* ಬೆಂಗಳೂರು ಸೇರಿ ಇತರ ಮಹಾನಗರಗಳಲ್ಲಿ ರೇಡ್‌* ಚೀನಾ ಮೊಬೈಲ್‌ ಕಂಪನಿಗಳ ಮೇಲೆ ದೇಶವ್ಯಾಪಿ ಐಟಿ ದಾಳಿ* ಶವೋಮಿ, ಒನ್‌ಪ್ಲಸ್‌, ಒಪ್ಪೋ ಕಂಪನಿಗಳಿಗೆ ಬಿಸಿ

ನವದೆಹಲಿ(ಡಿ.23): ಬೆಂಗಳೂರು ಸೇರಿದಂತೆ ದೇಶಾದ್ಯಂತ ಚೀನಾ ಮೊಬೈಲ್‌ ಕಂಪನಿಗಳು ಮತ್ತು ವಿತರಕ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಹಾಗೂ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಚೀನಾದ ಮೊಬೈಲ್‌ ಕಂಪನಿಗಳು ಭಾರತದ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದ್ದು, ಸರ್ಕಾರಕ್ಕೆ ಭಾರೀ ಪ್ರಮಾಣದ ತೆರಿಗೆ ವಂಚನೆ ಎಸಗುತ್ತಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಮಾಹಿತಿ ಮೇರೆಗೆ ಚೀನಾದ ಮೊಬೈಲ್‌ ಕಂಪನಿಗಳಾದ ಶವೋಮಿ, ಒನ್‌ಪ್ಲಸ್‌, ಒಪ್ಪೋ ಮೇಲೆ ಈ ದಾಳಿ ನಡೆದಿದೆ. ಅಲ್ಲದೆ ಈ ಕಂಪನಿಗಳ ಮೇಲೆ ತನಿಖಾ ಸಂಸ್ಥೆಗಳು ಕಣ್ಗಾವಲು ವಹಿಸಿದ್ದವು.

ಬೆಂಗಳೂರು, ಚೆನ್ನೈ, ಹೈದರಾಬಾದ್‌, ದೆಹಲಿ, ಮುಂಬೈ, ಗ್ರೇಟರ್‌ ನೋಯ್ಡಾ, ಕೋಲ್ಕತಾ, ಗುವಾಹಟಿ, ಇಂದೋರ್‌ ಸೇರಿದಂತೆ ಇನ್ನಿತರ ನಗರಗಳಲ್ಲಿರುವ ಚೀನೀ ಮೊಬೈಲ್‌ ಕಂಪನಿಗಳ ಉತ್ಪಾದನಾ ಘಟಕಗಳು, ಗೋಡೌನ್‌ಗಳು, ಕಾರ್ಪೊರೆಟ್‌ ಕಚೇರಿಗಳ ಮೇಲೆ ದಾಳಿ ನಡೆದಿದೆ. ಈ ಕಂಪನಿಗಳ ಹಿರಿಯ ಅಧಿಕಾರಿಗಳ ಕಚೇರಿ ಮತ್ತು ನಿವಾಸಗಳಲ್ಲೂ ದಾಳಿ ನಡೆಸಲಾಗಿದ್ದು, ಅವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕಾನೂನು ಗೌರವಿಸುತ್ತೇವೆ- ಒಪ್ಪೋ, ಶವೋಮಿ:

ದಾಳಿ ಬಗ್ಗೆ ಒಪ್ಪೋ ವಕ್ತಾರ ಪ್ರತಿಕ್ರಿಯಿಸಿ, ‘ಭಾರತದಲ್ಲಿ ಹೂಡಿಕೆ ಪಾಲುದಾರಿಕೆ ಹೊಂದಿರುವ ನಾವು ಈ ನೆಲದ ಕಾನೂನುಗಳನ್ನು ಗೌರವಿಸುತ್ತೇವೆ ಹಾಗೂ ಅದನ್ನು ಪಾಲಿಸುತ್ತಿದ್ದೇವೆ. ಪ್ರಕರಣದ ತನಿಖೆಗೆ ತನಿಖಾ ಸಂಸ್ಥೆಗಳಿಗೆ ಪೂರ್ತಿ ಸಹಕಾರ ನೀಡುತ್ತೇವೆ’ ಎಂದು ತಿಳಿಸಿದ್ದಾರೆ.

‘ಜವಾಬ್ದಾರಿಯುತ ಕಂಪನಿಯಾಗಿ ನಾವು ಭಾರತದ ಕಾನೂನುಗಳಿಗೆ ಹೆಚ್ಚಿನ ಮಹತ್ವ ನೀಡುತ್ತೇವೆ. ಜತೆಗೆ ತನಿಖಾ ಸಂಸ್ಥೆಗಳು ಕೋರುವ ಎಲ್ಲಾ ಮಾಹಿತಿಗಳನ್ನು ನೀಡಿ, ಸಹಕರಿಸುತ್ತೇವೆ’ ಎಂದು ಶವೋಮಿ ತಿಳಿಸಿದೆ.

ದಾಳಿ ನಡೆದಿದ್ದೇಕೆ?

- ಚೀನಾದ ಮೊಬೈಲ್‌ ಕಂಪನಿಗಳಿಂದ ಭಾರತದ ಕಾನೂನು ಉಲ್ಲಂಘನೆ

- ಸರ್ಕಾರಕ್ಕೆ ಚೀನೀ ಕಂಪನಿಗಳಿಂದ ವರಮಾನ, ಆದಾಯ ತೆರಿಗೆ ವಂಚನೆ

- ಈ ಸಂಬಂಧ ಗುಪ್ತಚರ ಇಲಾಖೆಯಿಂದ ಸರ್ಕಾರಕ್ಕೆ ಖಚಿತ ಮಾಹಿತಿ

- ಇದೇ ಕಾರಣಕ್ಕೆ ದೇಶಾದ್ಯಂತ ಚೀನಾ ಮೊಬೈಲ್‌ ಕಂಪನಿಗಳಿಗೆ ಐ.ಟಿ. ಲಗ್ಗೆ

- ಉತ್ಪಾದನೆ ಘಟಕ, ಗೋಡೌನ್‌, ಕಾರ್ಪೊರೇಟ್‌ ಕಚೇರಿಗಳಲ್ಲಿ ತಲಾಶ್‌

- ಅಧಿಕಾರಿಗಳಿಂದ ಅಕ್ರಮಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳ ವಶ