ಡೆಹ್ರಾಡೂನ್‌(ಫೆ.08): ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಕುಸಿತದ ವೇಳೆ ಸಿಲುಕಿಕೊಂಡಿದ್ದವರನ್ನು ಇಂಡೋ ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌ ಸಿಬ್ಬಂದಿ (ಐಟಿಬಿಪಿ) ರಕ್ಷಿಸಿದ ಮೈನವಿರೇಳಿಸುವ ವಿಡಿಯೋವೊಂದು ಲಭ್ಯವಾಗಿದೆ.

"

ತಪೋವನ್‌ ಪವರ್‌ ಪ್ರಾಜೆಕ್ಟ್ ಏರಿಯಾದಲ್ಲಿ ಸಿಲುಕಿಕೊಂಡಿದ್ದ 12 ಮಂದಿ ಕಾರ್ಮಿಕರನ್ನು ಐಟಿಬಿಪಿ ಸಿಬ್ಬಂದಿ ರಕ್ಷಣೆ ಮಾಡಿದೆ. ಈ ಕಾರ್ಯಾಚರಣೆಯ ರೋಚಕ ವಿಡಿಯೋವನ್ನು ಐಟಿಬಿಪಿ ಟ್ವೀಟರ್‌ನಲ್ಲಿ ಹಂಚಿಕೊಂಡಿದೆ. ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕನೊಬ್ಬನನ್ನು ರಕ್ಷಣಾ ಸಿಬ್ಬಂದಿ ಮೇಲೆಕ್ಕೆ ಎತ್ತಿದ್ದು, ಮೇಲೆ ಬಂದ ಆತ ತಾನು ಅಂತೂ ಬದುಕಿಬಂದೆ ಎಂದು ನಿಟ್ಟುಸಿರು ಬಿಟ್ಟಿದ್ದಾನೆ.

ರಕ್ಷಣಾ ಕಾರ್ಯಾಚರಣೆಯ ವೇಳೆ ಸ್ಥಳದಲ್ಲಿ ಇದ್ದ ವ್ಯಕ್ತಿಗಳು ಪ್ರತಿಯೊಬ್ಬರನ್ನು ರಕ್ಷಿಸಿದಾಗಲೂ ರಕ್ಷಣಾ ಸಿಬ್ಬಂದಿಯನ್ನು ‘ಬಹೂತ್‌ ಬಡಿಯಾ, ಶಭಾಷ್‌, ಜೈ ಹೋ ಎಂದು ಘೋಷಣೆ ಕೂಗಿ ಹುರಿದುಂಬಿಸಿದ್ದಾರೆ. ಈ ವೇಳೆ ರಕ್ಷಣಾ ಸಿಬ್ಬಂದಿ ‘ಧಮ್‌ ಲಗಾಕೆ ಐಸಾ’ ಎಂದು ಹಗ್ಗವನ್ನು ಎಳೆಯುತ್ತಿರುವ ದೃಶ್ಯವನ್ನೂ ವಿಡಿಯೋದಲ್ಲಿ ನೋಡಬಹುದಾಗಿದೆ. ಘಟನೆಯಲ್ಲಿ ರಕ್ಷಿಸಲ್ಪಟ್ಟವರು ತಮಗೆ ಪುನರ್‌ ಜನ್ಮ ಸಿಕ್ಕಷ್ಟೇ ಸಂಸತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಕಾರ್ಯಾಚರಣೆಯನ್ನು ವಿವರಿಸಿದ್ದಾರೆ.