ಮಾತೋಶ್ರೀ ಮಸೀದಿಯೇ?: ಉದ್ಧವ್ ವಿರುದ್ಧ ರಾಜ್ ಠಾಕ್ರೆ ಪ್ರಹಾರ!
* ಹನುಮಾನ್ ಚಾಲೀಸಾ ಪಠಣೆಗೆ ನಿರಾಕರಣೆ ವಿರುದ್ಧ ಆಕ್ರೋಶ
* ಮಾತೋಶ್ರೀ ಮಸೀದಿಯೇ?: ಉದ್ಧವ್ ವಿರುದ್ಧ ರಾಜ್ ಠಾಕ್ರೆ ಪ್ರಹಾರ
ಪುಣೆ(ಮೇ.23): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ನಿವಾಸ ‘ಮಾತೋಶ್ರೀ’ ಎದುರು ಹನುಮಾನ್ ಚಾಲೀಸಾ ಪಠಣಕ್ಕೆ ವಿರೋಧ ವ್ಯಕ್ತಪಡಿದ್ದನ್ನು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಟೀಕಿಸಿದ್ದಾರೆ. ‘ಮಾತೋಶ್ರೀ ಎದುರು ಚಾಲೀಸಾ ಪಠಣೆಗೆ ಯಾಕೆ ವಿರೋಧ? ಅದೇನು ಮಸೀದಿಯೇ?’ ಎಂದು ಅವರು ಪ್ರಶ್ನಿಸಿದ್ದಾರೆ.
ಪುಣೆಯಲ್ಲಿ ರಾರಯಲಿಯನ್ನುದ್ದೇಶಿ ಮಾತನಾಡಿದ ಅವರು, ‘ನಾನು ನನ್ನ ಬೆಂಬಲಿಗರಿಗೆ ಧ್ವನಿವರ್ಧಕ ಮೂಲಕ ಹನುಮಾನ್ ಚಾಲೀಸಾ ಪ್ರಸಾರ ಮಾಡಲು ಹೇಳಿದ ನಂತರ, ರಾಣಾ ದಂಪತಿಗಳು ಮಾತೋಶ್ರೀ ಎದುರು ಚಾಲೀಸಾ ಪಠಿಸುವುದಾಗಿ ಹೇಳಿದರು. ಆನಂತರ ಅವರಿಬ್ಬರು ಮತ್ತು ಶಿವ ಸೈನಿಕರ ಜೊತೆ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ’ ಎಂದು ಹೇಳಿದರು. ಇದೇ ವೇಳೆ ಅವರು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬೇಕು ಮತ್ತು ಔರಂಗಾಬಾದ್ ಹೆಸರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.
ಪ್ರಕರಣ ದಾಖಲಿಸುವ ಸಂಚು:
ಅಯೋಧ್ಯೆಗೆ ಹೋಗುವ ಯೋಜನೆಯನ್ನು ಕೈಬಿಟ್ಟಿದ್ದಕ್ಕೆ ಸ್ಪಷ್ಟನೆ ನೀಡಿದ ರಾಜ್ ಠಾಕ್ರೆ, ‘ಅಯೋಧ್ಯೆಗೆ ಹೋದರೆ ನಮ್ಮ ಕಾರ್ತಕರ್ತರ ಹಳೆ ಕೇಸು ಕೆದಕಿ ಪ್ರಕರಣ ದಾಖಲಿಸಲು ಮಹಾರಾಷ್ಟ್ರ ಸರ್ಕಾರ ಸಂಚು ರೂಪಿಸಿತ್ತು. ಹಾಗಾಗಿ ನಾನು ಅಯೋಧ್ಯೆಗೆ ಹೋಗಲಿಲ್ಲ’ ಎಂದರು.
