ತನಗೆ ಮತ ನೀಡಿದ ಜನರಿಗೆ ನೀಡಿದ ಭರವಸೆ ಈಡೇರಿಸಲಾಗದೇ ಬೇಸರಗೊಂಡ ಕಾರ್ಪೋರೇಟರ್ ಒಬ್ಬರು ತನ್ನನ್ನು ತಾನೇ ಚಪ್ಪಲಿಯಿಂದ ಹೊಡೆದು ದಂಡಿಸಿಕೊಂಡ ವಿಚಿತ್ರ ಘಟನೆ ಆಂಧ್ರಪ್ರದೇಶದ ಅನಕಪಲ್ಲಿಯಲ್ಲಿ ನಡೆದಿದೆ.
ಆಂಧ್ರಪ್ರದೇಶ: ತನಗೆ ಮತ ನೀಡಿದ ಜನರಿಗೆ ನೀಡಿದ ಭರವಸೆ ಈಡೇರಿಸಲಾಗದೇ ಬೇಸರಗೊಂಡ ಕಾರ್ಪೋರೇಟರ್ ಒಬ್ಬರು ತನ್ನನ್ನು ತಾನೇ ಚಪ್ಪಲಿಯಿಂದ ಹೊಡೆದು ದಂಡಿಸಿಕೊಂಡ ವಿಚಿತ್ರ ಘಟನೆ ಆಂಧ್ರಪ್ರದೇಶದ ಅನಕಪಲ್ಲಿಯಲ್ಲಿ ನಡೆದಿದೆ. ಚುನಾವಣೆಗೂ ಮೊದಲು ಅವರು ಜನರಿಗೆ ನೀಡಿದ ಭರವಸೆ ಈಡೇರಿಸಲಾಗದೇ ಬೇಸರಗೊಂಡು ಕಾರ್ಪೋರೇಟರ್ ಈ ರೀತಿ ಸ್ವಯಂ ದಂಡನೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಇವರು ಚಪ್ಪಲಿಯಿಂದ ಥಳಿಸಿಕೊಳ್ಳುತ್ತಿರುವ ವೀಡಿಯೋ ವೈರಲ್ ಆಗಿದೆ.
ಅನಕಪಲ್ಲಿ ಜಿಲ್ಲೆಯ ನರಸೀಪಟ್ಟಣ ಪುರಸಭೆಯ ಕಾರ್ಪೋರೇಟರ್ 40 ವರ್ಷದ ಮುಲಪರ್ತಿ ರಾಮರಾಜು ಎಂಬುವವರೇ ಹೀಗೆ ತನ್ನನ್ನು ತಾನು ದಂಡಿಸಿಕೊಂಡ ಕಾರ್ಪೋರೇಟರ್, ತನ್ನ ವಾರ್ಡ್ ಬಗ್ಗೆ ಸ್ಥಳೀಯ ಪೌರಾಡಳಿತ ಮಂಡಳಿಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮತದಾರರಿಗೆ ನೀಡಿದ ಭರವಸೆ ಈಡೇರಿಸಲು ವಿಫಲವಾಗಿರುವುದಾಗಿ ದೂರಿದ್ದಾರೆ.
ತನ್ನ ಈ ಕೃತ್ಯದ ಬಗ್ಗೆ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿದ ರಾಮ್‌ರಾಜು, ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದು 31 ತಿಂಗಳುಗಳೇ ಕಳೆದಿವೆ. ಆದರೂ ನನಗೆ ಜನರ ಮೂಲಭೂತ ಸಮಸ್ಯೆಯಾದ ಒಳಚರಂಡಿ ಸಮಸ್ಯೆ, ವಿದ್ಯುತ್ ಸಮಸ್ಯೆ, ರಸ್ತೆ ದುರಸ್ಥಿ ಸಮಸ್ಯೆ, ನೈರ್ಮಲ್ಯ ಸಮಸ್ಯೆಯನ್ನು ಪರಿಹರಿಸಲು ಆಗುತ್ತಿಲ್ಲ, ಭರವಸೆಗಳನ್ನು ಈಡೇರಿಸದೇ ಪೌರ ಸಭೆಯಲ್ಲಿ ಭಾಗವಹಿಸುವುದಕ್ಕಿಂತ ಸಾಯುವುದು ಉತ್ತಮ ಎಂದು ಹೇಳಿದ್ದಾರೆ. ಜನ ಸಮಸ್ಯೆಗಳನ್ನು ಪರಿಹರಿಸುವಂತೆ ಹೇಳುತ್ತಿದ್ದಾರೆ ಆದರೆ ನನ್ನಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ವೀಡಿಯೋವನ್ನು ತೆಲುಗು ದೇಶಂ ಪಕ್ಷ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ವೀಡಿಯೋದಲ್ಲಿ ರಾಮರಾಜು ಅಳುತ್ತಾ ತನ್ನದೇ ಚಪ್ಪಲಿಯಿಂದ ತನ್ನನ್ನು ಹೊಡೆದುಕೊಳ್ಳುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಸ್ಥಳೀಯ ಚುನಾವಣೆಯಲ್ಲಿ ರಾಮರಾಜುಗೆ ಟಿಡಿಪಿ ಬೆಂಬಲ ನೀಡಿತ್ತು. ತನ್ನ ಪಕ್ಷದಿಂದ ಆಯ್ಕೆಯಾದ ಕಾರ್ಪೋರೇಟರ್ ಬೇಸರವನ್ನು ಎತ್ತಿ ತೋರಿಸಿದ ಟಿಡಿಪಿ ಪಕ್ಷ, ಕಾರ್ಪೋರೇಟರ್ ಮುಲಪರ್ತಿ ರಾಮರಾಜು ಅವರು ತೆಲುಗು ದೇಶಂ ಪಕ್ಷದ ಪರವಾಗಿ ಗೆದ್ದ ಲಿಂಗಪುರಂ ಗ್ರಾಮದ ಬುಡಕಟ್ಟು ಸಮುದಾಯದ ಪ್ರತಿನಿಧಿ. ಅಧಿಕಾರದಲ್ಲಿದ್ದರೂ 30 ತಿಂಗಳಿಂದ ಅವರಿಗೆ ಗ್ರಾಮದಲ್ಲಿ ಒಂದೇ ಒಂದು ನಲ್ಲಿಯನ್ನು ಅಳವಡಿಸಲು ಸಾಧ್ಯವಾಗಿಲ್ಲ ಎಂದು ಅವರು ದೂರಿದ್ದಾರೆ.
