Asianet Suvarna News Asianet Suvarna News

ಉಪಗ್ರಹ ಬಿಡಿಭಾಗ ಪೂರ್ಣ ಸ್ವದೇಶಿಕರಣಕ್ಕೆ ಇಸ್ರೋ ಪ್ಲಾನ್‌: ವಿಜ್ಞಾನಿ ಶಂಕರನ್‌

ಪ್ರಸ್ತುತ ನಾವು ಉಪಗ್ರಹದಲ್ಲಿ ಬಳಸುವ ಬಿಡಿ ಭಾಗಗಳಲ್ಲಿ ಶೇ.60ರಷ್ಟನ್ನು ದೇಶೀಯವಾಗಿ ಉತ್ಪಾದಿಸುತ್ತಿದ್ದೇವೆ. ಇನ್ನುಳಿದ ಶೇ.40ರಷ್ಟನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು, ಸಂಪೂರ್ಣವಾಗಿ ಎಲ್ಲ ಬಿಡಿ ಭಾಗಗಳನ್ನೂ ದೇಶೀಯವಾಗಿ ಉತ್ಪಾದಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ ಎಂದು ಸ್ಪಷ್ಟಪಡಿಸಿದ ಎಂ.ಶಂಕರನ್‌ 

ISRO Plans for Full Indigenization of Satellite Components Says Scientist Sankaran grg
Author
First Published Aug 29, 2023, 1:39 PM IST

ಬೆಂಗಳೂರು(ಆ.29):  ಉಪಗ್ರಹಗಳಲ್ಲಿ ಉಪಯೋಗಿಸುವ ಶೇಕಡ 60ರಷ್ಟುಬಿಡಿ ಭಾಗಗಳನ್ನು ದೇಶೀಯವಾಗಿ ಉತ್ಪಾದಿಸಲಾಗುತ್ತಿದ್ದು, ಇನ್ನುಳಿದ ಬಿಡಿಭಾಗಗಳನ್ನೂ ಉತ್ಪಾದಿಸಲು ಶ್ರಮಿಸಲಾಗುತ್ತಿದೆ ಎಂದು ಇಸ್ರೋದ ಯು.ಆರ್‌.ರಾವ್‌ ಉಪಗ್ರಹ ಕೇಂದ್ರದ ನಿರ್ದೇಶಕ ಎಂ.ಶಂಕರನ್‌ ತಿಳಿಸಿದರು.

ಜಿಗಣಿಯ ಅಜ್ರಿ ಎಂಜಿನಿಯರಿಂಗ್‌ ಇಂಡಸ್ಟ್ರೀಸ್‌ನಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಪ್ರಸ್ತುತ ನಾವು ಉಪಗ್ರಹದಲ್ಲಿ ಬಳಸುವ ಬಿಡಿ ಭಾಗಗಳಲ್ಲಿ ಶೇ.60ರಷ್ಟನ್ನು ದೇಶೀಯವಾಗಿ ಉತ್ಪಾದಿಸುತ್ತಿದ್ದೇವೆ. ಇನ್ನುಳಿದ ಶೇ.40 ರಷ್ಟನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು, ಸಂಪೂರ್ಣವಾಗಿ ಎಲ್ಲ ಬಿಡಿ ಭಾಗಗಳನ್ನೂ ದೇಶೀಯವಾಗಿ ಉತ್ಪಾದಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಸೂರ್ಯ ಶಿಕಾರಿ.. ಶುಕ್ರನ ಕಡೆ ಸಫಾರಿ.. ಮತ್ತೇನು ಮಾಡಲಿದೆ ಇಸ್ರೋ?

ಹೆಚ್ಚು ಶಾಖ ಇರುವ ಪ್ರದೇಶದಿಂದ ಕಡಿಮೆ ಶಾಖ ಇರುವ ಪ್ರದೇಶಕ್ಕೆ ತಾಪಮಾನವನ್ನು ಹೊರಹಾಕಲು ಉಪಗ್ರಹಗಳಲ್ಲಿ ಮಹತ್ವದ ‘ಅಮೋನಿಯಂ ಹೀಟ್‌ ಪೈಪ್‌’ಗಳನ್ನು ಬಳಸಲಾಗುತ್ತದೆ. ಮೊದಲು ಇವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈಗ ನಾವು ದೇಶದಲ್ಲೇ ತಯಾರಿಸುತ್ತಿದ್ದೇವೆ. ಆರ್ಜಿ ಕಂಪನಿ ಉತ್ತಮ ಗುಣಮಟ್ಟದ ಪೈಪ್‌ಗಳನ್ನು ತಯಾರಿಸುತ್ತಿದೆ. ಈ ರೀತಿ ಎಷ್ಟೋ ಕಂಪನಿಗಳು ‘ಮೇಡ್‌ ಇನ್‌ ಇಂಡಿಯಾ’ಕ್ಕೆ ಜೊತೆಯಾಗುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಲೆ ಮರೆ ಕಾಯಿಯಂತೆ ಸೇವೆ:

