IRCTC ತನ್ನ 'ನೆಕ್ಸ್ಟ್ ಜನರೇಷನ್ ಇ-ಟಿಕೆಟಿಂಗ್' ವ್ಯವಸ್ಥೆಯನ್ನು ನವೀಕರಿಸುತ್ತಿದ್ದು, ತತ್ಕಾಲ್ ಬುಕಿಂಗ್ ಸಮಯದಲ್ಲಿ ಆಗುವ ಸರ್ವರ್ ಕ್ರ್ಯಾಶ್ ಮತ್ತು ನಿಧಾನಗತಿಯನ್ನು ತಡೆಯಲಿದೆ. ಈ ನವೀಕರಣವು ಬುಕಿಂಗ್ ಸಾಮರ್ಥ್ಯವನ್ನು ನಿಮಿಷಕ್ಕೆ 1 ಲಕ್ಷ ಟಿಕೆಟ್‌ಗಳಿಗೆ ಹೆಚ್ಚಿಸಲಿದ್ದು, ಅನಗತ್ಯ ಕ್ಯಾಪ್ಚಾಗಳನ್ನು ತೆಗೆದುಹಾಕಿ, ಸರಳ ಮತ್ತು ವೇಗದ ಬುಕಿಂಗ್ ಅನುಭವವನ್ನು ನೀಡಲಿದೆ.

ನವದೆಹಲಿ: ಭಾರತೀಯ ರೈಲ್ವೇಯ ಆನ್‌ಲೈನ್ ಟಿಕೆಟ್ ಬುಕಿಂಗ್ ತಾಣವಾದ IRCTC (ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ) ತನ್ನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆಧುನೀಕರಿಸಲು ಸಜ್ಜಾಗಿದೆ. ತತ್ಕಾಲ್ ಹಾಗೂ ಸಾಮಾನ್ಯ ಮುಂಗಡ ಬುಕಿಂಗ್ ಸಮಯದಲ್ಲಿ ಎದುರಾಗುವ ಸರ್ವರ್ ಕ್ರ್ಯಾಶ್, ವೆಬ್‌ಸೈಟ್ ನಿಧಾನಗತಿ ಮತ್ತು ಲಾಗ್‌ಇನ್ ಅಡಚಣೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು IRCTC ತನ್ನ 'ನೆಕ್ಸ್ಟ್ ಜನರೇಷನ್ ಇ-ಟಿಕೆಟಿಂಗ್' (NGET) ವ್ಯವಸ್ಥೆಯನ್ನು ಭಾರಿ ವೆಚ್ಚದಲ್ಲಿ ನವೀಕರಿಸುತ್ತಿದೆ.

ಏಕೆ ಈ ಬದಲಾವಣೆ?

ಪ್ರಸ್ತುತ ದೇಶದಲ್ಲಿ ಶೇಕಡಾ 89 ರಷ್ಟು ಕಾಯ್ದಿರಿಸಿದ (Reserved) ರೈಲು ಟಿಕೆಟ್‌ಗಳು ಆನ್‌ಲೈನ್ ಮೂಲಕವೇ ಬುಕ್ ಆಗುತ್ತಿವೆ. ಕಳೆದ ಒಂದು ವರ್ಷದಲ್ಲೇ 57.90 ಕೋಟಿಗೂ ಅಧಿಕ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಮಾರಾಟವಾಗಿವೆ. ಪ್ರತಿದಿನ ಬೆಳಿಗ್ಗೆ 8, 10 ಮತ್ತು 11 ಗಂಟೆಯ ತತ್ಕಾಲ್/ಮುಂಗಡ ಬುಕಿಂಗ್‌ನ ಪೀಕ್ ಸಮಯದಲ್ಲಿ ಕೋಟ್ಯಂತರ ಬಳಕೆದಾರರು ಒಮ್ಮೆಗೆ ಲಾಗ್‌ಇನ್ ಆಗುವುದರಿಂದ ವೆಬ್‌ಸೈಟ್ ಅಡಚಣೆ ಉಂಟಾಗುತ್ತಿತ್ತು. ಇದನ್ನು ತಡೆಯಲು ಈ ನವೀಕರಣ ಕೈಗೊಳ್ಳಲಾಗಿದೆ.

