ಇಂಡಿಯನ್‌ ಮುಜಾಹಿದೀನ್‌ ಹೊಸ ಅವತಾರ?| ಭಟ್ಕಳದಲ್ಲಿ ಸ್ಥಾಪನೆಯಾದ ಕುಖ್ಯಾತ ಭಯೋತ್ಪಾದಕ ಸಂಘಟನೆ ಈಗ ಜೈಷ್‌ ಉಲ್‌ ಹಿಂದ್‌ ಹೆಸರಿನಲ್ಲಿ ಕಾರ್ಯಾಚರಣೆ?| ಅಂಬಾನಿ ಮನೆ ಮುಂದೆ ‘ಬಾಂಬ್‌ ಕಾರು’ ನಿಲ್ಲಿಸಿದ್ದು ಇದೇ ಸಂಘಟನೆ: ಶಂಕೆ| ಪತ್ತೆಗೆ ಎನ್‌ಐಎ, ಮುಂಬೈ, ದಿಲ್ಲಿ ಪೊಲೀಸ್‌ ತನಿಖೆ

ನವದೆಹಲಿ(ಮಾ.14): ಕರ್ನಾಟಕದ ಕರಾವಳಿ ಪಟ್ಟಣ ಭಟ್ಕಳದಲ್ಲಿ ಸ್ಥಾಪನೆಯಾಗಿ ದೇಶದಲ್ಲಿ ಹಲವು ವಿಧ್ವಂಸಕ ಕೃತ್ಯಗಳನ್ನು ಎಸಗಿ ಪೊಲೀಸರ ಕಾರ್ಯಾಚರಣೆ ಬಳಿಕ ಬಹುತೇಕ ಸ್ತಬ್ಧವಾಗಿರುವ ಇಂಡಿಯನ್‌ ಮುಜಾಹಿದೀನ್‌(ಐಎಂ) ಉಗ್ರ ಸಂಘಟನೆ ಹೊಸ ಅವತಾರ ಎತ್ತಿದೆಯೇ? ಭದ್ರತಾ ಸಿಬ್ಬಂದಿಗೆ ಇಂತಹದ್ದೊಂದು ಅನುಮಾನ ಇದೀಗ ಬರತೊಡಗಿದ್ದು, ಖಚಿತಪಡಿಸಿಕೊಳ್ಳಲು ತೀವ್ರ ತನಿಖೆ ಆರಂಭಿಸಿದೆ.

ಜ.29ರಂದು ದೆಹಲಿಯ ಇಸ್ರೇಲಿ ರಾಯಭಾರ ಕಚೇರಿಯ ಹೊರಗೆ ಕಾರೊಂದರಲ್ಲಿ ಸಣ್ಣ ಸ್ಫೋಟ ಸಂಭವಿಸಿತ್ತು. ಫೆ.25ರಂದು ಉದ್ಯಮಿ ಮುಕೇಶ್‌ ಅಂಬಾನಿ ಅವರ ಮುಂಬೈ ನಿವಾಸದ ಹೊರಗೆ ನಿಂತಿದ್ದ ಕಾರೊಂದರಲ್ಲಿ ಸ್ಫೋಟಕಗಳು ಸಿಕ್ಕಿದ್ದವು. ಈ ಎರಡೂ ಘಟನೆಗಳ ಹೊಣೆಯನ್ನು ಜೈಷ್‌ ಉಲ್‌ ಹಿಂದ್‌ ಎಂಬ ಅಪರಿಚಿತ ಸಂಘಟನೆ ಹೊತ್ತುಕೊಂಡಿದೆ. ಈ ಸಂಘಟನೆ ಇಂಡಿಯನ್‌ ಮುಜಾಹಿದೀನ್‌ನ ಹೊಸ ರೂಪ ಇರಬಹುದು ಎಂಬುದು ತನಿಖಾಧಿಕಾರಿಗಳ ಅನುಮಾನ.

ಇಂಡಿಯನ್‌ ಮುಜಾಹಿದೀನ್‌ ಹಾಗೂ ಅಲ್‌ಖೈದಾ ಉಗ್ರರು ದೆಹಲಿಯ ತಿಹಾರ್‌ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಒಂದೋ ಅವರೇ ಈ ಹೊಸ ಸಂಘಟನೆ ಸೃಷ್ಟಿಸಿರಬಹುದು ಅಥವಾ ಜೈಲಿನಿಂದ ಹೊರಗೆ ಈ ಸಂಘಟನೆ ರಚನೆಯಾಗಿರಬಹುದು. ಇಂಡಿಯನ್‌ ಮುಜಾಹಿದೀನ್‌ಗೆ ರಹಸ್ಯವಾಗಿ ಬೆಂಬಲ ನೀಡುತ್ತಿರುವವರು ಈ ಸಂಘಟನೆಯ ಜತೆ ನಿಂತಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಈ ಅನುಮಾನಕ್ಕೆ ಪ್ರಮುಖ ಕಾರಣ, ತಿಹಾರ್‌ ಜೈಲಿನಲ್ಲಿ ಮೊಬೈಲ್‌ ಫೋನ್‌ ಪತ್ತೆಯಾದ ಪ್ರಕರಣ. ಜೈಲಿನಲ್ಲಿರುವ ಇಂಡಿಯನ್‌ ಮುಜಾಹಿದೀನ್‌ ಉಗ್ರ ತೆಹಸೀನ್‌ ಅಖ್ತರ್‌ ಎಂಬಾತನ ಬಳಿ ಎರಡು ಮೊಬೈಲ್‌ ಫೋನ್‌ಗಳು ಪತ್ತೆಯಾಗಿದ್ದವು. ಅಂಬಾನಿ ಮನೆ ಹೊರಗೆ ಸ್ಫೋಟಕ ತುಂಬಿದ್ದ ಕಾರು ನಿಲ್ಲಿಸಿದ ಪ್ರಕರಣದ ಹೊಣೆಯನ್ನು ಹೊತ್ತುಕೊಂಡು ಜೈಷ್‌ ಉಲ್‌ ಹಿಂದ್‌ ಸಂಘಟನೆ ಕಳುಹಿಸಿದ್ದ ಟೆಲಿಗ್ರಾಂ ಸಂದೇಶ ಆ ಮೊಬೈಲ್‌ಗಳಿಂದಲೇ ರವಾನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಜೈಷ್‌ ಉಲ್‌ ಹಿಂದ್‌ ಹಾಗೂ ಇಂಡಿಯನ್‌ ಮುಜಾಹಿದೀನ್‌ ನಡುವೆ ಇರುವ ಸಂಬಂಧ ಪತ್ತೆಗೆ ದೇಶಾದ್ಯಂತ ತನಿಖೆ ನಡೆಸುತ್ತಿದೆ. ಇದರ ಜತೆಗೆ ದೆಹಲಿ ಪೊಲೀಸರ ವಿಶೇಷ ಘಟಕ ಹಾಗೂ ಮುಂಬೈನ ಎಟಿಎಸ್‌ ಕೂಡ ಎರಡು ಡಜನ್‌ ಅಧಿಕಾರಿಗಳನ್ನು ಈ ಕಾರ್ಯಕ್ಕೆ ನಿಯೋಜನೆಗೊಳಿಸಿವೆ.

