* ಮೋದಿ ವಿರುದ್ಧ ವಿಪಕ್ಷಗಳ ಪ್ರಬಲ ಮೈತ್ರಿಕೂಟ ರಚನೆಯತ್ತ ಹೊಸ ಹೆಜ್ಜೆ* ಪವಾರ್‌ಗೆ ರಾಷ್ಟ್ರಪತಿ ಹುದ್ದೆ: ಕಾಂಗ್ರೆಸ್‌ ಬಳಿ ಪ್ರಶಾಂತ್‌ ಕಿಶೋರ್‌ ಲಾಬಿ?* ಈ ಮೈತ್ರಿಯನ್ನೇ 2024ರ ಲೋಕಸಭಾ ಚುನಾವಣೆಗೆ ಬಳಸುವ ಪ್ರಸ್ತಾಪ

ನವದೆಹಲಿ(ಜು.15): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಬಳಿಕ ಮೂರು ಬಾರಿ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರನ್ನು ಭೇಟಿಯಾಗಿದ್ದ ಚುನಾವಣಾ ರಣತಂತ್ರಗಾರ ಪ್ರಶಾಂತ್‌ ಕಿಶೋರ್‌, ಇದೀಗ ಪವಾರ್‌ ಅವರನ್ನು ರಾಷ್ಟ್ರಪತಿ ಹುದ್ದೆಗೇರಿಸುವ ಕುರಿತು ಕಾಂಗ್ರೆಸ್‌ ಬಳಿ ಲಾಬಿ ಆರಂಭಿಸಿದ್ದಾರೆ. ಮಂಗಳವಾರ ದೆಹಲಿಯಲ್ಲಿ ರಾಹುಲ್‌, ಸೋನಿಯಾ, ಪ್ರಿಯಾಂಕಾ ಭೇಟಿಯ ಉದ್ದೇಶವೂ ಇದೇ ಆಗಿತ್ತು ಎನ್ನಲಾಗಿದೆ.

ತಾವು ಪ್ರಧಾನಿ ಹುದ್ದೆಗೇರುವುದಕ್ಕೆ ಸಾಕಷ್ಟುಅಡ್ಡಿ ಇದೆ ಎಂದು ಅರಿತಿರುವ ಪವಾರ್‌, ರಾಷ್ಟ್ರಪತಿ ಹುದ್ದೆಯತ್ತ ಚಿತ್ತ ಹಾಸಿದ್ದಾರೆ. ಜೊತೆಗೆ, ಹೇಗಿದ್ದರೂ ಎನ್‌ಡಿಎಗೆ ತನ್ನ ಅಭ್ಯರ್ಥಿಯನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡುವುದು ಕಷ್ಟವಿದೆ. ಹೀಗಾಗಿ ಈ ಅವಕಾಶವನ್ನೇ ವಿಪಕ್ಷಗಳ ಮೈತ್ರಿಕೂಟ ರಚನೆಯ ವೇದಿಕೆಯನ್ನಾಗಿ ಮಾಡಿಕೊಳ್ಳಬೇಕು ಎಂಬುದು ಪವಾರ್‌ ಮತ್ತು ಪ್ರಶಾಂತ್‌ ಕಿಶೋರ್‌ ಅವರ ತಂತ್ರ ಎನ್ನಲಾಗುತ್ತಿದೆ.

ಪಿ.ಕೆ. ಈಸ್ ಬ್ಯಾಕ್..!? ಡೆಲ್ಲಿ ರಾಜಕೀಯ ಕಟ್ಟೆಗೆ ಪ್ರಶಾಂತ್ ಕಿಶೋರ್

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎದುರಿಸಲು ತೃತೀಯ ರಂಗದಿಂದ ಸಾಧ್ಯವಾಗದು ಎಂದು ಈಗಾಗಲೆ ಪ್ರಶಾಂತ್‌ ಕಿಶೋರ್‌ ಘೋಷಿಸಿದ್ದಾರೆ. ಹೀಗಾಗಿ ಈ ಮೈತ್ರಿಕೂಟಕ್ಕೆ ಕಾಂಗ್ರೆಸ್‌ ಕರೆತರುವುದು ಅಗತ್ಯವಾಗಿ ಇಬ್ಬರೂ ನಾಯಕರಿಗೆ ಕಾಣಿಸಿದೆ. ಟಿಎಂಸಿ, ಡಿಎಂಕೆ, ಶಿವಸೇನೆ, ಆಪ್‌, ವೈಎಸ್‌ಆರ್‌ ಕಾಂಗ್ರೆಸ್‌ ಜೊತೆಗೆ ಉತ್ತಮ ನಂಟು ಹೊಂದಿರುವ ಪ್ರಶಾಂತ್‌ ವಿಪಕ್ಷಗಳನ್ನು ಒಗ್ಗೂಡಿಸಲು ಸೂಕ್ತ ವ್ಯಕ್ತಿ ಎಂಬುದು ಪವಾರ್‌ ಅವರ ಅಭಿಪ್ರಾಯವೂ ಆಗಿದೆ.

ಸಿಧು ಟ್ವೀಟ್ ಬೆನ್ನಲ್ಲೇ, ರಾಹುಲ್ ಗಾಂಧಿ ಭೇಟಿಯಾದ ಚುನಾವಣಾ ತಂತ್ರಗಾರ!

ಹೀಗಾಗಿಯೇ ಪವಾರ್‌ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿದರೆ, ಪ್ರಧಾನಿ ಹುದ್ದೆ ರೇಸ್‌ನಲ್ಲಿ ಪ್ರಮುಖ ವ್ಯಕ್ತಿ ಕಳಚಿಕೊಳ್ಳುತ್ತಾರೆ. ಜೊತೆಗೆ ಈ ಮೈತ್ರಿಯನ್ನು 2024ರ ಲೋಕಸಭಾ ಚುನಾವಣೆಗೂ ಬಳಸಿದರೆ ಮೋದಿ ಮಣಿಸುವುದು ಸುಲಭ ಎಂಬ ಸುಳಿವನ್ನು ಮಂಗಳವಾರ ಸಭೆ ವೇಳೆ ಕಾಂಗ್ರೆಸ್‌ ನಾಯಕರಿಗೆ ಪ್ರಶಾಂತ್‌ ನೀಡಿ ಬಂದಿದ್ದಾರೆ ಎನ್ನಲಾಗುತ್ತಿದೆ.