ಶ್ರೀನಗರ(ಜ.12): ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಾಷ್ಟ್ರಪತಿ ಶೌರ್ಯ ಪ್ರಶಸ್ತಿ ಪದಕ ವಿಜೇತ ಪೊಲೀಸ್ ಅಧಿಕಾರಿಯೋರ್ವ, ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಇಬ್ಬರು ಉಗ್ರರೊಂದಿಗೆ ಸಿಕ್ಕಿ ಬಿದ್ದಿದ್ದಾನೆ.

ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯ ನಿರತರಾಗಿದ್ದ ಡಿಸಿಪಿ ದೇವೇಂದ್ರ ಸಿಂಗ್, ಉಗ್ರರೊಂದಿಗೆ ಕಾರಿನಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕುಲ್ಗಾಮ್ ಜಿಲ್ಲೆ ಬಳಿಯ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ದೆಹಲಿಯತ್ತ ಸಾಗುತ್ತಿದ್ದ ದೇವೇಂದ್ರ ಸಿಂಗ್ ಅವರ ಕಾರಿನಲ್ಲಿ ಹಿಜ್ಬುಲ್ ಉಗ್ರರಾದ ನವೀದ್ ಬಾಬು ಹಾಗೂ ಆಸೀಫ್ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಣಿವೆಯಿಂದ ಅಸ್ಸಾಂಗೆ: ತಡವಾಗಲಿದೆ ಬರುವುದು ಮನೆಗೆ!

ಈ ಇಬ್ಬರೂ ಉಗ್ರರ ಮೇಲೆ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿರುವ ಆರೋಪ ಇದ್ದು, ನವೀದ್ ಬಾಬು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.

ಅದರಂತೆ ರಾಷ್ಟ್ರೀಯ ಹೆದ್ದಾರಿ ಬಳಿ ತಪಾಸಣೆ ವೇಳೆ ಈ ಇಬ್ಬರೂ ಉಗ್ರರು ಪೊಲೀಸ್ ಅಧಿಕಾರಿಯೊಂದಿಗೆ ಸಿಕ್ಕಿ ಬಿದ್ದಿದ್ದು, ಪೊಲೀಸ್ ಇಲಾಖೆ ಬೆಚ್ಚಿ ಬಿದ್ದಿದೆ. ದೇವೇಂದ್ರ ಸಿಂಗ್ ಮನೆಯಲ್ಲಿ ಎಕೆ-47 ರೈಫಲ್, ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.