ಬಂಗಾಳ ರಾಜ್ಯಪಾಲರ ಮೇಲೆ ದೀದಿ ಭ್ರಷ್ಟಾಚಾರ ಆರೋಪ!
* ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ವಿರುದ್ಧ ದೀದೀ ಆರೋಪ
* ಬಂಗಾಳ ರಾಜ್ಯಪಾಲರ ಮೇಲೆ ದೀದಿ ಭ್ರಷ್ಟಾಚಾರ ಆರೋಪ
* ಆರೋಪವನ್ನು ತಳ್ಳಿಹಾಕಿರುವ ಧನಖರ್
ಕೋಲ್ಕತಾ(ಜೂ.29): ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡುವಿನ ವಾಕ್ಸಮರ ಮತ್ತು ತಿಕ್ಕಾಟ ಮುಂದುವರೆದಿದೆ.
‘1996ರ ಹವಾಲಾ ಜೈನ್ ಪ್ರಕರಣದ ಜಾಜ್ರ್ಶೀಟ್ನಲ್ಲಿ ಗವರ್ನರ್ ಹೆಸರು ಉಲ್ಲೇಖವಾಗಿದೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಧನಖರ್ ಅವರನ್ನು ರಾಜ್ಯಪಾಲ ಸ್ಥಾನದಿಂದ ಹಿಂದಕ್ಕೆ ಕರೆಸಿಕೊಳ್ಳಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ದೀದಿ ಒತ್ತಾಯಿಸಿದ್ದಾರೆ.
ಇಂತಹ ಆರೋಪಗಳಿರುವ ರಾಜ್ಯಪಾಲರಿಗೆ ಕೇಂದ್ರ ಸರ್ಕಾರ ಏಕೆ ಅವಕಾಶ ನೀಡುತ್ತದೆ? ಕೇಂದ್ರ ಸರ್ಕಾರವು ಆರೋಪಪಟ್ಟಿ ತೆಗೆದು ಅವರ ಹೆಸರು ಇದೆಯೇ ಎಂದು ನೋಡಲಿ ಎಂದು ಹೇಳಿದ್ದಾರೆ.
ಧನಕರ್ ಅವರನ್ನು ಬಂಗಾಳ ರಾಜ್ಯಪಾಲ ಹುದ್ದೆಯಿಂದ ತೆಗೆದುಹಾಕುವಂತೆ ಕೋರಿ ಕೇಂದ್ರಕ್ಕೆ ಬರೆದ ಮೂರು ಪತ್ರಗಳನ್ನು ಉಲ್ಲೇಖಿಸಿದ ಮಮತಾ, ಕೇಂದ್ರವು ಈಗಲಾದರೂ ತಮ್ಮ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಹೇಳಿದರು.
ಈ ಆರೋಪವನ್ನು ತಳ್ಳಿಹಾಕಿರುವ ಧನಖರ್, ‘ಜೈನ್ ಹವಾಲ ಕೇಸ್ನಲ್ಲಿ ನಮ್ಮ ಹೆಸರಿಲ್ಲ. ಬ್ಯಾನರ್ಜಿ ಅವರು ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.