ನವದೆಹಲಿ[ಡಿ.16]: ಚೀನಾ ಗಡಿಯನ್ನು ಕಾಯುತ್ತಿರುವ ಇಂಡೋ ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ ಪಡೆಯಲ್ಲಿ ಅವಿವಾಹಿತರ ಸಂಖ್ಯೆ ಹೆಚ್ಚಾಗಿರುವ ಕಾರಣ, ಸೂಕ್ತ ಸಂಗಾತಿಯ ಆಯ್ಕೆಗೆ ಇದೇ ಮೊದಲ ಬಾರಿಗೆ ವೈವಾಹಿಕ ವೆಬ್‌ಸೈಟ್‌ವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಐಟಿಬಿಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವಿವಾಹಿತ ಪುರುಷರು, ವಿಧವೆಯರು ಮತ್ತು ವಿಚ್ಛೇದನ ಪಡೆದವರು ತಮಗೆ ಸೂಕ್ತವಾದ ಸಂಗಾತಿ ಆಯ್ಕೆ ಮಾಡಿಕೊಳ್ಳಲು ಸಹಾಯವಾಗಲಿದೆ.

ವಾಸ್ತವ ಗಡಿ ರೇಖೆಯನ್ನು ಕಾವಲು ಕಾಯುತ್ತಿರುವ ಐಟಿಬಿಪಿ ಪಡೆಯಲ್ಲಿ 2500 ಅವಿವಾಹಿತ ಪುರುಷರು ಮತ್ತು 1000 ವಿಧವೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನ ಮಂದಿ ದುರ್ಗಮ ಗಡಿ ಪ್ರದೇಶಗಳು ಮತ್ತು ದೂರದ ಸ್ಥಳಗಳಲ್ಲಿ ಇರುವ ಕಾರಣ ಅವರ ಕುಟುಂಬದವರಿಗೆ ಸೂಕ್ತ ಸಂಗಾತಿಯನ್ನು ಹುಡುಕಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕಾಗಿ ವೈವಾಹಿಕ ವೆಬ್‌ಸೈಟ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡ ವ್ಯಕ್ತಿಯ ಶ್ರೇಯಾಂಕ, ಕೆಲಸಕ್ಕೆ ಸೇರಿದ ದಿನಾಂಕ, ಮನೆಯ ಇರುವ ಸ್ಥಳ ಮತ್ತು ಭಾವಚಿತ್ರವನ್ನು ಅಪ್‌ಲೋಡ್‌ ಮಾಡಲಾಗುತ್ತದೆ. ಒಂದು ವೇಳೆ ವಿವಾಹ ಪ್ರಸ್ತಾವನೆ ಬಂದರೆ ಅದನ್ನು ಇ-ಮೇಲ್‌ ಮತ್ತು ಎಸ್‌ಎಂಎಸ್‌ ಮೂಲಕ ಮಾಹಿತಿ ನೀಡಲಾಗುತ್ತದೆ.