Asianet Suvarna News Asianet Suvarna News

ಟೀವಿ ಇಲ್ಲದೆ ಚಂದ್ರಯಾನ ಲ್ಯಾಂಡಿಂಗ್‌ ವೀಕ್ಷಣೆ ತಪ್ಪಿಸಿಕೊಂಡ ಇಸ್ರೋ ವಿಜ್ಞಾನಿ!

ಟೀವಿ ಇಲ್ಲದೇ ಚಂದ್ರಯಾನ ನೌಕೆ ಲ್ಯಾಂಡಿಂಗ್‌ ಅವಕಾಶ ತಪ್ಪಿಸಿಕೊಂಡ ಮಣಿಪುರ ವಿಜ್ಞಾನಿ.  ಮತ್ತೊಂದೆಡೆ ಚಂದ್ರಯಾನ ಲ್ಯಾಂಡಿಂಗ್‌ ಹಿನ್ನೆಲೆಯಲ್ಲಿ ಸೋದರಿ ಮದುವೆ ತಪ್ಪಿಸಿಕೊಂಡ ಹಿರಿಯ ವಿಜ್ಞಾನಿ ವೀರಮುತ್ತುವೇಲ್‌.

ISRO scientist  who missed watching Chandrayaan 3 landing due to No TV at Manipur relief camp gow
Author
First Published Aug 26, 2023, 3:04 PM IST

ಇಂಫಾಲ್‌ (ಆ.26): ಚಂದ್ರಯಾನ-3 ಯೋಜನೆಯ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯುವುದನ್ನು ಇಡೀ ದೇಶವೇ ನೋಡಿ ಸಂಭ್ರಮಿಸಿದರೂ ಟೀವಿ ಇಲ್ಲದ ಕಾರಣಕ್ಕೆ ಇಸ್ರೋ ವಿಜ್ಞಾನಿಯೊಬ್ಬರು ನೋಡುವುದನ್ನು ತಪ್ಪಿಸಿಕೊಂಡ ಘಟನೆ ನಡೆದಿದೆ. ಪೋಷಕರನ್ನು ನೋಡಲು ಮಣಿಪುರಕ್ಕೆ ತೆರಳಿದ್ದ ಜೇಮ್ಸ್‌ ಲೇಚೋಮ್‌ಬಾಮ್‌ James Leichombam) ಈ ಸಂಭ್ರಮದಿಂದ ವಂಚಿತರಾಗಿದ್ದಾರೆ.

ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರದಲ್ಲಿನ ಪರಿಹಾರ ಕೇಂದ್ರವೊಂದರಲ್ಲಿ ಆಶ್ರಯ ಪಡೆದುಕೊಂಡಿರುವ ತಮ್ಮ ಪೋಷಕರನ್ನು ಭೇಟಿ ಮಾಡಲು ಜೇಮ್ಸ್‌ ತೆರಳಿದ್ದರು. ಆದರೆ ಈ ಪರಿಹಾರ ಕೇಂದ್ರದಲ್ಲಿ ಟೀವಿ ವ್ಯವಸ್ಥೆ ಇಲ್ಲದ ಕಾರಣ ನೇರ ಪ್ರಸಾರ ವೀಕ್ಷಣೆಯಿಂದ ಅವರು ವಂಚಿತರಾದರು. ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ನನಗೆ ನೇರಪ್ರಸಾರ ನೋಡಲು ಸಾಧ್ಯವಾಗಲಿಲ್ಲ. ಆದರೆ ಸುರಕ್ಷಿತ ಲ್ಯಾಂಡಿಂಗ್‌ ಆದ ಬಗ್ಗೆ ಸ್ನೇಹಿತರಿಂದ ವಿಷಯ ತಿಳಿದು ಸಂತೋಷಗೊಂಡೆ ಎಂದಿದ್ದಾರೆ.