ಇಸ್ರೋದ ಚಂದ್ರಯಾನ-3ರ ಯಶಸ್ಸಿನಲ್ಲಿ ಬಹಳಷ್ಟುಜನರ ಪರಿಶ್ರಮವಿದೆ. ಎಲೆ ಮರೆಯ ಕಾಯಿಯಂತೆ ಹಲವರು ಶ್ರಮಿಸಿದ್ದು, ಹೊರ ಜಗತ್ತಿಗೆ ತಿಳಿಯುವುದಿಲ್ಲ. ಪ್ರತಿಫಲಾಪೇಕ್ಷೆಯಿಲ್ಲದೆ ದುಡಿದ ಅಸಂಖ್ಯಾತ ಜನರ ಸಂಘಟಿತ ಪ್ರಯತ್ನದಿಂದಾಗಿ ನಮಗೆ ಯಶಸ್ಸು ಸಿಕ್ಕಿದೆ. ಇಸ್ರೋದ ಸಾಧನೆಯ ಭಾಗವಾಗಲು ದೇಶೀಯವಾಗಿ ಬಿಡಿಭಾಗಗಳನ್ನು ಉತ್ಪಾದಿಸಲು ಕಂಪನಿಗಳು ಮುಂದೆ ಬರಬಹುದು ಎಂದು ಆಹ್ವಾನ ನೀಡಿದರು.

ಅಜ್ರಿ ಇಂಡಸ್ಟ್ರೀಸ್‌ ಕಂಪನಿಯಿಂದ ಇಸ್ರೋದ ಯು.ಆರ್‌.ರಾವ್‌ ಉಪಗ್ರಹ ಕೇಂದ್ರದ ನಿರ್ದೇಶಕ ಎಂ.ಶಂಕರನ್‌, ಸಹಾಯಕ ನಿರ್ದೇಶಕ ಡಾ. ಅಲೋಕ್‌ಕುಮಾರ್‌ ಶ್ರೀವಾಸ್ತವ, ನಿಯಂತ್ರಕಿ ಅಂಜಲಿ ಎಲ್ಲಿಸ್‌ ಶಂಕರ್‌, ಲಿಯೋಸ್‌ ಉಪ ನಿರ್ದೇಶಕ ಎಚ್‌.ಎನ್‌.ಸುರೇಶ್‌ಕುಮಾರ್‌ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಜ್ರಿ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಬಸವರಾಜ್‌ ಬಿ.ಅಜ್ರಿ, ಪಾರಸ್‌ ಡಿಫೆನ್ಸ್‌ ಆ್ಯಂಡ್‌ ಸ್ಪೇಸ್‌ ಟೆಕ್ನಾಲಜೀಸ್‌ ನಿರ್ದೇಶಕ ಅನಿಸ್‌ ಮೆಹ್ತಾ ಉಪಸ್ಥಿತರಿದ್ದರು.

ಇಸ್ರೋ ವಿಜ್ಞಾನಿಗಳ ಸಾಧನೆ ನೆನೆದು ಪ್ರಧಾನಿ ಮೋದಿ ಭಾವುಕ !

ಇಸ್ರೋಗೆ ‘ಅಮೋನಿಯಂ ಹೀಟ್‌ ಪೈಪ್‌’ ಹಸ್ತಾಂತರ

ಉಪಗ್ರಹಗಳಲ್ಲಿ ಶಾಖವನ್ನು ಹೊರಹಾಕಲು ಬಳಸುವ ‘ಅಮೋನಿಯಂ ಹೀಟ್‌ ಪೈಪ್‌‘ಗಳನ್ನು ಇಸ್ರೋ ಮೊದಲು ಜಪಾನ್‌, ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಈಗ ದೇಶದಲ್ಲೇ ಉತ್ಪಾದಿಸಿ ಸ್ವಾವಲಂಬನೆ ಸಾಧಿಸಲಾಗಿದೆ. ಶಾಖದ ಪೈಪ್‌ ಸರಬರಾಜು ಮಾಡಲು ಆದೇಶ ಪಡೆದ ಎರಡನೇ ಕಂಪನಿ ಜಿಗಣಿಯ ಅಜ್ರಿ ಎಂಜಿನಿಯರಿಂಗ್‌ ಇಂಡಸ್ಟ್ರೀಸ್‌ ಆಗಿದ್ದು, ಸೋಮವಾರ 20 ಪೈಪ್‌ಗಳನ್ನು ಇಸ್ರೋಗೆ ಹಸ್ತಾಂತರಿಸಲಾಯಿತು.

ಜಿಗಣಿಯ ಅಜ್ರಿ ಇಂಜನಿಯರಿಂಗ್‌ ಕಂಪೆನಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಉಪಗ್ರಹಗಳಲ್ಲಿ ಶಾಖವನ್ನು ಹೊರಹಾಕಲು ಬಳಸುವ ‘ಅಮೋನಿಯಂ ಹೀಟ್‌ ಪೈಪ್‌‘ಗಳನ್ನು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಬಸವರಾಜ್‌ ಬಿ.ಅಜ್ರಿ ಅವರು ಇಸ್ರೋದ ಯು.ಆರ್‌.ರಾವ್‌ ಉಪಗ್ರಹ ಕೇಂದ್ರದ ನಿರ್ದೇಶಕ ಎಂ.ಶಂಕರನ್‌ ಅವರಿಗೆ ಹಸ್ತಾಂತರಿಸಿದರು. ಡಾ. ಅಲೋಕ್‌ಕುಮಾರ್‌ ಶ್ರೀವಾಸ್ತವ, ಅಂಜಲಿ ಎಲ್ಲಿಸ್‌ ಶಂಕರ್‌, ಎಚ್‌.ಎನ್‌.ಸುರೇಶ್‌ಕುಮಾರ್‌ ಹಾಜರಿದ್ದರು.

Follow Us:
Download App:
  • android
  • ios