ನವದೆಹಲಿ(ಜ.27): ಶಾಂತಿಯುತವಾಗಿ ನಡೆಯುತ್ತಿದ್ದ ದೆಹಲಿ ರೈತರ ಪ್ರತಿಭಟನೆ ಏಕಾಏಕಿ ಹಿಂಸಾಚಾರದ ಸ್ವರೂಪ ಪಡೆದು, ಕೆಂಪುಕೋಟೆಯನ್ನೇ ಬೇಧಿಸುವ ಮಟ್ಟಕ್ಕೆ ತಲುಪಿದ್ದು ಸಾಕಷ್ಟುಅನುಮಾನಗಳಿಗೆ ಕಾರಣವಾಗಿದೆ. ಕಳೆದ 60 ದಿನಗಳಿಂದ ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸಿಕೊಂಡು ಬಂದಿದ್ದ ರೈತರು, ಟ್ರ್ಯಾಕ್ಟರ್‌ ರಾರ‍ಯಲಿಯನ್ನೂ ಶಾಂತಿಯುತವಾಗಿಯೇ ನಡೆಸುವ ಭರವಸೆ ನೀಡಿ ಅನುಮತಿ ಗಿಟ್ಟಿಸಿಕೊಂಡಿದ್ದರು. ಹಾಗಿದ್ದರೆ ಅದು ಹಿಂಸೆಯ ಸ್ವರೂಪ ಪಡೆದುಕೊಂಡಿದ್ದು ಹೇಗೆ?

ಇದೊಂದು ಪೂರ್ವ ಯೋಜಿತ ಸಂಚೇ? ರೈತರ ನಡುವೆ ಸೇರಿಕೊಂಡಿದ್ದಾರೆ ಎನ್ನಲಾದ ಖಲಿಸ್ತಾನ್‌ ಉಗ್ರರ ದುಷ್ಕೃತ್ಯವೇ? ಅಥವಾ ರಾರ‍ಯಲಿಯನ್ನು ಬಳಸಿಕೊಂಡು ಭಾರತದಲ್ಲಿ ಹಿಂಸೆ ಸೃಷ್ಟಿಸಲು ಪಾಕಿಸ್ತಾನ ನಡೆಸಿದ ಕುತಂತ್ರವೇ?

ಈ ಮೇಲ್ಕಂಡ ಎಲ್ಲಾ ಅನುಮಾನಗಳು ಸತ್ಯ ಎನ್ನುವಂಥ ಹಲವು ಬೆಳವಣಿಗೆ ಕೆಲ ದಿನಗಳಿಂದ ನಡೆದುಕೊಂಡೇ ಬಂದಿದೆ. ಹೀಗಾಗಿಯೇ ದೇಶ ಕಂಡುಕೇಳರಿಯದ ಮಂಗಳವಾರದ ಹಿಂಸಾಚಾರದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕೃಷಿ ಕಾಯ್ದೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿದ್ದ ಸುಪ್ರೀಂಕೋರ್ಟ್‌ಗೆ ಕೆಲ ದಿನಗಳ ಹಿಂದೆ ಮಾಹಿತಿಯನ್ನು ನೀಡಿದ್ದ ಕೇಂದ್ರ ಸರ್ಕಾರ, ರೈತರ ಹೋರಾಟದಲ್ಲಿ ಖಲಿಸ್ತಾನ್‌ ಉಗ್ರರು ಕೂಡಾ ಕೈಜೋಡಿಸಿದ್ದಾರೆ. ಇದು ಆತಂಕದ ವಿಷಯ. ಗುಪ್ತಚರ ಮೂಲಗಳು ಇದನ್ನು ಖಚಿತಪಡಿಸಿವೆ ಎಂದು ಮಾಹಿತಿ ನೀಡಿತ್ತು. ಈ ಮೂಲಕ ಪ್ರತಿಭಟನೆ ಹಾದಿತಪ್ಪುವ ಸುಳಿವು ನೀಡಿತ್ತು.

ಅದಾದ ಬೆನ್ನಲ್ಲೇ ಮೂರು ದಿನಗಳ ಹಿಂದೆ ಮುಸುಕುಧಾರಿಯೊಬ್ಬ ದೆಹಲಿಯ ರೈತರ ಪ್ರತಿಭಟನಾ ಸ್ಥಳದಲ್ಲಿ ಸಿಕ್ಕಿಬಿದ್ದು ತಾನು ಹಿಂಸಾಚಾರಕ್ಕೆ ರೆಡಿಯಾಗಿ ಬಂದಿದ್ದಾಗಿ ಹೇಳುವ ಮೂಲಕ ಏನೋ ಆಗಬಾರದ್ದು ನಡೆಯುತ್ತಿದೆ ಎಂಬುದರ ಮತ್ತಷ್ಟುಸುಳಿವು ನೀಡಿದ್ದ.

ಇನ್ನು ಭಾನುವಾರವಷ್ಟೇ ದೆಹಲಿ ಪೊಲೀಸರು, ಕೃಷಿ ಕಾಯ್ದೆ ರದ್ದು ಬೆಂಬಲಿಸಿ ಟ್ವೀಟರ್‌ ಖಾತೆಗಳ ಪೈಕಿ ಪಾಕಿಸ್ತಾನದ 300ಕ್ಕೂ ಹೆಚ್ಚು ಖಾತೆಗಳು ಪತ್ತೆಯಾಗಿವೆ. ಇದು, ಇಡೀ ಟ್ರ್ಯಾಕ್ಟರ್‌ ರಾರ‍ಯಲಿಯನ್ನು ಹೈಜಾಕ್‌ ಮಾಡಲು ಪಾಕಿಸ್ತಾನದ ನಡೆಸುತ್ತಿರುವ ದುಷ್ಕೃತ್ಯದ ಭಾಗವಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಹೀಗೆ ಈ ಎಲ್ಲಾ ಘಟನೆಗಳು ಮಂಗಳವಾರದ ಹಿಂಸಾಚಾರದ ಘಟನೆ ಏಕಾಏಕಿ ನಡೆದಿರಲಿಕ್ಕಿಲ್ಲ, ಇದೊಂದು ಪೂರ್ವ ಯೋಜಿತ ಸಂಚಾಗಿರಬಹುದು ಎಂಬ ಅನುಮಾನಗಳನ್ನು ಇನ್ನಷ್ಟುದೃಢಪಡಿಸಿವೆ.

ಕೆಂಪುಕೋಟೆಯಲ್ಲಿ ಸಿಖ್‌ ಧ್ವಜಾರೋಹಣಕ್ಕೆ ಪಾಕ್‌ ಸಂಭ್ರಮ!

ನವದೆಹಲಿ: ದಿಲ್ಲಿಯ ಕೆಂಪುಕೋಟೆ ಮೇಲೆ ಪ್ರತಿಭಟನಾನಿರತ ಸಿಖ್‌ ರೈತರು ತಮ್ಮ ಧಾರ್ಮಿಕ ಧ್ವಜ ಹಾರಿಸಿದ್ದರ ಬಗ್ಗೆ ಹಲವು ಪಾಕಿಸ್ತಾನೀಯರು ಸಂಭ್ರಮಿಸಿದ್ದಾರೆ. ‘ಭಾರತದ ರಾಷ್ಟ್ರಧ್ವಜವನ್ನು ತೆಗೆದು ಖಲಿಸ್ತಾನಿ ಧ್ವಜವನ್ನು ಸಿಖ್ಖರು ಹಾರಿಸಿದ್ದಾರೆ’ ಎಂಬ ಸಂದೇಶಗಳನ್ನುಸಾಮಾಜಿಕ ಮಾಧ್ಯಮಗಳಲ್ಲಿ ಅವರು ಹರಿಬಿಟ್ಟಿದ್ದಾರೆ. ಇದು ಕೆಂಪುಕೋಟೆ ಘಟನೆ ಪೂರ್ವನಿಯೋಜಿತವೇ ಎಂಬುವುದಕ್ಕೆ ಪುಷ್ಠಿ ನೀಡಿವೆ.