ಇಸ್ರೋದಿಂದ ಹೊಸ ವಿಡಿಯೋ ಬಿಡುಗಡೆ, ಚಂದ್ರನ ಮೇಲೆ ಪ್ರಗ್ಯಾನ್‌ ರೋವರ್‌, ಸ್ಪಷ್ಟವಾಗಿ ಗೋಚರಿಸಿದ ಭಾರತದ ಲಾಂಛನ

ಚಂದ್ರಯಾನ-3 ಯೋಜನೆಗೆ ಸಂಬಂಧಿಸಿದಂತೆ ಹಲವು ತಾಂತ್ರಿಕವಲ್ಲದ ಸೇವೆಗಳನ್ನು ಜೇಮ್ಸ್‌ ಒದಗಿಸಿದ್ದಾರೆ. 2013ರಿಂದಲೂ ಇಸ್ರೋದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ತಮ್ಮ ಪೋಷಕರನ್ನು ನೋಡುವ ಸಲುವಾಗಿ ಆ.21ರಂದು ಮಣಿಪುರಕ್ಕೆ ತೆರಳಿದ್ದರು.

ಸೋದರಿ ಮದುವೆ ತಪ್ಪಿಸಿಕೊಂಡ ಮುತ್ತುವೇಲ್‌:
ವಿಲ್ಲುಪುರಂ: ಚಂದ್ರಯಾನ-3 ಯೋಜನೆಯ ಯಶಸ್ಸಿಗಾಗಿ ಕೆಲಸ ಮಾಡಿದ ಯೋಜನಾ ನಿರ್ದೇಶಕ ಪಿ.ವೀರಮುತ್ತುವೇಲ್‌ ಆ.20ರಂದು ನಡೆದ ತಮ್ಮ ಸೋದರಿಯ ಮದುವೆಯನ್ನು ತಪ್ಪಿಸಿಕೊಂಡಿದ್ದಾರೆ. ಅವರ ಇಡೀ ಕುಟುಂಬ ಮದುವೆಯ ಸಂಭ್ರಮದಲ್ಲಿದ್ದರೆ ವೀರಮುತ್ತುವೇಲ್‌(46) ಚಂದ್ರಯಾನ ಲ್ಯಾಂಡಿಂಗ್‌ಗಾಗಿ ಹಲವು ಟಾಸ್‌್ಕಗಳಲ್ಲಿ ತೊಡಗಿಸಿಕೊಂಡಿದ್ದರು.

ಚಂದ್ರಯಾನ-3 ಯೋಜನೆಯಲ್ಲಿರುವ ಪೇ ಲೋಡ್‌ಗಳ ನಿಯಂತ್ರಣವನ್ನು ವೀರಮುತ್ತುವೇಲ್‌ ಸ್ವತಃ ನಿರ್ವಹಣೆ ಮಾಡುತ್ತಿದ್ದರು. ಯೋಜನೆ ಯಶಸ್ಸಿನ ಬಳಿಕ ಮಾತನಾಡಿದ ಅವರು, ‘ಇದು ನನ್ನ ಜೀವನದಲ್ಲಿ ಅತಿ ಸಂತೋಷದ ದಿನ. ಎಲ್ಲಾ ಶ್ರಮಕ್ಕೂ ಫಲ ಸಿಕ್ಕಿದೆ’ ಎಂದು ಹೇಳಿದರು.

Yadgir: ಚಂದ್ರಯಾನದ ಯಶಸ್ಸು, ಮಕ್ಕಳಿಗೆ ವಿಕ್ರಮ್‌-ಪ್ರಗ್ಯಾನ್‌ ಎಂದು ನಾಮಕರಣ!