ಮಹಾರಾಷ್ಟ್ರ ಸ್ಪೀಕರ್ ಗಲಾಟೆ: ಆಜಾನ್‌ಗೆ ಚಾಲೀಸಾ ಸಡ್ಡು
: ಮಹಾರಾಷ್ಟ್ರದ ಮಸೀದಿಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಧ್ವನಿವರ್ಧಕ ತೆಗೆಯುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ನಾಯಕ ರಾಜ್ ಠಾಕ್ರೆ ಆರಂಭಿಸಿರುವ ಅಭಿಯಾನ ಮತ್ತಷ್ಟುತೀವ್ರತೆ ಪಡೆದುಕೊಂಡಿದೆ. ಮೈಕ್ ತೆಗೆಯಲು ರಾಜ್ಯ ಸರ್ಕಾರಕ್ಕೆ ನೀಡಿದ್ದ ಗಡುವು ಮಂಗಳವಾರಕ್ಕೆ ಮುಗಿದ ಬೆನ್ನಲ್ಲೇ, ಬುಧವಾರ ಬೆಳಗ್ಗೆಯಿಂದಲೇ ರಾಜ್ಯದ ಹಲವೆಡೆ ಮಸೀದಿಗಳ ಮುಂದೆ ಎಂಎನ್‌ಎಸ್ ಕಾರ್ಯಕರ್ತರು ಮೈಕ್‌ಗಳ ಮೂಲಕ ಹನುಮಾನ್ ಚಾಲೀಸಾ ಪ್ರಸಾರ ಮಾಡಿದ್ದಾರೆ.
ಇದರೊಂದಿಗೆ ರಾಜ್‌ಠಾಕ್ರೆ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ಸಂಘರ್ಷ ಮತ್ತೊಂದು ಮಜಲು ತಲುಪಿದೆ. ಮತ್ತೊಂದೆಡೆ ರಾಜ್ ಠಾಕ್ರೆ ಎಚ್ಚರಿಕೆ ಬೆನ್ನಲ್ಲೇ ರಾಜ್ಯದ ಹಲವು ಕಡೆಗಳಲ್ಲಿ ಮುಂಜಾನೆಯ ಆಜಾನ್ ಕೂಗುವಿಕೆಯನ್ನು ಮಸೀದಿಗಳು ನಿಲ್ಲಿಸಿವೆ ಎಂದು ವರದಿಗಳು ಹೇಳಿವೆ.
ಹನುಮಾನ್ ಚಾಲೀಸಾ ಪ್ರಸಾರ:
ರಾಜ್ಯದ ಹಲವು ಮಸೀದಿಗಳಲ್ಲಿ ಬುಧವಾರ ಆಜಾನ್ ಅನ್ನು ಧ್ವನಿರ್ವರ್ಧಕ ಬಳಸಿ ಕೂಗಲಾಗಿದೆ. ಇದರ ವಿರುದ್ಧ ಎಂಎನ್‌ಎಸ್ ಹೋರಾಟ ಆರಂಭಿಸಿದ್ದು, ಧ್ವನಿವರ್ಧಕ ಬಳಸಿ ಹನುಮಾನ್ ಚಾಲೀಸಾ ಪಠಣಕ್ಕೆ ಕಾರ್ಯಕರ್ತರು ಯತ್ನಿಸಿದ್ದಾರೆ. ಇಂಥ ಸುಮಾರು 250 ಎಂಎನ್‌ಎಸ್ ಕಾರ್ಯಕರ್ತರನ್ನು ಮಹಾರಾಷ್ಟ್ರದ ವಿವಿಧೆಡೆ ಬಂಧಿಸಲಾಗಿದೆ. ಮಸೀದಿಗಳಿಗೆ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ.
ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿರುವ ಠಾಕ್ರೆ, ‘ನನ್ನ ಮೇ 4ರ ಗಡುವು ಮುಗಿದಿದೆ. ಸರ್ಕಾರ ಗಡುವು ಪಾಲಿಸಿಲ್ಲ. ಹೀಗಾಗಿ ಎಲ್ಲಿ ಆಜಾನ್ ಕೂಗಲಾಗುತ್ತದೋ ಅಲ್ಲಿ, ಹನುಮಾನ್ ಚಾಲೀಸಾ ಪಠಿಸಲಾಗುತ್ತದೆ. ಶೇ.90-92ರಷ್ಟುಮಸೀದಿಗಳು ನನ್ನ ಕರೆಯ ಬಳಿಕ ಲೌಡ್‌ಸ್ಪೀಕರ್ ಬಳಕೆ ನಿಲ್ಲಿಸಿವೆ. ಆದರೂ ನಮ್ಮ ಅಮಾಯಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ನಿಯಮ ಉಲ್ಲಂಘಿಸಿದವರು ಆರಾಮಾಗಿ ತಿರುಗಾಡಿಕೊಂಡಿದ್ದಾರೆ’ ಎಂದು ಟೀಕಿಸಿದರು.