ಐಎಂ ಉಗ್ರು ನಿಷ್ಕಿ್ರಯ, ಜೆಯುಎಚ್‌ ಸಕ್ರಿಯ

ಇಂಡಿಯನ್‌ ಮುಜಾಹಿದೀನ್‌ನ ಅನೇಕ ಉಗ್ರರು ಈಗ ಜೈಲಿನಲ್ಲಿದ್ದಾರೆ. ಹೀಗಾಗಿ ಅವರ ಸಂಘಟನೆ ನಿಷ್ಕಿ್ರಯವಾಗಿದೆ. ಅದರಲ್ಲೇ ಅಳಿದುಳಿದವರು ಜೈಷ್‌ ಉಲ್‌ ಹಿಂದ್‌ ಹೆಸರಿನಲ್ಲಿ ಸಂಘಟಿತರಾಗಿ ಹೊಸ ರೂಪದಲ್ಲಿ ಕಾರಾರ‍ಯಚರಣೆ ಆರಂಭಿಸಿದ್ದಾರೆ ಎಂಬ ಶಂಕೆಯಿದೆ.

ಜೈಲಿಂದಲೇ ಟೆಲಿಗ್ರಾಂ ಸಂದೇಶ ರವಾನೆ

ದೆಹಲಿಯ ತಿಹಾರ್‌ ಜೈಲಿನಲ್ಲಿ ಐಎಂ ಉಗ್ರ ತೆಹ್ಸೀನ್‌ ಅಖ್ತರ್‌ ಎಂಬಾತ ಶಿಕ್ಷೆ ಅನುಭವಿಸುತ್ತಿದ್ದಾನೆ. ಅಂಬಾನಿ ಮನೆ ಮುಂದೆ ನಾವೇ ಬಾಂಬ್‌ ಇರಿಸಿದ್ದು ಎಂದು ಹೇಳಿಕೊಂಡು ಜೆಯುಎಚ್‌ ಹೆಸರಿನಲ್ಲಿ ಈತ ತನ್ನ ಮೊಬೈಲ್‌ನಿಂದ ಟೆಲಿಗ್ರಾಂ ಸಂದೇಶ ಕಳುಹಿಸಿದ್ದ.

ಈ ಅನುಮಾನಕ್ಕೆ ಕಾರಣ ಏನು?

- ಜ.29ರಂದು ದೆಹಲಿಯ ಇಸ್ರೇಲಿ ರಾಯಭಾರ ಕಚೇರಿ ಹೊರಗೆ ಸ್ಫೋಟ; ಇದರ ಹೊಣೆ ಹೊತ್ತ ಜೈಷ್‌ ಉಲ್‌ ಹಿಂದ್‌

- ಅಂಬಾನಿ ಮನೆ ಹೊರಗೆ ಬಾಂಬ್‌ ಇದ್ದ ಕಾರು ನಿಲ್ಲಿಸಿದ ಪ್ರಕರಣದ ಹೊಣೆ ಹೊತ್ತಿದ್ದೂ ಜೈಷ್‌ ಉಲ್‌ ಹಿಂದ್‌

- ಹೊಣೆ ಹೊತ್ತ ಸಂದೇಶ ರವಾನೆ ಆದ ಮೊಬೈಲ್‌ ಸಿಕ್ಕಿದ್ದು ತಿಹಾರ್‌ ಜೈಲಲ್ಲಿರುವ ಇಂಡಿಯನ್‌ ಮುಜಾಹಿದೀನ್‌ ಉಗ್ರ ತೆಹ್ಸೀನ್‌ ಬಳಿ

- ಹೀಗಾಗಿ ಜೈಷ್‌ ಉಲ್‌ ಹಿಂದ್‌ ಸಂಘಟನೆ, ‘ಇಂಡಿಯನ್‌ ಮುಜಾಹಿದೀನ್‌’ನ ಹೊಸ ಅವತಾರ ಎಂಬ ಶಂಕೆ ಪೊಲೀಸರಿಗೆ