ಮಗನ ಸಾಧನೆಯ ಬಗ್ಗೆ ಮಾತನಾಡಿರುವ ಮುತ್ತುವೇಲ್‌ ಅವರ ತಂದೆ ಪಳನೀವೇಲ್‌, ‘ದೃಢನಿಷ್ಠೆ ನನ್ನ ಮಗನ ಯಶಸ್ಸಿಗೆ ಕಾರಣ. ಶಾಲೆಯಲ್ಲಿ ಓದುವ ಸಮಯದಲ್ಲಿ ನನ್ನ ಮಗ ಸಾಧಾರಣ ವಿದ್ಯಾರ್ಥಿಯಾಗಿದ್ದ. ಚೆನ್ನೈ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಇ ಮುಗಿಸಿದ ಬಳಿಕ ಎಚ್‌ಎಎಲ್‌ನಲ್ಲಿ ಉದ್ಯೋಗವಕಾಶ ಸಿಕ್ಕಿತ್ತು. ಆದರೆ ಇಸ್ರೋಗೆ ಸೇರುವ ಸಲುವಾಗಿ ಆತ ಅದನ್ನು ತಿರಸ್ಕರಿಸಿದ’ ಎಂದು ಹೇಳಿದ್ದಾರೆ.

ನಾನು ಬೇಗ ಜನಿಸಿಬಿಟ್ಟೆ, ಈಗ ಚಿಕ್ಕವನಿರಬೇಕಿತ್ತು: ರಾಕೇಶ್‌ ಶರ್ಮಾ
ನವದೆಹಲಿ: ಬಾಹ್ಯಾಕಾಶ ಯಾನ ಕೈಗೊಂಡ ಮೊದಲ ಭಾರತೀಯ ಎಂಬ ಹಿರಿಮೆ ಹೊಂದಿರುವ ರಾಕೇಶ್‌ ಶರ್ಮಾ ಅವರು ಇಸ್ರೋ ಚಂದ್ರಯಾನ-3 ಯಶಸ್ಸಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಬೆಳವಣಿಗೆಯಿಂದ ದೇಶದಲ್ಲಿ ಬಾಹ್ಯಾಕಾಶ ಸಂಶೋಧನಾ ಕಾರ್ಯಕ್ರಮಗಳ ಗಮನಾರ್ಹ ಶಕೆ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ತಾವು ಯುವಕರಾಗಬೇಕಿತ್ತು ಎಂದು ಅವರು ಹೇಳಿ ಕೊಂಡಿದ್ದಾರೆ.

ಇಸ್ರೋ (ISRO) ಯಶಸ್ಸಿನಿಂದ ನನಗೆ ಆಶ್ಚರ್ಯವಾಗಿಲ್ಲ. ಇಸ್ರೋದ ಬಗ್ಗೆ ಆಳವಾಗಿ ಗೊತ್ತಿದೆ. ಹೀಗಾಗಿ ಅವರು ಈ ಬಾರಿ ಯಶಸ್ವಿಯಾಗುತ್ತಾರೆ ಎಂಬುದು ತಿಳಿದಿತ್ತು. ನಾನೊಬ್ಬ ಹೆಮ್ಮೆಯ ಭಾರತೀಯ. ಈಗ ಹೆಮ್ಮೆ ಮತ್ತಷ್ಟುಹೆಚ್ಚಾಗಿದೆ ಎಂದು ಅವರು ‘ನ್ಯಾಷನಲ್‌ ಜಿಯೋಗ್ರಾಫಿಕ್‌’ ವಾಹಿನಿಗೆ ತಿಳಿಸಿದ್ದಾರೆ.

ನನಗೀಗ ವಯಸ್ಸು 75. ಪ್ರಾಯಶಃ ನಾನು ಬೇಗ ಜನಿಸಿಬಿಟ್ಟೆ. ಈಗ ಬಾಹ್ಯಾಕಾಶ ಸಂಶೋಧನಾ ಕಾರ್ಯಕ್ರಮಗಳ ಶಕೆ ಆರಂಭವಾಗಿದೆ. ಹೀಗಾಗಿ ಭಾರತೀಯನಾಗಿ ನಾನು ಇಸ್ರೋದ ಮಹಾನ್‌ ಯಶಸ್ಸಿಗೆ ಧನ್ಯವಾದ ಹೇಳಬಹುದಷ್ಟೆಎಂದಿದ್ದಾರೆ.

Follow Us:
Download App:
  • android
  • ios