IRCTC ಈ ಯೋಜನೆಗಾಗಿ ಸುಮಾರು ₹150 ಕೋಟಿ ವೆಚ್ಚ ಮಾಡುತ್ತಿದ್ದು, ಮುಖ್ಯವಾಗಿ ಎರಡು ಪ್ರಮುಖ ತಾಂತ್ರಿಕ ಬದಲಾವಣೆಗಳನ್ನು ತರುತ್ತಿದೆ. ಪ್ರಸ್ತುತ ನಿಮಿಷಕ್ಕೆ 37,000 ಟಿಕೆಟ್ ಬುಕ್ ಮಾಡುವ ಸಾಮರ್ಥ್ಯವಿದ್ದು, ಹಾರ್ಡ್‌ವೇರ್, ಸರ್ವರ್, ನೆಟ್‌ವರ್ಕಿಂಗ್ ಹಾಗೂ ಸಾಫ್ಟ್‌ವೇರ್ ಅಪ್‌ಗ್ರೇಡ್ ಮೂಲಕ ಇದನ್ನು ನಿಮಿಷಕ್ಕೆ 1 ಲಕ್ಷಕ್ಕೂ ಅಧಿಕ ಟಿಕೆಟ್‌ಗಳಿಗೆ ಹೆಚ್ಚಿಸಲಾಗುತ್ತಿದೆ. ಸರ್ವರ್ ತಾಂತ್ರಿಕ ದೋಷದಿಂದ ವೆಬ್‌ಸೈಟ್ ಸ್ಥಗಿತಗೊಂಡರೆ, ತಕ್ಷಣವೇ ಚಾಲನೆಗೆ ಬರುವ 'ಆಕ್ಟಿವ್-ಆಕ್ಟಿವ್ ಡಿಸಾಸ್ಟರ್ ರಿಕವರಿ' ಬ್ಯಾಕಪ್ ವ್ಯವಸ್ಥೆಯನ್ನು ತೆಲಂಗಾಣದ ಸಿಕಂದರಾಬಾದ್‌ ನಲ್ಲಿ ಸ್ಥಾಪಿಸಲಾಗುತ್ತಿದೆ. ಜೈಪುರದ MNIT ವಿದ್ಯಾರ್ಥಿಗಳು ನೀಡಿದ ಸಲಹೆಗಳ ಆಧಾರದ ಮೇಲೆ ರೈಲ್ವೇ ಸಚಿವಾಲಯವು ವೆಬ್‌ಸೈಟ್‌ನ ನೂತನ ‘ಬೀಟಾ’ (Beta) ಆವೃತ್ತಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ಪ್ರಯಾಣಿಕರಿಗೆ 4 ಪ್ರಮುಖ ಅನುಕೂಲಗಳು ಸಿಗಲಿವೆ.

ಬುಕಿಂಗ್ ವೇಳೆ ಕಿರಿಕಿರಿ ಉಂಟುಮಾಡುತ್ತಿದ್ದ ಅನಗತ್ಯ ಕ್ಯಾಪ್ಚಾ (Captcha), ಪಾಪ್-ಅಪ್ ಹಾಗೂ ಮಿನುಗುವ ಗ್ರಾಫಿಕ್ಸ್‌ಗಳನ್ನು ತೆಗೆದುಹಾಕಲಾಗಿದೆ. ಎಲ್ಲಾ ತರಗತಿಗಳ (Sleeper, AC, 3E ಇತ್ಯಾದಿ) ಸೀಟು ಲಭ್ಯತೆಯನ್ನು ಒಂದೇ ಪರದೆಯ ಮೇಲೆ ವೀಕ್ಷಿಸಬಹುದು. ಸರಳ ಹಾಗೂ ವೇಗದ ಬುಕಿಂಗ್ , ಕೆಲವೇ ಕ್ಲಿಕ್‌ಗಳಲ್ಲಿ ಟಿಕೆಟ್ ಬುಕಿಂಗ್ ಪೂರ್ಣಗೊಳಿಸಬಹುದು. ಪದೇ ಪದೇ ವಿವರಗಳನ್ನು ನಮೂದಿಸುವುದನ್ನು ತಪ್ಪಿಸಲು ಪ್ರಯಾಣಿಕರ ಮಾಹಿತಿಯನ್ನು ಮುಂಚಿತವಾಗಿಯೇ ಸೇವ್ (Master List) ಮಾಡುವ ವೈಶಿಷ್ಟ್ಯ ನೀಡಲಾಗಿದೆ.

ಈ ನೂತನ ತಾಂತ್ರಿಕ ಬದಲಾವಣೆಗಳಿಂದಾಗಿ ಮುಂದಿನ ದಿನಗಳಲ್ಲಿ ಪ್ರಯಾಣಿಕರು ಯಾವುದೇ ಅಡಚಣೆಯಿಲ್ಲದೆ ವೇಗವಾಗಿ ಮತ್ತು ಸುಲಭವಾಗಿ ತತ್ಕಾಲ್ ಹಾಗೂ ಸಾಮಾನ್ಯ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗಲಿದೆ.