ಬಗೆದಷ್ಟು ಸಿಗ್ತಿದೆ ಶಶಿಕಲಾ ಆಸ್ತಿ; ಮತ್ತೆ 300 ಕೋಟಿ!
ಜಯಲಲಿತಾ ಆಪ್ತೆ ಶಶಿಕಲಾಗೆ ತಪ್ಪದ ಆದಾಯ ತೆರಿಗೆ ಇಲಾಖೆ ಕಾಟ/ ಮತ್ತೆ 300 ಕೋಟಿ ರೂ. ಆಸ್ತಿ ಲೆಕ್ಕಕ್ಕೆ ಹಾಕಿಕೊಂಡ ಇಲಾಖೆ/ ಪೋಸ್ ಗಾರ್ಡನ್ ಎದುರಿನಲ್ಲಿಯೇ ಭವ್ಯ ಬಂಗಲೆ ನಿರ್ಮಾಣ ಮಾಡುತ್ತಿರುವ ಶಶಿಕಲಾ/
ಚೆನ್ನೈ(ಸೆ. 01) ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾಗೆ ಸೇರಿದ ಚೆನ್ನೈನ 300 ಕೋಟಿ ರೂ. ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಲೆಕ್ಕಕ್ಕೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ.
ಚೆನ್ನೈನ ಪೋಸ್ ಗಾರ್ಡನ್ ಸೇರಿ 65 ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆಯ ಬೆನಾಮಿ ನಿಷೇಧ ದಳ ಲೆಕ್ಕಕ್ಕೆ ತೆಗೆದುಕೊಂಡಿದೆ.
ಜಯಲಲಿತಾರ ಪೋಸ್ ಗಾರ್ಡನ್ ನಿವಾಸದ ಎದುರಿನಲ್ಲಿಯೇ ಶಶಿಕಲಾ ಹೊಸ ಮನೆ ನಿರ್ಮಾಣ ಮಾಡುತ್ತಿದ್ದು ಜೈಲಿನಿಂದ ಬಿಡುಗಡೆಯಾದ ಮೇಲೆ ಅಲ್ಲೆ ವಾಸವಿರಲಿದ್ದಾರೆ ಎನ್ನಲಾಗಿದೆ. ವೇದಾ ನಿಲಯಂ ಹೆಸರಿನಲ್ಲಿ ದೊಡ್ಡ ಬಂಗಲೆ ನಿರ್ಮಾಣ ನಡೆಯುತ್ತಿದೆ. ಆಸ್ತಿ ಲೆಕ್ಕಕ್ಕೆ ತೆಗೆದುಕೊಂಡ ಬಗ್ಗೆ ಆದಾಯ ತೆರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬೆಂಗಳೂರು ಜೈಲಿನಲ್ಲಿಯೇ ಇದ್ದಾರೆ ಶಶಿಕಲಾ
ಅಕ್ರಮ ಆಸ್ತಿ ಗಳಿಕೆ ಸಂಬಂಧ ಶಶಿಕಲಾ ಮತ್ತು ಆಕೆಯ ಬೆಂಬಲಿಗರಾದ ಇಳವರಸಿ ಹಾಗೂ ಸುಧಾಕರನ್ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆಯಾಗಿತ್ತು. 2017 ರಲ್ಲಿ ದೊಡ್ಡ ಮಟ್ಟದ ದಾಳಿ ಮಾಡಿದ್ದ ಆದಾಯ ತೆರಿಗೆ ಇಲಾಖೆ ಶಶಿಕಲಾಗೆ ಸೇರಿದ್ದ 187 ಆಸ್ತಿಗಳ ಮೇಲೆ ದಾಳಿ ಮಾಡಿ 1,430 ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು.
2019ರ ನವೆಂಬರ್ ನಲ್ಲಿಯೂ ವಿವಿಧ ಕಡೆ ದಾಳಿ ಮಾಡಿ 1,500 ಕೋಟಿ ರೂ. ಆಸ್ತಿ ತಾತ್ಕಾಲಿಕ ಜಪ್ತಿ ಮಾಡಲಾಗಿತ್ತು. ಈಗ ಲೆಕ್ಕಕ್ಕೆ ಮತ್ತೆ ಮುನ್ನೂರು ಕೋಟಿ ಸೇರಿಕೊಂಡಿದೆ.