಕ್ತಿಗೆ 2020ರ ಸೆಪ್ಟೆಂಬರ್ 29 ರಂದು ಜೈಲು ಶಿಕ್ಷೆಯನ್ನು ಅಮಾನತು ಮಾಡಲಾಗಿತ್ತು.
ಹೈಕೋರ್ಟ್‌ನ ರಿಜಿಸ್ಟ್ರಿಯಿಂದ ಜೈಲು ಅಧಿಕಾರಿಗಳಿಗೆ ಇ-ಮೇಲ್ ಮೂಲಕ ಈತನ ಜಾಮೀನಿನ ಮಾಹಿತಿ ನೀಡಲಾಗಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ, ಇ-ಮೇಲ್ ಜೈಲು ಅಧಿಕಾರಿಗಳ ಗಮನಕ್ಕೆ ಬಂದಿಲ್ಲ ಮತ್ತು ನ್ಯಾಯಾಲಯ ನೀಡಿದ ಆದೇಶವನ್ನು ಕಾರ್ಯಗತಗೊಳಿಸಲು ವಿಫಲವಾಗಿತ್ತು. 'ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಲಿಲ್ಲ ಎಂದು ಜೈಲು ಅಧಿಕಾರಿಗಳು ಹೇಳಿಕೊಂಡಿದ್ದಾರೆ ಮತ್ತು ಇಮೇಲ್ ಸ್ವೀಕರಿಸಿದ್ದರೂ, ಅದರ ಪಿಡಿಎಫ್‌ಅನ್ನು ತೆರೆಯಲು ಸಾಧ್ಯವಾಗಲಿಲ್ಲ' ಎಂದು ಜೈಲಿನ ಅಧಿಕಾರಿಗಳು ಕೋರ್ಟ್‌ಗೆ ತಿಳಿಸಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು (ಡಿಎಲ್‌ಎಸ್‌ಎ) ಶಿಕ್ಷೆಯ ಆದೇಶವನ್ನು ಅಮಾನತುಗೊಳಿಸಿರುವುದನ್ನು ಜೈಲು ಅಧಿಕಾರಿಗಳಿಗೆ ಸೂಚಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ, ಅರ್ಜಿದಾರರಿಗೆ ಜಾಮೀನು ನೀಡಲಾಗಿದ್ದರೂ, ಜೈಲು ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಅವರು ಜೈಲಿನಲ್ಲೇ ಮುಂದುವರಿದರು ಎಂದು ನ್ಯಾಯಾಲಯ ಹೇಳಿದೆ.
ಚೈತ್ರಾ ಹೆಸರು ಜತೆ ‘ಕುಂದಾಪುರ’ ಬಳಸದಂತೆ ಕೋರ್ಟ್ ನಿರ್ಬಂಧ: ಮಾಧ್ಯಮ, ಜಾಲತಾಣಗಳಿಗೆ ಸೂಚನೆ
"ಅರ್ಜಿದಾರನು ಬಿಡುಗಡೆಯಾಗಿದ್ದರೂ ಮತ್ತು ತನ್ನ ಸ್ವಾತಂತ್ರ್ಯವನ್ನು ಆನಂದಿಸಬಹುದಾಗಿತ್ತು, ಈ ನ್ಯಾಯಾಲಯವು ನೀಡಿದ ಆದೇಶಕ್ಕೆ ಸಂಬಂಧಿಸಿದಂತೆ ನೋಂದಾವಣೆ ಅಥವಾ ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಲು ಜೈಲು ಅಧಿಕಾರಿಗಳು ಗಮನ ಹರಿಸದ ಕಾರಣ ಆತ ಜೈಲಿನಲ್ಲಿ ಉಳಿಯಬೇಕಾಯಿತು" ಎಂದು ನ್ಯಾಯಾಲಯ ಹೇಳಿದೆ.
ಬಾಲಿವುಡ್ ನಟಿ ಜರೀನ್‌ಗೆ ಬಂಧನ ಭೀತಿ, ಅರೆಸ್ಟ್ ವಾರೆಂಟ್ ಹೊರಡಿಸಿದ ನ್ಯಾಯಾಲಯ!
ಈ ಪರಿಸ್ಥಿತಿಗೆ ಜೈಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದು, ‘ಗಂಭೀರ ಲೋಪ’ಕ್ಕೆ 14 ದಿನಗಳ ಅವಧಿಯಲ್ಲಿ ₹1 ಲಕ್ಷ ಪರಿಹಾರ ನೀಡುವಂತೆ ರಾಜ್ಯಕ್ಕೆ ಸೂಚಿಸಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಜಾಮೀನು ಪಡೆದಿರುವ ಆದರೆ ಇನ್ನೂ ಬಿಡುಗಡೆಯಾಗದಿರುವ ಎಲ್ಲ ಕೈದಿಗಳ ಡೇಟಾವನ್ನು ಸಂಗ್ರಹಿಸಲು ಎಲ್ಲಾ ಡಿಎಲ್‌ಎಸ್‌ಎಗಳಿಗೆ ನ್ಯಾಯಾಲಯ ಸೂಚಿಸಿದೆ.